ನಾಗರಾಜ್ ಸಾಹಿತ್ಯ, ಸಾಂಸ್ಕೃತಿಕ ಒಡನಾಡಿ
ಕ.ಪ್ರ.ವಾರ್ತೆ ಮೈಸೂರು ಮೇ 12
ಹಿರಿಯ ವೃತ್ತಿ ರಂಗಭೂಮಿ ಕಲಾವಿದ ಎಂ. ನಾಗರಾಜ್ ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ಒಡನಾಡಿಯಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ. ಚಂದ್ರಶೇಖರ್ ಸ್ಮರಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರಂಗಭೂಮಿ ಕಲಾವಿದರ ಬಳಗ ಸಂಯುಕ್ತಾಶ್ರದಲ್ಲಿ ಅರಮನೆ ಉತ್ತರ ದ್ವಾರದಲ್ಲಿರುವ ಪರಿಷತ್ತಿನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಹಿರಿಯ ರಂಗಕರ್ಮಿ ಎಂ. ನಾಗರಾಜ್ ಶ್ರದ್ಧಾಂಜಲಿ ಹಾಗೂ ರಂಗಗೀತೆ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾಟಕಗಳಲ್ಲಿ ಹಾಸ್ಯನಟರಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದ ನಾಗರಾಜ್, ಕಳೆದ 5 ವರ್ಷಗಳಿಂದ ರಂಗಭೂಮಿ ಜತೆಗೆ ಸಾಹಿತ್ಯ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯರಾಗಿದ್ದರು. ಅದರಲ್ಲೂ ಸಾಹಿತ್ಯ ಪರಿಷತ್ತಿನ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಹಲವು ಕಾರ್ಯಕ್ರಮಗಳಿಗೆ ಪ್ರೇರಕ ಶಕ್ತಿಯಾಗಿದ್ದರು ಎಂದರು. ಸ್ವಾಭಿಮಾನಿಯೂ ಆಗಿದ್ದ ನಾಗರಾಜ್ ಯಾವುದೇ ಮುಲಾಜಿಗೂ ಒಳಪಡದೆ ನೇರನುಡಿ ಹಾಗೂ ನಡೆಯ ವ್ಯಕ್ತಿತ್ವ ಹೊಂದಿದ್ದರು. ಅವರ ನಿಧನದಿಂದ ರಂಗಭೂಮಿಗೆ ಮಾತ್ರವಲ್ಲ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಿಗೆ ತುಂಬ ನಷ್ಟವುಂಟಾಗಿದೆ. ಸಾಹಿತ್ಯ ಪರಿಷತ್ ಅವರ ಸೇವೆ ಸ್ಮರಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತಿಳಿಸಿದರು. ಹಿರಿಯ ವೃತ್ತಿ ರಂಗಭೂಮಿ ಕಲಾವಿದೆ ಕೆ.ಎಂ. ಗಿರಿಜಮ್ಮ, ಹಿರಿಯ ರಂಗಕರ್ಮಿ ಎಚ್.ಎಸ್. ಗೋವಿಂದೇಗೌಡ, ರಾಜರಾಜೇಶ್ವರಿ ವಸ್ತ್ರಾಲಂಕಾರ ಸಂಸ್ಥೆ ಮಾಲೀಕ ಬಿ.ಎಂ. ರಾಮಚಂದ್ರ ಅವರು ನುಡಿ ನಮನ ಸಲ್ಲಿಸಿದರು.
ಹಿರಿಯ ವಿದ್ವಾಂಸ ಪ್ರೊ. ಎ.ವಿ. ಸೂರ್ಯನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಆರ್. ಪರಶಿವನ್ ರಂಗಗೀತೆಗಳ ಮೂಲಕ ನಮನ ಸಲ್ಲಿಸಿದರು.
ಸಾಹಿತ್ಯ ಪರಿಷತ್ ಮಾಜಿ ಗೌರವ ಕಾರ್ಯದರ್ಶಿ ವಿದ್ಯಾಸಾಗರ ಕದಂಬ ನಿರೂಪಿಸಿದರು. ಮಾಜಿ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಲೇಖಕಿ ಡಾ. ಅನುಸೂಯ ಕಂಪನಹಳ್ಳಿ ಮತ್ತಿತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

