ಜೀವನ್ ನೇಮಕ
ಕೆ.ಆರ್. ನಗರ: ತಾಲೂಕು ವಿದ್ಯಾರ್ಥಿ ಜೆಡಿಎಸ್ ಅಧಕ್ಷರಾಗಿ ಹೆಬ್ಬಾಳುಕೊಪ್ಪಲಿನ ಎಸ್. ಜೀವನ್ ನೇಮಕಗೊಂಡಿದ್ದಾರೆ.
ಎರೆಮನುಗನಹಳ್ಳಿಶಿಕ್ಷಕರ ಕೊರತೆ
ಕೆ.ಆರ್. ನಗರ: ತಾಲೂಕಿನ ಎರೆಮನುಗನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ 70 ಮಂದಿ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, ಇಬ್ಬರು ಶಿಕ್ಷಕರು ಇರುವುದರಿಂದ ಪಾಠ- ಪ್ರವಚನಕ್ಕೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಶಾಲೆಯಲ್ಲಿ ಇಬ್ಬರೆ ಶಿಕ್ಷಕರು ಇರುವುದರಿಂದ ತೊಂದರೆಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇಲಾಖೆಯವರ ಅಸಡ್ಡೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ ಎಂದು ಆರೋಪಿಸಿದ್ದಾರೆ. ಕೂಡಲೇ ಚುನಾಯಿತ ಜನಪ್ರತಿನಿಧಿಗಳು ಇಲಾಖೆಯ ಮೇಲಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಅಗತ್ಯವಿರುವ ಶಿಕ್ಷಕರನ್ನು ನೇಮಕ ಮಾಡದಿದ್ದಲ್ಲಿ ಶಾಲೆಗೆ ಬೀಗ ಹಾಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ವೇತನಕ್ಕೆ ಆದಾಯ ಮಿತಿ ಹೆಚ್ಚಳ
ಹುಣಸೂರು: ಪ. ವರ್ಗದ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮಂಜೂರು ಮಾಡಲು ವಿದ್ಯಾರ್ಥಿಗಳ ಪೋಷಕರ ಕುಟುಂಬದ ವಾರ್ಷಿಕ ಆದಾಯ ಮಿತಿಯನ್ನು 2013ರ ಏ. 1ರಿಂದ ಜಾರಿಗೆ ಬರುವಂತೆ 2 ಲಕ್ಷದಿಂದ 2.50 ಲಕ್ಷಗಳಿಗೆ ಸರ್ಕಾರ ಹೆಚ್ಚಿಸಿದ್ದು, ಅರ್ಹ ವಿದ್ಯಾರ್ಥಿಗಳು ಸರ್ಕಾರದ ಸವಲತ್ತುಗಳನ್ನು ಪಡೆಯಬೇಕೆಂದು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಮನವಿ ಮಾಡಿದ್ದಾರೆ.
ಯೋಗಾಸನ ತರಗತಿ
ಮೈಸೂರು: ಚಾಮರಾಜಪುರಂನ ವೇದವ್ಯಾಸ ಯೋಗ ಪ್ರತಿಷ್ಠಾನ ಆಶ್ರಯದಲ್ಲಿ ಜು. 1ರಿಂದ ಒಂದು ತಿಂಗಳು ಬೆಳಗ್ಗೆ 5.45, 11ಕ್ಕೆ ಹಾಗೂ ಸಂಜೆ 5 ಕ್ಕೆ ಪ್ರತ್ಯೇಕವಾಗಿ ಮಹಿಳೆಯರಿಗೆ ಯೋಗಾಸನ ತರಗತಿ ಆರಂಭವಾಗಲಿದೆ. ಡಾ. ರಾಘವೇಂದ್ರ ಪೈ ಹಾಗೂ ತರಬೇತಿ ನೀಡುವರು. ಮಾಹಿತಿಗಾಗಿ ಮೊ. 9448174457.
ಸರಗೂರಿನಲ್ಲಿ ಮಾದಕ ವಸ್ತು ವಿರೋಧಿ ಜಾಥಾ
ಕ.ಪ್ರ.ವಾರ್ತೆ , ಸರಗೂರು , ಜೂ.29
ಇಲ್ಲಿನ ಲಯನ್ಸ್ ಅಕಾಡೆಮಿ ಶಾಲೆಯಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಾದಕ ವಸ್ತು ವಿರೋಧಿ ದಿನಾಚರಣೆ ಪೊಲೀಸ್ ಠಾಣೆಯ ವತಿಯಿಂದ ನಡೆಯಿತು. ಈ ಬಗ್ಗೆ ಶಾಲಾ ಮಕ್ಕಳನ್ನು ಕುರಿತು ಎಸ್ಐ ಮೋಹಿತ್ ಸಹದೇವ್ ಮಾತನಾಡಿ, ಓದಿನ ಕಡೆಗೆ ಹೆಚ್ಚು ಗಮನಹರಿಸಿ. ಮಾದಕ ವಸ್ತು ಕಡೆ ಎಚ್ಚರ ವಹಿಸುವಂತೆ ತಿಳಿಸಿದರು. ನಂತರ ಶಾಲಾ ಮಕ್ಕಳು ಜಾಥಾ ನಡೆಸಿ ಮಾದಕ ವಸ್ತು ವಿರೋಧಿ ದಿನಾಚರಣೆಯ ಬಗ್ಗೆ ಅರಿವು ಮೂಡಿಸಿದರು. ಪೊಲೀಸ್ ಸಿಬ್ಬಂದಿ ಭಾಸ್ಕರ್, ರಂಗನಾಥ್, ಅನಂದ್, ರಾಕೇಶ್ ಇದ್ದರು.
