30ಕ್ಕೆ ಬಿ.ಎಸ್. ಸಣ್ಣಯ್ಯಗೆ ಅಭಿನಂದನೆ
ಕ.ಪ್ರ.ವಾರ್ತೆ ಮೈಸೂರು ಜೂ. 26
ಸಂವಹನ ಪ್ರಕಾಶನ ಹಾಗೂ ಬಿ.ಎಸ್. ಸಣ್ಣಯ್ಯ ಅಭಿನಂದನಾ ಸಮಿತಿ ವತಿಯಿಂದ ಜೂ.30 ರಂದು ಗ್ರಂಥ ಸಂಪಾದಕ ಬಿ.ಎಸ್. ಸಣ್ಣಯ್ಯ ಅವರಿಗೆ ಅಭಿನಂದನೆ ಹಾಗೂ ಪರಿಣತ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವನ್ನು ಜೆಎಸ್‌ಎಸ್ ಆಸ್ಪತ್ರೆ ಆವರಣದಲ್ಲಿರುವ ರಾಜೇಂದ್ರ ಭವನದಲ್ಲಿ ಏರ್ಪಡಿಸಲಾಗಿದೆ.
ಅಂದು ಬೆಳಗ್ಗೆ 11ಕ್ಕೆ ನಡೆಯುವ ಸಮಾರಂಭದಲ್ಲಿ ಬಿ.ಎಸ್. ಸಣ್ಣಯ್ಯ ಅವರನ್ನು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಅಭಿನಂದಿಸುವರು. ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎನ್. ಬಸವಾರಾಧ್ಯ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಜಾನಪದ ತಜ್ಞ ಡಾ.ಪಿ.ಕೆ. ರಾಜಶೇಖರ್ ಅಭಿನಂದನಾ ಭಾಷಣ ಮಾಡುವರು ಎಂದು ಹಿರಿಯ ಸಾಹಿತಿ ಡಾ.ಸಿಪಿಕೆ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಗ್ರಂಥ ಸಂಪಾದನಾ ಕ್ಷೇತ್ರಕ್ಕೆ ಹೊಸ ಅನ್ವೇಷಣೆಗಳನ್ನು ನೀಡಿದ ಬಿ.ಎಸ್. ಸಣ್ಣಯ್ಯ ಅವರು ಗ್ರಂಥ ಸಂಪಾದನೆಯಲ್ಲಿ ದೊಡ್ಡಯ್ಯ ಎಂದೇ ಪ್ರಸಿದ್ಧರು. ಸದಾ ಸಾಹಿತ್ಯ ಚಟುವಟಿಕೆಯಲ್ಲಿ ತೊಡಗಿರುವ ಕಾಯಕಯೋಗಿ. ಹಸ್ತಪ್ರತಿಯನ್ನು ರಕ್ಷಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿದೆ. ಇಂತಹ ಸಾಧಕರಿಗೆ ಪರಿಣತ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸುತ್ತಿದ್ದೇವೆ ಎಂದರು.
ಸಾಹಿತಿ ಡಾ.ರಾಗೌ ಅವರ ಪ್ರಧಾನ ಸಂಪಾದಕತ್ವದಲ್ಲಿ ಹೊರತಂದಿರುವ ಪರಿಣತ ಅಭಿನಂದನಾ ಗ್ರಂಥವೂ ಮೌಲಿಕವಾದದ್ದು. ಇದರಲ್ಲಿ ನನ್ನ ಊರು ಕೇರಿ ಮುನ್ನಡೆದ ದಾರಿ, ಬಲ್ಲವರ ಕಣ್ಣಿನಲ್ಲಿ, ಸಣ್ಣಯ್ಯನವರ ಸಾಹಿತ್ಯ, ಸಂಶೋಧನೆ ಎಂಬ ಭಾಗಗಳಲ್ಲಿ ಐವತ್ತು ಲೇಖಕರು ಲೇಖನಗಳನ್ನು ಬರೆದಿದ್ದಾರೆ. ಸಣ್ಣಯ್ಯನವರ ಜೀವನ, ವ್ಯಕ್ತಿತ್ವ ಹಾಗೂ ಸಾಹಿತ್ಯಿಕ ಸಾಧನೆಯನ್ನು ಒಂದು ಆಪ್ತನೆಲೆಯಲ್ಲಿ ಅವಲೋಕಿಸಿ ಮೌಲ್ಯೀಕರಿಸಿದ್ದಾರೆ ಎಂದು ತಿಳಿಸಿದರು.
ವಿಶ್ರಾಂತ ಪ್ರಾಧ್ಯಾಪಕ ಡಾ. ರಾಗೌ, ಪ್ರಕಾಶಕ ಡಿ.ಎನ್. ಲೋಕಪ್ಪ, ಬೋರೇಗೌಡ ಇದ್ದರು.
ಅತ್ಯಾಚಾರ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಜೂ. 26
ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿ ಹಾಗೂ ಪಾಂಡವಪುರ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಖಂಡಿಸಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಕಾರ್ಯಕರ್ತರು ಬುಧವಾರ ಪ್ರತಿಭಟಿಸಿದರು.
ಲಕ್ಷ್ಮಿಪುರಂ ಸರ್ಕಾರಿ ಪಿಯು ಕಾಲೇಜಿನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಅವರು, ಅತ್ಯಾಚಾರ ಎಸಗಿರುವವರಿಗೆ ಕಠಿಣ ಶಿಕ್ಷೆ ಆಗಬೇಕು. ಸಂವಿಧಾನದ ಆಶಯದಿಂದ ಮಹಿಳೆಯರೂ ಸಮಾನ ಬದುಕು ಸಾಗಿಸಲು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು. ಅತ್ಯಾಚಾರ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು. ಶಾಲಾ ಕಾಲೇಜುಗಳಲ್ಲಿ ಲೈಂಗಿಕ ಕಿರುಕುಳ ವಿರೋಧಿ ಸಮಿತಿ ರಚಿಸಬೇಕು. ಮಾಧ್ಯಮಗಳಲ್ಲಿ ಮಹಿಳೆಯರನ್ನು ಸರಕಾಗಿ ಬಿಂಬಿಸುವ ಅಶ್ಲೀಲ ಜಾಹೀರಾತು, ಅಶ್ಲೀಲ ಸಿನಿಮಾ ಸಾಹಿತ್ಯಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ಕಾರ್ಯದರ್ಶಿ ಮಹೇಶ್‌ಕುಮಾರ್, ಸಂಚಾಲಕಿ ಎನ್. ಮಂಜುಳಾ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

