ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮಾ.30
ಜಾಗತೀಕರಣದ ಸವಾಲು ಎದುರಿಸಬೇಕಾದರೆ ಕೌಶಲಾಭಿವೃದ್ಧಿ ಅವಶ್ಯಕ ಎಂದು ನಿಟ್ಟೆ ಗ್ಲೋಬಲ್ ಇನಿಷಿಯೇಟಿವ್ಸ್ ವಿವಿಯ ನಿರ್ದೇಶಕ ಡಾ.ಎಂ.ಎಸ್. ಮೂಡಿತ್ತಾಯ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಕಾಲೇಜು ಹಾಗೂ ಮೈಸೂರು ವಿವಿಯ ಖಾಸಗಿ ಕಾಲೇಜುಗಳ ಪ್ರಾಂಶುಪಾಲರ ವೇದಿಕೆ ಸಂಯುಕ್ತಾಶ್ರಯದಲ್ಲಿ ಶನಿವಾರ ಏರ್ಪಡಿಸಿದ್ದ ಗುರುಕುಲದಿಂದ ಜಾಗತಿಕರಣದವರೆಗೆ ಎಂಬ ವಿಷಯ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಪ್ರಾಚೀನ ಕಾಲದಲ್ಲಿ ಗುರುಕುಲ ಪದ್ಧತಿಯಿತ್ತು. ಆಗ ವಿದ್ಯಾರ್ಥಿಗಳು ಹಾಗೂ ಗುರುಗಳ ನಡುವಿನ ಸಂಬಂಧ ಉತ್ತಮವಾಗಿತ್ತು. ಆದರೆ, ಇಂದು ಕಾಲ ಬದಲಾದಂತೆ ಜಾಗತೀಕರಣ ಹಾಗೂ ಉದಾರೀಕರಣದ ನಡುವೆ ಶಿಕ್ಷಣವು ಸಹ ಮಾರ್ಪಡಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಹೊಸ ಹೊಸ ಸವಾಲು ಎದುರಿಸಲು ಕೇವಲ ವಿದ್ಯಾರ್ಥಿಗಳು ಮಾತ್ರ ತಯಾರಾದರೆ ಸಾಲದು. ಶಿಕ್ಷಕರು ಸಹ ಬೋಧನೆಯ ಕೌಶಲ ಹೊಂದುವುದು ಅವಶ್ಯಕ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಶಿಕ್ಷಣ ಮಂಡಳಿ ಪ್ರಾದೇಶಿಕ ಜಂಟಿ ನಿರ್ದೇಶಕ ಟಿ.ಎನ್. ಪ್ರಭಾಕರ, ಶೈಕ್ಷಣಿಕ, ಆಡಳಿತಾತ್ಮಕ ಮತ್ತಿತರ ವಿಷಯ ಕುರಿತು ಸಂವಾದ ನಡೆಸಿಕೊಟ್ಟರು.
ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರೊ. ಭಾಸ್ಕರಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ. ಬಿ.ಎಸ್. ಶ್ರೀಕಂಠ, ಖಜಾಂಚಿ ಗೋವಿಂದಯ್ಯ, ಮಹಾಜನ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆರ್. ವಾಸುದೇವಮೂರ್ತಿ, ಮೈಸೂರು ವಲಯ ಪ್ರಾಂಶುಪಾಲರ ವೇದಿಕೆ ಅಧ್ಯಕ್ಷ ಪ್ರೊ. ಶಿವರಾಮು ಕಾಡನಕುಪ್ಪೆ ಹಾಗೂ ಪ್ರಾಂಶುಪಾಲ ಪ್ರೊ. ಕೆ.ವಿ. ಪ್ರಭಾಕರ ಇದ್ದರು.