ಕೆ.ಆರ್.ನಗರ: ಮಾಜಿ ಮುಖ್ಯಮಂತ್ರಿ ಹಾಗೂ ಕೆಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಏ. 4ರಂದು ಕೆ.ಆರ್. ನಗರಕ್ಕೆ ಆಗಮಿಸುತ್ತಿರುವ ಹಿನ್ನೆಲೆ, ಮಾ. 31ರ ಬೆಳಿಗ್ಗೆ 11ಕ್ಕೆ ಇಲ್ಲಿನ ಕೆಜೆಪಿ ಕಚೇರಿಯಲ್ಲಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಸಭೆ ಕರೆಯಲಾಗಿದೆ. ಕೆ.ಎನ್. ಬಸಂತ್, ರಾಜ್ಯ ಕಾರ್ಯದರ್ಶಿ ಎನ್.ವಿ. ಪಣೀಶ್, ಜಿಲ್ಲಾಧ್ಯಕ್ಷ ಬಿ.ಎಂ.ರಾಮು, ಕಾರ್ಯದರ್ಶಿ ಹೆಬ್ಬಾಳು ಗೋಪಾಲ್, ತಾ. ಅಧ್ಯಕ್ಷ ಜಗದೀಶ್ ಸೇರಿದಂತೆ ಮತ್ತಿತರ ಮುಖಂಡರು ಭಾಗವಹಿಸುವರು.
ಹೋಬಳಿ ಜೆಡಿಎಸ್
ಅಧ್ಯಕ್ಷರ ಬದಲು
ಮೈಸೂರು: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸದ ಹೋಬಳಿ ಘಟಕದ ಅಧ್ಯಕ್ಷ ಯಾಂದಳ್ಳಿ ಸಿದ್ದೇಗೌಡರನ್ನು ಪದಚ್ಯುತಗೊಳಿಸಿ, ಅವರ ಸ್ಥಾನಕ್ಕೆ ಕುಪ್ಪೇಗಾಲ ಬಾಬು ಅವರನ್ನು ನೇಮಿಸಲಾಗಿದೆ. ಶನಿವಾರ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ನಡೆದ ವರುಣ ಹೋಬಳಿಯ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚೆಲುವರಾಜು ಅವರ ಗೆಲವಿಗೆ ಶ್ರಮಿಸಲು ಈ ಬದಲಾವಣೆ ಅಗತ್ಯವಿತ್ತು. ನೂತನ ಅಧ್ಯಕ್ಷರು ಪಕ್ಷ ಸಂಘಟನೆಗೆ ಸಕ್ರಿಯರಾಗಿ ದುಡಿಯುವಂತೆ ವರುಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿ.ಎನ್. ಚಂದ್ರು ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವರುಣ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಗುರಿಕಾರ್ ಬಸವಣ್ಣ, ಎಸ್ಸಿ ಘಟಕದ ಅಧ್ಯಕ್ಷ ಹಲಗಯ್ಯನಹುಂಡಿ ಶಂಕರ್, ಬಿಳಿಗೆರೆ ಹೋಬಳಿ ಅಧ್ಯಕ್ಷ ರಾಜಣ್ಣ ಮೊದಲಾದವರು ಇದ್ದರು.
ಇಂದು ಕರೆಂಟ್ ಇಲ್ಲ
ನಂಜನಗೂಡು: ಸೆಸ್ಕ್ ವತಿಯಿಂದ ಮೈಸೂರು- ಊಟಿ ರಸ್ತೆಯಲ್ಲಿ ತುರ್ತು ಕಾಮಗಾರಿ ಕೈಗೊಳ್ಳುವುದರಿಂದ ನಂಜನಗೂಡು ಪಟ್ಟಣಾದ್ಯಂತ ಮಾ.31ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ ಎಂದು ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ
ಪಿರಿಯಾಪಟ್ಟಣ: ಏ. 1 ರಿಂದ ಪ್ರಾರಂಭವಾಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನಾದ್ಯಂತ ಒಟ್ಟು 3,072 ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು. 1,489 ಬಾಲಕರು ಹಾಗೂ 1,583 ಬಾಲಕಿಯರು ಪರೀಕ್ಷೆ ತೆಗೆದುಕೊಂಡಿದ್ದಾರೆ. ತಾಲೂಕಿನ 12 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.