ಮೈಸೂರು

ಫೋನ್ ಇನ್‌ಗೆ ಸಮಸ್ಯೆಗಳ ಮಹಾಪೂರ

Published On :

ಕ.ಪ್ರ.ವಾರ್ತೆ ಹುಣಸೂರು ಜೂ.27
ಇಲ್ಲಿನ ತಾಪಂ ವತಿಯಿಂದ ಗುರುವಾರ ನಡೆದ ಪೋನ್ ಇನ್ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು.
ತಾಪಂ ಸಭಾಂಗಣದಲ್ಲಿ ಬೆಳಗ್ಗೆ ಒಂದು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ 15ಕ್ಕೂ ಹೆಚ್ಚು ಕರೆಗಳು ಬಂದವು. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಯ ಸದಸ್ಯರು ಕರೆ ಮಾಡಿ, ತಮ್ಮ ಭಾಗದ ಸಮಸ್ಯೆಗಳನ್ನು ಪ್ರಸ್ತಾಪಿಸಿದರೆ, ಕೆಲವರು ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಬೇಸರ ವ್ಯಕ್ತಪಡಿಸಿದರು.
ತಾಲೂಕಿನ ನಿಲುವಾಗಿಲಿನಿಂದ ಪ್ರಭಾಕರ್ ಕರೆ ಮಾಡಿ, 2011ರ ಮೇ ತಿಂಗಳಿನಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಗ್ರಾಮದ 12ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನೆಲಸಮವಾಗಿದ್ದವು. ಆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದ ತಾಲೂಕು ಅಧಿಕಾರಿಗಳು, ಶಾಸಕರು, ಜಿಲ್ಲಾಧಿಕಾರಿಗಳಾದಿಯಾಗಿ ಎಲ್ಲರೂ ಶೀಘ್ರ ಮನೆ ನಿರ್ಮಿಸಿಕೊಡುವ ಭರವಸೆ ನೀಡಿದರು. ಆದರೆ ಇಂದಿಗೂ ಮನೆ ನಿರ್ಮಾಣವಾಗಿಲ್ಲ. ನಾವು ಎಷ್ಟು ಬಾರಿ ನಿಮ್ಮ ಬಳಿ ಬೇಡಬೇಕು ಎಂದು ಕೇಳಿದರು.
ಮಂಜೂರಾಗುವ ಭರವಸೆ: ಈ ಬಗ್ಗೆ ತಾಪಂ ವತಿಯಿಂದ ಮೂರು ಬಾರಿ ಗ್ರಾಮ ಸಭೆ ನಡೆಸಿ ಮೂರು ಬಾರಿಯೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರದಲ್ಲಿ ಮಂಜೂರಾಗುವ ಭರವಸೆ ಇದೆ ಎಂದು ತಾಪಂ ಸಹಾಯಕ ನಿರ್ದೇಶಕ ರಂಗನಾಥ್ ತಿಳಿಸಿದರು.
ಹನಗೋಡು ಹೋಬಳಿ ಮಂಗಳೂರು ಮಾಳ ಹಾಡಿಯಲ್ಲಿ 60ಕ್ಕೂ ಹೆಚ್ಚು ಜೇನುಕುರುಬ ಜನಾಂಗ ವಾಸಿಸುತ್ತಿದ್ದು, ಇವರಿಗಾಗಿ ಮೀಸಲಿಟ್ಟಿದ್ದ ಒಂದು ಎಕರೆ ಸ್ಮಶಾನ ಭೂಮಿಯನ್ನು ಗ್ರಾಮದ ಪ್ರಕಾಶ್ ಮತ್ತು ಕಮಲಮ್ಮ ಎಂಬವರು ಒತ್ತುವರಿ ಮಾಡಿಕೊಂಡಿದ್ದಾರೆ. ಒತ್ತುವರಿಯನ್ನು ತೆರವುಗೊಳಿಸಿ ಎಂದು ದಸಂಸ ಜಿಲ್ಲಾ ಸಂಚಾಲಕ ನಿಂಗರಾಜ ಮಲ್ಲಾಡಿ ಮನವಿಗೆ ಕಂದಾಯ ಇಲಾಖೆಗೆ ಸಮಸ್ಯೆಯ ಕುರಿತು ಮಾಹಿತಿ ನೀಡಲಾಗುವುದೆಂದು ತಿಳಿಸಿದರು.
ಬಿಳಿಕೆರೆಯ ಹೊಸಲು ಮಾರಮ್ಮ ದೇವಾಲಯದಲ್ಲಿ ಪ್ರತಿ ಭಾನುವಾರ ಮತ್ತು ಮಂಗಳವಾರ ಭಕ್ತರು ಪೂಜೆ ಮತ್ತು ಹರಕೆ ತೀರಿಸಲು ಬರುತ್ತಿದ್ದು, ಕುರಿಗಳನ್ನು ಕಡಿದು ಪರ ನಡೆಸಿ ಹೋಗುತ್ತಾರೆ. ಆದರೆ ಇದರಿಂದ ದೇವಾಲಯದ ಆವರಣದ ಸುತ್ತ ಗಲೀಜು, ಮಾಂಸದ ತುಂಡುಗಳು, ಪ್ಲಾಸ್ಟಿಕ್ ರಾಶಿಯೆ ಬಿದ್ದಿದೆ. ಇಡಿ ವಾತಾವರಣ ಗಬ್ಬುನಾರುತ್ತಿದೆ. ಡೆಂಘೀ ಜ್ವರ ಹರಡುವ ಸಾಧ್ಯತೆ ಇದ್ದು, ಪಂಚಾಯಿತಿ ಇತ್ತ ಗಮನಹರಿಸುತ್ತಿಲ್ಲವೆಂದು ಎಪಿಎಂಸಿಯ ಮಾಜಿ ಸದಸ್ಯ ಕುಮಾರ್ ಆರೋಪಿಸಿದಾಗ ಪಿಡಿಒಗೆ ಪರಿಶೀಲಿಸಲು ಸೂಚಿಸುವುದಾಗಿ ಹೇಳಿದರು. ತಾಪಂ ಇಒ ಮಹದೇವಸ್ವಾಮಿ ಅವರ ಅನುಪಸ್ಥಿತಿಯಲ್ಲಿ ತಾಪಂ ಸಹಾಯಕ ನಿರ್ದೇಶಕ ರಂಗನಾಥ್ ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.