ಕಟ್ಟಡ ನಿರ್ಮಾಣವಾದರೂ ಆಗದ ಉದ್ಘಾಟನೆ
ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಜೂ. 23
ನಗರದ ಹಲವು ಗ್ರಂಥಾಲಯಗಳಿಗೆ ಕಟ್ಟಡ ಇಲ್ಲದೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದರೆ, ಎರಡು ಕಡೆ ಕಟ್ಟಡವಿದ್ದರೂ ಗ್ರಂಥಾಲಯ ಉದ್ಘಾಟನೆಗೊಳ್ಳುವ ಸೌಭಾಗ್ಯವಿಲ್ಲ.
ನಗರ ಪಾಲಿಕೆಯ ವಾರ್ಡ್ ನಂ. 16ಕ್ಕೆ ಸೇರಿದ ಉದ್ಯಾನವನದ ಆವರಣದಲ್ಲಿ ಗ್ರಂಥಾಲಯ ಕಟ್ಟಡವೊಂದು ನಿರ್ಮಾಣವಾಗಿದೆ. ಆಂದೋಲನ ವೃತ್ತ ಸಮೀಪದ ಕೆನರಾ ಬ್ಯಾಂಕ್ ರಸ್ತೆಯ ಉದ್ಯಾನದಲ್ಲಿರುವ ವಿನೂತನವಾದ ಈ ಗ್ರಂಥಾಲಯ ಉದ್ಘಾಟನೆಗೊಂಡು ಈಗಾಗಲೇ ಕಾರ್ಯ ನಿರ್ವಹಿಸಬೇಕಿತ್ತು. ಕಳೆದ ಆರು ತಿಂಗಳಲ್ಲಿಯೆ ಕಟ್ಟಡ ಕಾಮಗಾರಿ ಪೂರ್ಣಗೊಂಡಿತ್ತು. ಆದರೆ, ಗ್ರಂಥಾಲಯ ಕಚೇರಿ ಉದ್ಘಾಟನೆಗೆ ಸಿದ್ಧವಾಗುವಷ್ಟರಲ್ಲಿ ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಯಿತು.
ಪಾಲಿಕೆ ಚುನಾವಣೆ ಮುಗಿದು ಕಟ್ಟಡ ಉದ್ಘಾಟಿಸಲು ಮತ್ತು ಸರ್ಕಾರದ ಅನೇಕ ಕಾಮಗಾರಿಗೆ ಚಾಲನೆ ನೀಡಲು ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಒಪ್ಪಿಗೆ ನೀಡಿದ್ದರು. ಮಾತ್ರವಲ್ಲ, ದಿನಾಂಕ ಸಹ ನಿಗದಿಪಡಿಸಿದ್ದರು. ಈ ಕಾರ್ಯಕ್ರಮ ನಡೆಯುವ ಹಿಂದಿನ ದಿನ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಯಿತು. ಈ ಎಲ್ಲಾ ಕಾರಣದಿಂದ ರಾಮಕೃಷ್ಣ ನಗರದ ಗ್ರಂಥಾಲಯ ಕಾಮಗಾರಿ ಇದುವರೆಗೂ ಉದ್ಘಾಟನೆಗೊಂಡಿಲ್ಲ.
