ಮೈಸೂರು

ಸ್ಮಾರಕ ವಿವಾದ: ಸಮಿತಿ ರಚನೆಗೆ ಆಗ್ರಹ

Published On :

ಕ.ಪ್ರ.ವಾರ್ತೆ   ಮೈಸೂರು   ಜೂ. 23
ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಎನ್ಟಿಎಂಎಸ್ ಕನ್ನಡ ಶಾಲೆ ಜಾಗದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಿಸುವ ಸಂಬಂಧ ಉಂಟಾಗಿರುವ ವಿವಾದ ಬಗೆಹರಿಸಲು ಸರ್ಕಾರ ಸಮಿತಿ ರಚಿಸಿ ಕೂಲಂಕಷವಾಗಿ ಚರ್ಚಿಸುವಂತೆ ಸಾಮಾಜಿಕ ಕಾರ್ಯಕರ್ತ ವಸಂತಕುಮಾರ್ ಮೈಸೂರುಮಠ ಆಗ್ರಹಿಸಿದ್ದಾರೆ.
ಏಕೋ ಏನೋ, ವಿವೇಕ ಸ್ಮಾರಕದ ಬಗ್ಗೆ ಭುಗಿಲೆದ್ದಿರುವ ವಾದ- ವಿವಾದಗಳು ದಿನೇ ದಿನೇ ಅಸಹ್ಯಕರವಾದ ತಿರುವು ಪಡೆಯುತ್ತಿರುವುದನ್ನು ಗಮನಿಸಿದರೆ, ನಮ್ಮ ವಿವೇಕ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಉದ್ಭವ ಆಗಿದೆ. ಮೈಸೂರಿನ ಹಲವಾರು ಗಣ್ಯರು, ಬುದ್ಧಿಜೀವಿಗಳು, ಹೆಸರಾಂತ ಸಾಹಿತಿಗಳು, ಪತ್ರಕರ್ತರು ಆದಿಯಾಗಿ ಎಲ್ಲರೂ ತಮ್ಮದೇ ಆದ ವಾದಗಳನ್ನು ಪರವಾಗಿ ಮತ್ತು ವ್ಯತಿರಿಕ್ತವಾಗಿ ಬಿಂಬಿಸುತ್ತಿರುವುದು ಸಾಮಾನ್ಯ ಜನರಿಗೆ ಅಚ್ಚರಿಯನ್ನು ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.
ಎನ್ಟಿಎಂ ಶಾಲೆಯ ಕಟ್ಟಡದಲ್ಲಿ 17 ಕೊಠಡಿಗಳು ಇರುವುದು ಮತ್ತು ಅದರಲ್ಲಿ ಅಭ್ಯಸಿಸುತ್ತಿರುವುದು 26 ವಿದ್ಯಾರ್ಥಿಗಳು ಎನ್ನುವುದು. ಇದು ಒಂದು ವಿಪರ್ಯಾಸ. ಎಲ್ಲ ಕೊಠಡಿಗಳಲ್ಲೂ ಈ ವಿದ್ಯಾರ್ಥಿಗಳು ಏಕಕಾಲದಲ್ಲಿ ಇರಲು ಸಾಧ್ಯವಿಲ್ಲ. ಹಾಗಾದರೆ ಮಿಕ್ಕ ಕೊಠಡಿಗಳನ್ನು ಯಾರು- ಯಾರು ಹೇಗೆ ಹೇಗೆ ಉಪಯೋಗಿಸುತ್ತಿದ್ದಾರೆ ಎನ್ನುವುದು ಯಾರಿಗೂ ತಿಳಿದಿಲ್ಲದ ವಿಷಯ. ಜತೆಗೆ ಈ ಶಾಲೆಗೇ ಒಬ್ಬ ಮುಖ್ಯೋಪಾಧ್ಯಾಯ, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಅವರ ಕೈತುಂಬಾ ಕೆಲಸವಿತ್ತೆ, ಮುಂತಾದ ವಿಷಯಗಳು ಸಾರ್ವಜನಿಕರ ಮನಸ್ಸಿನಲ್ಲಿ ಸಂದೇಹ ಮೂಡಿಸುವುದು ಸಹಜ ಅನಿಸುತಿದೆ. ಇವುಗಳ ಬಗ್ಗೆ ಸರ್ಕಾರವು ತನಿಖೆ ಮಾಡುವುದೇ ಎಂದು ಕೇಳಿದ್ದಾರೆ.
ಪಾಳು ಬಿದ್ದು ಹಾಳಾಗಿ ಹೋಗುತ್ತಿದ್ದುದನ್ನು ಉದ್ಧಾರ ಮಾಡಿರುವುದು ಸರಿ ಅನಿಸಿದರೆ, ಅಂತೆಯೇ ಎನ್ಟಿಎಂ ಪಾಠಶಾಲೆಯಲ್ಲಿ ಕನ್ನಡ ಮಕ್ಕಳಿಗೆ ಪಾಠ ಮಾಡುವ ನೆಪದಲ್ಲಿ ಕಟ್ಟಡ ಉಳಿಸಿಕೊಳ್ಳಲು ಮತ್ತು ಅದನ್ನು ಬೇರೆ ಕಾರಣಗಳಿಗೆ ಉಪಯೋಗಿಸಿಕೊಳ್ಳುವ ಬದಲು, ಪಾರಂಪರಿಕ ನಗರಿ ಮೈಸೂರಿನಲ್ಲಿ ಮನುವಾದಿ ಅಲ್ಲದ ವಿವೇಕಾನಂದರ ಹೆಸರಿನಲ್ಲಿ 120 ವರ್ಷಗಳ ನಂತರವಾದರೂ ಒಂದು ಸ್ಮಾರಕ ನಿರ್ಮಾಣವಾಗಲಿ ಮತ್ತು ಅದೊಂದು ಸಾರ್ವಜನಿಕರ ಸೇವೆಗಾಗಿ ಮುಡುಪಾಗಿರಲಿ ಎಂದು ಆಶಿಸುವುದರಲ್ಲಿ ತಪ್ಪೇನಿಲ್ಲ ಅನಿಸುತಿದೆ ಎಂದಿದ್ದಾರೆ.
ಇವೆಲ್ಲವನ್ನೂ ಪರಿಗಣಿಸಿ ಸರ್ಕಾರವು ತಕ್ಷಣ ಒಂದು ಸಮಿತಿ ರಚಿಸಿ, ಅದರಲ್ಲಿ ರಾಜಕಾರಣಿಗಳು, ಸರ್ಕಾರಿ ಉನ್ನತ ಅಧಿಕಾರಿಗಳು, ಸಮಾಜದ ಗಣ್ಯ ವ್ಯಕ್ತಿಗಳು, ಕಾನೂನು ತಜ್ಞರು, ಸಾಹಿತಿಗಳು ಮುಂತಾದವರನ್ನು ಸೇರಿಸಿಕೊಂಡು ಸಾರ್ವಜನಿಕವಾಗಿ ಮುಕ್ತವಾಗಿ ಈ ವಿಷಯವನ್ನು ಗಮನಿಸಿ, ನಮ್ಮ ಹೆಮ್ಮೆಯ ಮೈಸೂರಿನ ಖ್ಯಾತಿಯನ್ನು ಉಳಿಸುವ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.