ಮೈಸೂರು

ಕ್ಷೇತ್ರ ಪ್ರಗತಿಗೆ ಸಾಂಖ್ಯಿಕ ಅವಶ್ಯ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಜೂ. 29
ಎಲ್ಲಾ ಕ್ಷೇತ್ರಗಳ ಪ್ರಗತಿ ಪತ್ತೆ ಹಚ್ಚಲು ಸಂಖ್ಯಾಶಾಸ್ತ್ರ ಅವಶ್ಯವಿದ್ದು, ಸಮಾಜ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಮೈಸೂರು ವಿವಿಯ ಸಹಾಯಕ ಪ್ರಾಧ್ಯಾಪಕಿ ತುಳಸಿಮಾಲಾ ಅಭಿಪ್ರಾಯಪಟ್ಟರು.
ಮೈಸೂರು ಜಿಲ್ಲಾ ಸಾಂಖ್ಯಿಕ ಕಚೇರಿ ವತಿಯಿಂದ ಜಿಪಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಗಣಿತಶಾಸ್ತ್ರಜ್ಞ ಡಾ.ಪಿ.ಸಿ. ಮಹಾಲನೋಬಿಸ್ ಜನ್ಮದಿನಾಚರಣೆಯಲ್ಲಿ ಮಾತನಾಡಿ, ಕಾರ್ಮಿಕ ಮತ್ತು ಉದ್ಯೋಗ ಕ್ಷೇತ್ರದ ಅಂಕಿ ಅಂಶಗಳು ರಾಷ್ಟ್ರದ ಅಭಿವೃದ್ಧಿಯ ದಿಕ್ಸೂಚಿಯಾಗಿವೆ. ಸಮಗ್ರ ಅಂಕಿ- ಅಂಶಗಳ ಸಂಗ್ರಹಣೆಯು ಪ್ರತಿಯೊಂದು ಕ್ಷೇತ್ರಕ್ಕೂ ಅನ್ವಯವಾಗುತ್ತದೆ ಎಂದರು.
ಕಾರ್ಮಿಕ ಮತ್ತು ಉದ್ಯೋಗ ಕ್ಷೇತ್ರಗಳು ಪರಸ್ಪರ ಪೂರಕವಾಗಿದ್ದರೆ ಸುಸ್ಥಿರ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ಇವೆರಡೂ ಕ್ಷೇತ್ರಗಳ ಅಂಕಿ- ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದನ್ನು ಬಳಸಿಕೊಂಡು ವಸ್ತುಸ್ಥಿತಿ ವಿಶ್ಲೇಷಣೆ ಮಾಡಬಹುದು. ಸಂಖ್ಯಾಶಾಸ್ತ್ರವನ್ನು ಕೇವಲ ಸಂಖ್ಯಾತ್ಮಕ ವಿಶ್ಲೇಷಣೆ ದೃಷ್ಟಿಯಿಂದ ಮಾತ್ರ ನೋಡಬಾರದು. ದೇಶದಲ್ಲಿ ಆದಾಯ ಹೆಚ್ಚಾಗಿ ಅಭಿವೃದ್ಧಿಯಾಗುತ್ತಿದ್ದರೂ ಉದ್ಯೋಗಗಳ ಸಂಖ್ಯೆ ಹೆಚ್ಚಾಗಿಲ್ಲ. ಆದರೆ, ನಿರುದ್ಯೋಗ ಪ್ರಮಾಣ ಕಡಿಮೆಯಾಗಿದೆ. ಅಂದರೆ ಸೇವಾ ವಲಯದಲ್ಲಿ ಶೇ. 15ರಷ್ಟು ಉದ್ಯೋಗಗಳಿದ್ದರೂ ರಾಷ್ಟ್ರೀಯ ಆದಾಯಕ್ಕೆ ಶೇ. 50 ರಷ್ಟು ಕೊಡುಗೆ ನೀಡುತ್ತಿದೆ ಎಂದರು.
ಜಿಪಂ ಮುಖ್ಯ ಲೆಕ್ಕಾಧಿಕಾರಿ ಸಿದ್ದರಾಜು ಮಾತನಾಡಿ, ಸಂಖ್ಯಾಶಾಸ್ತ್ರವನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದಲ್ಲಿ ಜನಪರ ಅಭಿವೃದ್ಧಿ ಕೆಲಸ ಕೈಗೊಳ್ಳಬಹುದು. ಇದರಿಂದ ನಮ್ಮ ಕೆಲಸದ ಗುಣಮಟ್ಟ, ಫಲಿತಾಂಶ ತಿಳಿಯುತ್ತದೆ ಎಂದರು.
ಜಿಪಂ ಯೋಜನಾಧಿಕಾರಿ ವಸುಂಧರಾದೇವಿ ಮಾತನಾಡಿ, ಸಮಾಜ ರೂಪಿಸಿದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ದಕ್ಕಬೇಕಾದರೆ ವಸ್ತುನಿಷ್ಠ ಅಂಕಿ- ಅಂಶಗಳು ಸಹಾಯಕ್ಕೆ ಬರುತ್ತವೆ. ಹೀಗಾಗಿ ಸಂಖ್ಯಾಶಾಸ್ತ್ರ ಪ್ರಧಾನ ಪಾತ್ರ ವಹಿಸುತ್ತದೆ ಎಂದರು. ವಾರ್ತಾ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಂ. ಮಾಲೇಗೌಡ, ಸಾಂಖ್ಯಿಕ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ, ಜಿಲ್ಲಾ ಸಾಂಖ್ಯಿಕ ಸಹಾಯಕ ಅಧಿಕಾರಿ ತಿಬ್ಬೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.