ಇಂದು ಜಿ.ಎಸ್. ಜಯದೇವ್ ಜೊತೆ ಸಂವಾದ
ಕ.ಪ್ರ.ವಾರ್ತೆ , ಕೆ.ಆರ್. ನಗರ , ಜೂ. 29
ಇಲ್ಲಿನ ಜನವೇದಿಕೆಯು ಜೂ. 30ರಂದು ಸಂಜೆ 4ಕ್ಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಚಾಮರಾಜನಗರ ದೀನಬಂಧು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಜಿ.ಎಸ್. ಜಯದೇವ್ ಅವರೊಂದಿಗೆ ಸಂವಾದ ಏರ್ಪಡಿಸಿದೆ.
ಜಯದೇವ್ ಅವರು ಸಂವಾದಕ್ಕೂ ಮೊದಲು ನನ್ನ ಬದುಕು- ವಿಚಾರ ಕುರಿತು ಉಪನ್ಯಾಸ ನೀಡುವರು ಎಂದು ಕವಿ ಎಸ್. ಮಂಜುನಾಥ್ ತಿಳಿಸಿದ್ದಾರೆ. ಆಸಕ್ತರು ಪಾಲ್ಗೊಳ್ಳುವಂತೆ ಕೋರಿದ್ದಾರೆ.
ಬಾಹುಸಾರ್ ವಾಸುದೇವ ರಾವ್ ನಿಧನ
ಮೈಸೂರು: ನಗರದ ಬಾಹುಸಾರ್ ಯು. ವಾಸುದೇವರಾವ್ (89) ಶನಿವಾರ ಬೆಳಗಿನ ಜಾವ ನಗರದ ಚಾಮರಾಜ ಜೋಡಿ ರಸ್ತೆಯ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಓರ್ವ ಪುತ್ರ, ಮೂವರು ಪುತ್ರಿಯರು ಇದ್ದಾರೆ. ಮೃತರು ರಾಜ್ಯದ ಅಗ್ರಗಣ್ಯ ನಾಣ್ಯ ಸಂಗ್ರಹಕಾರರಾಗಿದ್ದು, ಭಾರತದ ನಾಣ್ಯಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಸಂಗ್ರಹದಲ್ಲಿದ್ದ ಅಪರೂಪ ನಾಣ್ಯಗಳನ್ನು ಮ್ಯೂಸಿಯಂಗಳಿಗೆ ಕೊಡುಗೆಯಾಗಿ ನೀಡಿದ್ದಾರೆ. ನಗರದ ಚಿನ್ಮಯ ಮಿಷನ್ನ ಸಂಸ್ಥಾಪಕರೊಬ್ಬರಾಗಿದ್ದು. ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಸುಬ್ಬರಾಯನಕೆರೆಯಲ್ಲಿದ್ದ ಬಾಹುಸಾರ್ ಈಜುಕೊಳದ ಸಂಸ್ಥಾಪಕರು. ಮಹಾರಾಜರ ಆಳ್ವಿಕೆಯಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡ ಮೊದಲ ತಂಡದಲ್ಲಿದ್ದರು. ಮೃತರ ಅಂತ್ಯಕ್ರಿಯೆ ಚಾಮುಂಡಿಬೆಟ್ಟ ತಪ್ಪಲಿನ ಹರಿಶ್ಚಂದ್ರ ಘಾಟ್ನಲ್ಲಿ ನಡೆಯಿತು.
ಯೋಧನ ಕುಟುಂಬಕ್ಕೆ ಸಾಂತ್ವನ
ಗುಂಡ್ಲುಪೇಟೆ: ಅಪಘಾತದಲ್ಲಿ ಮೃತಪಟ್ಟ ತಾಲೂಕಿನ ಗೋಪಾಲಪುರದ ಯೋಧನ ನಿವಾಸಕ್ಕೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಎಸ್.ಮಹದೇವಪ್ರಸಾದ್ ಭೇಟಿ ನೀಡಿ ಸಾಂತ್ವನ ಹೇಳಿದರು.
ಶನಿವಾರ ಬೆಳಗ್ಗೆ ಗೋಪಾಲಪುರಕ್ಕೆ ಭೇಟಿ ನೀಡಿ ಮೃತ ಯೋಧ ಜಿ.ಎಸ್.ರಾಜಶೇಖರಪ್ಪ (ಮುತ್ತು) ಅವರ ನಿವಾಸಕ್ಕೆ ತೆರಳಿ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದರು. ಮೃತನ ಕುಟುಂಬದವರ ಅನಿಸಿಕೆಯಂತೆ ಮೃತ ಯೋಧನ ಪತ್ನಿಗೆ ಅನುಕಂಪದ ಆಧಾರದಲ್ಲಿ ನೌಕರಿ ಕೊಡಿಸುವಂತೆ ಮಾಡಿದ ಮನವಿಗೆ ಸ್ಪಂದಿಸಿದ ಸಚಿವರು, ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವ ಕಾರಣ ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆರಹಳ್ಳಿನವೀನ್, ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಿ.ಮಡಿವಾಳಪ್ಪ, ಎಪಿಎಂಸಿ ನಿರ್ದೇಶಕ ಜಿ.ಜಿ.ಗೋಪಾಲಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

