ಮೈಸೂರು

'ಉಪಕಾರಕ್ಕೆ ಪ್ರತಿಯಾಗಿ ಹಣ ನೀಡಬೇಡಿ'

Published On :

ಕ.ಪ್ರ.ವಾರ್ತೆ   ಮೈಸೂರು   ಮೇ 13
ಒಬ್ಬ ವ್ಯಕ್ತಿಗೆ ಮಾಡುವ ಉಪಕಾರಕ್ಕೆ ಪ್ರತಿಯಾಗಿ ಹಣ ನೀಡುವುದಕ್ಕಿಂತ ಅವನ ಯಶಸ್ಸಿಗಾಗಿ ಮಾಡುವ ಪ್ರಾರ್ಥನೆ ಹಾಗೂ ಶುಭ ಹಾರೈಕೆ ಹೆಚ್ಚು ಫಲದಾಯಕ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ಶಿವರಾಜ್ ವಿ. ಪಾಟೀಲ್ ಹೇಳಿದರು.
ತಮಿಳುನಾಡಿನ ಉದಕಮಂಡಲದ ಜೆಎಸ್‌ಎಸ್ ಅಂತಾರಾಷ್ಟ್ರೀಯ ಪಬ್ಲಿಕ್ ಶಾಲೆಯಲ್ಲಿ ನಡೆದ ವ್ಯಕ್ತಿತ್ವ ವಿಕಸನ ಶಿಬಿರದಲ್ಲಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಭಾರತದಲ್ಲಿ ಪ್ರಾಕೃತಿಕ ಸಂಪತ್ತು, ಮಾನವ ಸಂಪತ್ತು ಬಹಳವಿದೆ. ಆದರೆ, ಒಳ್ಳೆಯ ವ್ಯಕ್ತಿತ್ವವುಳ್ಳವರ ಕೊರತೆ ಕಾಣುತ್ತಿದೆ. ನಮ್ಮಲ್ಲಿರುವ ಶಕ್ತಿಯನ್ನು ಮೊದಲು ನಾವು ಕಂಡುಕೊಳ್ಳಬೇಕು. ನಂತರ ಆ ಶಕ್ತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಸದುಪಯೋಗಕ್ಕಾಗಿ ಶ್ರಮಿಸಬೇಕು. ನಮ್ಮಲ್ಲಿನ ಕೆಟ್ಟ ಆಲೋಚನೆಗಳನ್ನು ದೂರ ಮಾಡಿದಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ಸದ್ಗುಣ ಹಾಗೂ ಪ್ರಾಮಾಣಿಕತೆವುಳ್ಳ ವ್ಯಕ್ತಿಗಳು ಮುಂದೆ ಬಂದು ಸಕ್ರಿಯರಾದಾಗ ಮಾತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸದೃಢತೆ ಹಾಗೂ ಪಾರದರ್ಶಕ ಆಡಳಿತ ಕಾಣಲು ಸಾಧ್ಯವಾಗುತ್ತದೆ ಎಂದು  ತಿಳಿಸಿದರು.
ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾದವ್, ಸಮಾಜದಲ್ಲಿ ಯಾವುದೆ ತಾರತಮ್ಯ ಭೇದ- ಭಾವವಿಲ್ಲದೆ, ಸರ್ವರನ್ನು ಸಮಾನದೃಷ್ಟಿಯಿಂದ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಬಿಜಾಪುರದ ಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ತ್ಯಾಗ, ಭೋಗದ ಮತ್ತು ಯೋಗ ಈ ತ್ರಿವಿಧಗಳನ್ನು ಅರ್ಥ ಮಾಡಿಕೊಂಡು ಬದುಕುವುದರಿಂದ ಜೀವನದಲ್ಲಿ ತೃಪ್ತಿ ಸಾಧ್ಯ, ಹೊರಗಿನದನ್ನು ಗಳಿಸುವುದು ಮುಖ್ಯವಲ್ಲ. ನಿರಂತರವಾಗಿ ಅಂತರಾತ್ಮ ವಿಕಾಸಗೊಳಿಸಿಕೊಳ್ಳುತ್ತ ಹೋಗುವುದು ಜೀವನಕ್ಕೆ ಶ್ರೇಯಸ್ಕರ ಎಂದು ತಿಳಿಸಿದರು.
ಕರ್ನಾಟಕ ಮತ್ತು ಗೋವಾ ಆದಾಯ ತೆರಿಗೆ ಮುಖ್ಯ ಆಯುಕ್ತ ಕೆ. ಸತ್ಯನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಶಿಬಿರಾರ್ಥಿಗಳಾದ ಉಷಾ ಪರೇಶ್‌ಕುಮಾರ್, ಗೌರಿ ಪ್ರಸನ್ನ, ಎಂ.ಎಂ. ಅಂಗಡಿಯವರು ಶಿಬಿರದಲ್ಲಿ ತಮ್ಮಗೆಲ್ಲ ಆದ ವಿಶೇಷ ಅನುಭವ ಹಂಚಿಕೊಂಡರು. ಶಿಬಿರದಲ್ಲಿ ರಾಜ್ಯದ ಅನೇಕ ಜಿಲ್ಲೆಗಳಿಂದ 200ಕ್ಕೂ ಹೆಚ್ಚು ಮಂದಿ ಶಿಬಿರಾರ್ಥಿಗಳು ಪಾಲ್ಗೊಂಡು ಸಂತಸ, ಸಂತೃಪ್ತಿ ವ್ಯಕ್ತಪಡಿಸಿದರು.
ಡಾ.ಬಿ. ಪ್ರಭುಸ್ವಾಮಿ ಸ್ವಾಗತಿಸಿದರು. ಎಚ್.ಕೆ. ಬಸವಣ್ಣ ವಂದಿಸಿದರು. ನಂದೀಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.