ಸುಸಜ್ಜಿತ ಹಾಗೂ ಪ್ರಶಾಂತವಾದ ವಾತಾವರಣದಲ್ಲಿರುವ ಈ ಗ್ರಂಥಾಲಯ ಕಟ್ಟಡಕ್ಕೆ ಪೀಠೋಪಕರಣ ಸ್ಥಳಾಂತರಿಸಲಾಗಿದೆ. 15 ಲಕ್ಷ ವೆಚ್ಚದಲ್ಲಿ ಇಲ್ಲಿನ ಸ್ಥಳೀಯ ಪಾಲಿಕೆ ಸದಸ್ಯ ಎಂ.ಕೆ. ಶಂಕರ್ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದರು. ಈ ಹಿಂದಿನ ಬಾಡಿಗೆ ಕಟ್ಟಡದಿಂದ ಪುಸ್ತಕ ಮತ್ತು ಪೀಠೋಪಕರಣವನ್ನು ಇಲ್ಲಿಗೆ ತರಲಾಗಿದೆ. ಇನ್ನೇನಿದ್ದರು ಗ್ರಂಥಾಲಯ ಕಟ್ಟಡ ಉದ್ಘಾಟನೆಗೊಳ್ಳಬೇಕಷ್ಟೆ. ಈಗಿನ ಸಚಿವರು, ಶಾಸಕರು, ಸಂಸದರೆಲ್ಲ ಒತ್ತಡದಲ್ಲಿದ್ದಾರೆ. ಅವರು ಉದ್ಘಾಟನೆಗೆ ದಿನಾಂಕ ನೀಡಿ ಉದ್ಘಾಟಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂಬುದು ಶಂಕರ್ ಅವರ ಅರಿವಿಗೆ ಬಂದಿದೆ. ಆದ್ದರಿಂದ ಜೂನ್ ಅಂತ್ಯದೊಳಗೆ ಗ್ರಂಥಾಲಯವನ್ನು ಸಾರ್ವಜನಿಕ ಉಪಯೋಗಕ್ಕೆ ಮುಕ್ತಗೊಳಿಸುವುದಾಗಿ ಶಂಕರ್ ತಿಳಿಸಿದ್ದಾರೆ.
ಇನ್ನು ಶಾರದಾದೇವಿ ನಗರ ವೃತ್ತ ಸಮೀಪ ಮಹಾನಗರ ಪಾಲಿಕೆ ನಿರ್ಮಿಸಿರುವ ವ್ಯಾಯಾಮ ಶಾಲೆ ಕಟ್ಟದ ಮೊದಲ ಮಹಡಿಯಲ್ಲಿ ಗ್ರಂಥಾಲಯ ಮಾಡಬೇಕು ಎಂಬ ಉದ್ದೇಶ ಇತ್ತು. ಆದರೆ, ಕಟ್ಟಡ ನಿರ್ಮಾಣವಾಗಿ ವರ್ಷಗಳೆ ಕಳೆದರೂ ಗ್ರಂಥಾಲಯದ ಉಸಿರೂ ಇಲ್ಲ. ಈ ಬಗ್ಗೆ ನಗರ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕರು ಸ್ಥಳೀಯ ಪಾಲಿಕೆ ಸದಸ್ಯರು ಮನವಿ ನೀಡಿದರೆ ಗ್ರಂಥಾಲಯ ತೆರೆಯಲು ನಾವು ಸಿದ್ಧರಿರುವುದಾಗಿ ತಿಳಿಸಿದ್ದಾರೆ. ಈಗಷ್ಟೆ ಹೊಸದಾಗಿ ಪಾಲಿಕೆ ಸದಸ್ಯರಾಗಿರುವ ಜಗದೀಶ್ ಈ ಬಗ್ಗೆ ಉತ್ಸುಕರಾಗಿದ್ದು, ಶಾರದಾದೇವಿನಗರ ಅಥವಾ ನಿವೇದಿತ ನಗರದಲ್ಲಿ ಗ್ರಂಥಾಲಯ ತೆರೆಯುವ ಉದ್ದೇಶ ಹೊಂದಿದ್ದಾರೆ.
ಶಾರದಾದೇವಿನಗರ ಮತ್ತು ರಾಮಕೃಷ್ಣ ನಗರದಲ್ಲಿ ಸುಸಜ್ಜಿತ ಕಟ್ಟಡ ಇದ್ದರೂ ಗ್ರಂಥಾಲಯ ಇಲ್ಲ. ಈ ಭಾಗದಲ್ಲಿ ಸಾಕಷ್ಟು ಮಂದಿ ವಿದ್ಯಾವಂತರ ಸಂಖ್ಯೆ ಇರುವುದರಿಂದ ಇಲ್ಲಿ ಗ್ರಂಥಾಲಯ ತೆರೆದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ.
- ಎ.ವಿ. ರಾಮಕೃಷ್ಣ, ಸ್ಥಳೀಯ ನಿವಾಸಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

