ಹೆತ್ತ ಕಂದಮ್ಮನನ್ನೇ ಕೊಂದ ಅಮ್ಮ!
ಕ.ಪ್ರ.ವಾರ್ತೆ ಮೈಸೂರು ಜೂ. 24-
ತನ್ನ ಇಪ್ಪತ್ತು ದಿನದ ಹೆಣ್ಣು ಮಗುವನ್ನು ಹತ್ಯೆ ಮಾಡಿ ನಾಲೆಗೆ ಎಸೆದು ಅಪಹರಣ ನಾಟಕವಾಡಿದ ತಾಯಿ ಮತ್ತು ಆಕೆಯ ಸಹೋದರನನ್ನು ಮೈಸೂರಿನ ಮಂಡಿ ಠಾಣೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಉದಯಗಿರಿ ಬಳಿಯ ಶಾಂತಿನಗರ ನಿವಾಸಿ ಫೈರೋಜ್ ಎಂಬವರ ಪತ್ನಿ ಸುಮಯಾ ಬಾನು (22) ಮತ್ತು ಆಕೆಯ ಸಹೋದರ ಇಮ್ರಾನ್ (27) ಬಂಧಿತ ಆರೋಪಿಗಳು. ಹೆಣ್ಣು ಮಗುವನ್ನು ನಾಲೆಗೆ ಎಸೆದು ಕೊಲೆ ಮಾಡಿದ್ದಕ್ಕೆ ಸುಮಯಾ ಬಾನುಳನ್ನು ಹಾಗೂ ಇದಕ್ಕೆ ಸಹಕರಿಸಿದ್ದ ಇಮ್ರಾನ್ನನ್ನು ಪೊಲೀಸರು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಮಗು ಕೊಂದ ತಾಯಿ: 20 ದಿನ ಮಗು ಜೋಯಾ ಖಾನುಂ ಹುಟ್ಟಿದ್ದ ದಿನದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದು, ಮಿಷನ್ ಆಸ್ಪತ್ರೆ ಮತ್ತು ಚಿತ್ರಾ ನರ್ಸಿಂಗ್ ಹೋಂಗಳಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೂ ಮಗುವಿನ ಆರೋಗ್ಯ ಸರಿಯಾಗಿಲ್ಲ. ಆಸ್ಪತ್ರೆ ವೆಚ್ಚಕ್ಕೆ ಪ್ರತಿದಿನ ಸಾವಿರಾರು ರು. ಬೇಕಾಗಿತ್ತು. ಮಗುವನ್ನು ಆಸ್ಪತ್ರೆ ಸೇರಿಸಿದ್ದರಿಂದ ಸಾಲ ಸಹ ಮಾಡಿದ್ದರು. ಸುಮಯಾಗೆ 3 ವರ್ಷದ ಗಂಡು ಮಗು ಸಹ ಇದೆ.
ಮತ್ತೊಂದೆಡೆ ಸುಮಯಾಳ ಪತಿ ಫೈರೋಜ್ 5-6 ಕಳವು ಪ್ರಕರಣಗಳ ಆರೋಪಿಯಾಗಿದ್ದು, 2-3 ಸಲ ಜೈಲಿಗೂ ಹೋಗಿದ್ದ. ಈ ವಿಚಾರವಾಗಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದ. ಇದರಿಂದ ಮನನೊಂದ ಸುಮಯಾ ತನ್ನ ಮಗು ಜೋಯಾ ಭವಿಷ್ಯದಲ್ಲಿ ಕಳಂಕಿತಳಾಗಬಹುದೆಂದು ಭಾವಿಸಿ ಸಾಯಿಸಲು ನಿರ್ಧರಿಸಿದ್ದಳು.
ಅದರಂತೆ ಗುರುವಾರ ರಾತ್ರಿ ಪತಿ ಮತ್ತು ಇಬ್ಬರು ಮಕ್ಕಳ ಜತೆ ಸುಮಯಾ ಆಟೋದಲ್ಲಿ ಅಶೋಕ ರಸ್ತೆಗೆ ಹೋದಳು. ಗಲ್ಲಿಯಲ್ಲಿ ಆಟೋ ನಿಲ್ಲಿಸಿ, ರಾಕೇಶ್ ಜುವೆಲ್ಲರಿಗೆ ತೆರಳಿ ಚಿನ್ನದ ಸರವನ್ನು ಗಿರವಿಯಿಟ್ಟು 40 ಸಾವಿರ ತೆಗೆದುಕೊಂಡಳು. ನಂತರ ತನ್ನ ಸಹೋದರ ಇಮ್ರಾನನ ಮೊಬೈಲ್ಗೆ ಕರೆ ಮಾಡಿ ಅಲ್ಲಿಗೆ ಕರೆಸಿಕೊಂಡು, ಪತಿ ಫೈರೋಜ್ಗೆ ಗೊತ್ತಾಗದಂತೆ ಸಹೋದರನ ಆಟೋದಲ್ಲಿ ಬೆಂಗಳೂರು ರಸ್ತೆಗೆ ಕಡೆಗೆ ಹೋದರು.
