ಮೈಸೂರು

ಖಾಲಿ ಚೆಕ್: ಮೂವರ ವಿರುದ್ಧ ಮೊಕದ್ದಮೆ

Published On :

ಬೈಲುಕುಪ್ಪೆ: ಗ್ರಾಹಕರಿಂದ ಖಾಲಿ ಚೆಕ್ ಪಡೆದ ಸ್ವಸ್ತಿಕ್ ಫೈನಾನ್ಸ್ ಪಾಲುದಾರ ಹಾಗೂ ಹಾಲಿ ಗ್ರಾಪಂ ಸದಸ್ಯರಾದ ಎಂ.ಬಿ. ಶಿವಸ್ವಾಮಿ, ಬಿ.ಎಸ್. ಸುರೇಶ್ ಮತ್ತು ಸುರೇಶ್ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ. ಕೊಪ್ಪ ಗ್ರಾಮದ ಸ್ವಸ್ತಿಕ್ ಫೈನಾನ್ಸ್ನ ಪಾಲುದಾರರಾದ ಈ ಮೂವರು ಫೈನಾನ್ಸ್ ನಡೆಸುತ್ತಿದ್ದ ವೇಳೆ, ಕೆ.ಜೆ. ದೇವರಾಜ್ ಅವರಿಂದ ಸಾಲ ನೀಡಲು ಖಾಲಿ ಚೆಕ್ ಪಡೆದಿದ್ದರು. ಸಾಲ ತೀರಿಸಿದಾಗ ಚೆಕ್ಅನ್ನು ವಾಪಸ್ ಕೇಳಿದಾಗ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿ, ಇವರು ನೀಡಿದ ಖಾಲಿ ಚೆಕ್ಅನ್ನು ಇನ್ನೊಬ್ಬರಿಗೆ ನೀಡಿ ಹಣ ಪಡೆದಿದ್ದರು. ಈ ಆರೋಪದ ಮೇಲೆ ಇವರ ವಿರುದ್ಧ 2013ರ ಮೇ 14 ರಂದು ದಸಂಸ ವತಿಯಿಂದ ಫೈನಾನ್ಸ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸುದ್ದಿ ತಿಳಿದ ಹುಣಸೂರಿನ ಡಿವೈಎಸ್ಪಿ ಮುದ್ದುಮಹದೇವಯ್ಯ, ಸರ್ಕಲ್ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ್ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ನು ಮನವೊಲಿಸಿ ಸ್ವಸ್ತಿಕ್ ಫೈನಾನ್ಸ್ ಪಾಲುದಾರರನ್ನು ರಾಜಿ ಸಂಧಾನಕ್ಕೆ ಆಹ್ವಾನಿಸಲಾಗಿತ್ತು. ಇವರು  ಇದುವರೆಗೂ ರಾಜಿ ಸಂಧಾನಕ್ಕೆ ಬಾರದೆ ಇದ್ದ ಕಾರಣ ಬೈಲಕುಪ್ಪೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.


ಮಣಿಪಾಲ ಅತ್ಯಾಚಾರ ಪ್ರಕರಣ: ಎಸ್ಎಫ್ಐ ಪ್ರತಿಭಟನೆ
ಹುಣಸೂರು: ಉಡುಪಿಯ ಮಣಿಪಾಲದಲ್ಲಿ ವೈದ್ಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಖಂಡಿಸಿ ತಾಲೂಕು ಎಸ್ಎಫ್ಐ ಸಂಘಟನೆ ಸದಸ್ಯರು ಶನಿವಾರ ಪ್ರತಿಭಟಿಸಿದರು.
ಇಲ್ಲಿನ ಬಸ್ ನಿಲ್ದಾಣದ ಎದುರು ನಡೆದ ಪ್ರತಿಭಟನೆಯಲ್ಲಿ ಮಹೇಶಕುಮಾರ್ ಮಾತನಾಡಿ, ಇತ್ತೀಚೆಗೆ ದೆಹಲಿಯಲ್ಲಿ ನಡೆದ ಅತ್ಯಾಚಾರ ಪ್ರಕರಣ ಜನಮಾನಸದಲ್ಲಿ ಮಾಸುವ ಮುನ್ನವೆ ಉಡುಪಿಯಲ್ಲಿ ಘಟನೆ ಮರುಕಳಿಸಿದೆ. ಪದೇ ಪದೇ ವಿದ್ಯಾರ್ಥಿನಿಯರ ಮೇಲೆ ನಡೆಯುತ್ತಿರುವ ಈ ದೌರ್ಜನ್ಯ ಸಾತ್ವಿಕ ಸಮಾಜಕ್ಕೆ ಕಳಂಕಪ್ರಾಯವಾಗಿದೆ. ಸರ್ಕಾರ ಕೂಡಲೆ ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹಾಗೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ ಎಲ್ಲ ಶಾಲಾ ಕಾಲೇಜುಗಳಲ್ಲೂ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸುವಂತೆ ಆಗ್ರಹಿಸಿದರು.
ತಾಲೂಕು ಜಂಟಿ ಕಾರ್ಯದರ್ಶಿ ರಂಜಿತಾ, ಸದಸ್ಯರಾದ ಮಂಜುಳಾ, ವಿನೋದ್, ಅಂಜುಶ್ರೀ, ಪವನಕುಮಾರ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.