ಮೈಸೂರು

ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ: ನಿರ್ಮಲಾನಂದನಾಥ ಶ್ರೀ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಮೇ 17
ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ ಎಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧೀಶ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಗೋಕುಲಂನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಸಾಹುಕಾರ್ ಚೆನ್ನಯ್ಯ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಂತಿಮ ವರ್ಷದ ಬಿಇ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಈಗಿನ ಪ್ರಪಂಚದಲ್ಲಿ ಕಲಿಯುವುದು ಬೇಕಾದಷ್ಟಿದ್ದು, ಕಲಿಕೆ ಎಂಬುದು ನಿರಂತರ ಪ್ರಕ್ರಿಯೆ. ಹಾಗಾಗಿ ನಾನು ಬಿಇ ಮುಗಿಸಿದ್ದೇನೆ ಇನ್ನು ಮುಂದೆ ಕಲಿಯುವುದು ಏನೂ ಇಲ್ಲ ಎಂದು ಭಾವಿಸುವುದು ತಪ್ಪು.  ಜೀವನದ ಉದ್ದಕ್ಕೂ ವಿದ್ಯಾರ್ಥಿಯಂತೆ ಕಲಿಕೆ ಮುಂದುವರಿಸಬೇಕು. ಅದನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಧರ್ಮ, ಜಾತಿ ಮತ್ತು ಮತವನ್ನು ಮೀರಿದ ವ್ಯಕ್ತಿಯಾಗಿ ಬೆಳೆಯಬೇಕು. ತಮ್ಮ ಸುತ್ತ ಯಾವುದೇ ಗೋಡೆಗಳನ್ನು ನಿರ್ಮಿಸಿಕೊಳ್ಳದೆ ವಿಶಾಲ ಮನೋಭಾವ ಹೊಂದಿರಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಎದುರಾಗುವ ಸವಾಲುಗಳನ್ನು ನಿಭಾಯಿಸಲು ಸಾಮರ್ಥ್ಯ ಹಾಗೂ ಕೌಶಲವನ್ನು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರೋತ್ಸಾಹಿಸಿದವರನ್ನು ಗೌರವಿಸಿ: ಪೋಷಕರಾಗಲಿ, ಶಿಕ್ಷಕರಾಗಲಿ, ಸಮಾಜವಾಗಲಿ ಅಥವಾ ಯಾರೇ ಆಗಲಿ ನಮ್ಮ ಬೆಳವಣಿಗೆಗೆ ಕಾರಣರಾದವರನ್ನು ಮರೆಯಬಾರದು ಹಾಗೂ ಅವರನ್ನು ಗೌರವಿಸಬೇಕು. ಸಮಾಜದ ಋಣವನ್ನು ತೀರಿಸುವ ಮೂಲಕ ದೇಶದ ಪ್ರಗತಿಗೆ ಕೊಡುಗೆಯಾಗಬೇಕು ಎಂದರು.
ಪ್ರಾಂಶುಪಾಲ ಡಾ.ಬಿ.ಸದಾಶಿವೇಗೌಡ ಮಾತನಾಡಿ, ಯಾವುದೇ ಅಡೆತಡೆ ಬಂದರೂ ಅಧೀರರಾಗದೆ ಗುರಿ ಮುಟ್ಟುವಲ್ಲಿ ಮುನ್ನಡೆಯಬೇಕು. ಕಷ್ಟಸುಖಗಳನ್ನು ಸಮಾನವಾಗಿ ಕಾಣುವ ಮನೋಭಾವ ಹಾಗೂ ಸಮಸ್ಯೆ ನಿರ್ವಹಿಸುವ ಸಾಮರ್ಥ್ಯ ಹಾಗೂ ಆತ್ಮವಿಶ್ವಾಸ ಹೊಂದಬೇಕು ಎಂದು ತಿಳಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಪಿ.ಎಂ. ಚಿಕ್ಕಬೋರಯ್ಯ ಮುಖ್ಯ ಅತಿಥಿಯಾಗಿದ್ದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ. ವಿಶ್ವನಾಥ್, ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.