ಮಿರ್ಜಾ ನಾಲೆಯಲ್ಲಿ ಮಗುವನ್ನು ಎಸೆಯಲು ಹೋದ ಸುಮಯಾಗೆ, ಸಹೋದರ ಇಮ್ರಾನ್ ಬೇಡ ಎಂದು ಹೇಳಿದರೂ ಲೆಕ್ಕಿಸದೆ ಜೀವಂತ ಮಗುವನ್ನು ಸುಮಯಾ ನಾಲೆಗೆ ಹಾಕಿದಳು. ನಂತರ ತನ್ನ ಪತಿ ಮೊಬೈಲ್ಗೆ ಕರೆ ಮಾಡಿ, ಮಗು ಅಪಹರಣ ನಾಟಕವಾಡಿದಳು. ಈ ಸಂಬಂಧ ಮಗು ಅಪಹರಣ, ಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದ ಮಂಡಿ ಠಾಣೆ ಪೊಲೀಸರು, ವಿಚಾರಣೆ ತೀವ್ರಗೊಳಿಸಿ ಮಗುವನ್ನು ಕೊಂದ ತಾಯಿ ಮತ್ತು ಅದಕ್ಕೆ ಸಹಕರಿಸಿದ ಸಹೋದರನನ್ನು ಪತ್ತೆ ಹಚ್ಚಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಅಪಹರಣ ನಾಟಕ...
20 ದಿನದ ಮಗುವಿನೊಂದಿಗೆ ಅಶೋಕ ರಸ್ತೆಯಲ್ಲಿರುವ ಜುವೆಲ್ಲರಿಗೆ ಗುರುವಾರ ರಾತ್ರಿ ಹೋಗುತ್ತಿದ್ದಾಗ ಮಾರುತಿ ಒಮ್ನಿ ವಾಹನದಲ್ಲಿ ನಾಲ್ವರು ಮುಸುಕುದಾರಿಗಳು ಬಂದರು. ನನ್ನ ಪತಿಯನ್ನು ಯಾರೋ ಹಿಡಿದಿಟ್ಟಿದ್ದಾರೆ ಎಂದು ಹೇಳಿ ವಾಹನಕ್ಕೆ ಹತ್ತಿಸಿಕೊಂಡು ಅಪಹರಿಸಿದ್ದರು. ನನ್ನ ಬಳಿಯಿದ್ದ ಮೊಬೈಲ್ ಮತ್ತು 10 ಸಾವಿರ ನಗದು ಕಸಿದುಕೊಂಡರು. ಬೆಂಗಳೂರು ರಸ್ತೆಯಲ್ಲಿ ನನ್ನನ್ನು ವಾಹನದಿಂದ ಹೊರಗೆ ತಳ್ಳಿ ಮಗುವನ್ನು ಅಪಹರಿಸಿಕೊಂಡು ಹೋದರು. ನನ್ನ ಬಳಿಯಿದ್ದ ಮತ್ತೊಂದು ಮೊಬೈಲ್ನಿಂದ ಕರೆ ಮಾಡಿ ವಿಚಾರ ತಿಳಿಸಿದ್ದಾಗಿ ಮಗುವಿನ ತಾಯಿ ಸುಮಯಾ ಬಾನು ಮಂಡಿ ಠಾಣೆ ಪೊಲೀಸರಿಗೆ ಶುಕ್ರವಾರ ಬೆಳಗ್ಗೆ ದೂರು ನೀಡಿದ್ದರು. ಆ ದಿನ ಬೆಳಗ್ಗೆ 10ಕ್ಕೆ ಮಗುವಿನ ಶವ ಮಿರ್ಜಾ ನಾಲೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮಂಡಿ ಠಾಣೆ ಪೊಲೀಸರು, ಮಗು ಅಪಹರಣ ನಾಟಕ ಎಂಬುದನ್ನು ಹಾಗೂ ತಾಯಿಯೇ ಮಗುವನ್ನು ಕೊಲೆ ಮಾಡಿದ್ದಾಳೆ ಎಂಬುದನ್ನು ಪತ್ತೆ ಹಚ್ಚಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

