ಮೈಸೂರು

ಯೋಜನೆ ಕಾರ್ಯಗತ ಮುನ್ನ ಪರಿಶೀಲಿಸಿ

Published On :

ಕ.ಪ್ರ.ವಾರ್ತೆ ಮೈಸೂರು ಮೇ 19
ರಾಜ್ಯದ ಚುಕ್ಕಾಣಿ ಹಿಡಿದಿರುವಕಾಂಗ್ರೆಸ್ ಸರ್ಕಾರ ಕಾರ್ಯರೂಪಕ್ಕೆ ತರುವ ಯೋಜನೆಗಳನ್ನು ಕಾರ್ಯಗತಕ್ಕೆ ಮುನ್ನ ಪರಿಶೀಲಿಸುವಂತೆ ಕನ್ನಡ ಯುವಜನ ಜಾಗೃತಿ ವೇದಿಕೆ ಆಗ್ರಹಿಸಿದೆ.
ರಾಜ್ಯದ ಎಲ್ಲಾ ಉಗ್ರಾಣಗಳಲ್ಲಿ ಶೇಖರಿಸಿಟ್ಟಿರುವ ಆಹಾರ ಪದಾರ್ಥಗಳ ಗುಣಮಟ್ಟದ ಬಗ್ಗೆ ಶೀಘ್ರದಲ್ಲೇ ನೂತನ ಸರ್ಕಾರ ಪರಿಶೀಲನೆ ಕಾರ್ಯ ನಡೆಸಬೇಕು. ಇದರಿಂದ ಆಹಾರ ಪದಾರ್ಥಗಳು ಹಾಳಾಗುವುದನ್ನು ತಡೆಗಟ್ಟಬಹುದು. ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ತಿಂಗಳಿಗೆ 30 ಕೆಜಿ ಅಕ್ಕಿಯನ್ನು ಜೂ.1 ರಿಂದ ನೀಡುವುದು ಸ್ವಾಗತಾರ್ಹ.
ಆದರೆ, ಈಗಾಗಲೇ ಬಿಪಿಎಲ್ ಪಡಿತರ ಕಾರ್ಡ್‌ಗಳು ಬಹುತೇಕ ಶ್ರೀಮಂತರ ಪಾಲಾಗಿವೆ. ಈ ಕಾರ್ಡ್‌ಗಳನ್ನು ಕೂಡಲೇ ರದ್ದುಪಡಿಸಿ ನಂತರ ಹೊಸ ಯೋಜನೆಯನ್ನು ಅನುಷ್ಠಾನಕ್ಕೆ ತರುವಂತೆ ವೇದಿಕೆ ಅಧ್ಯಕ್ಷ ಗ.ಶಾ. ಭೋಗನಂದೀಶ್, ಪ್ರಧಾನ ಕಾರ್ಯದರ್ಶಿ ಎಂ.ಎನ್. ಸತ್ಯಾನಂದ ವಿಟ್ಟು ಮನವಿ ಮಾಡಿದ್ದಾರೆ. ಬಿಪಿಎಲ್ ಕಾರ್ಡುದಾರರಿಗೆ ನೀಡಿರುವಂತೆ ನಗರದ ಮಟ್ಟ ಎಪಿಎಲ್ ಕಾರ್ಡ್‌ದಾರರು ಅದರಲ್ಲೂ ಬಹುತೇಕ ಮಧ್ಯಮ ವರ್ಗದವರು ಎಪಿಎಲ್ ಕಾರ್ಡ್ ಹೊಂದಿದ್ದು, ಅವರ ಜೀವನ ತ್ರಿಶಂಕು ಸ್ಥಿತಿಯಲ್ಲಿದೆ ಎಂದು ಹೇಳಿದರು.

ನೀರಿಗಾಗಿ ಇಂದು ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಮೇ 19
ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಪರಿಹರಿಸಲು ವಿಫಲವಾಗಿರುವ ಜಿಲ್ಲಾಡಳಿತದ ವಿರುದ್ಧ ಮೈಸೂರು ಗ್ರಾಹಕರ ಪರಿಷತ್ತು ಮೇ 20ರ ಮಧ್ಯಾಹ್ನ 3.30ಕ್ಕೆ ನಗರಪಾಲಿಕೆ ಎದುರು ಪ್ರತಿಭಟನೆ ನಡೆಸಲಿದೆ.
ಈ ಸಂಬಂಧ ಹೇಳಿಕೆ ನೀಡಿರುವ ಮೈಗ್ರಾಪದ ಪ್ರೊ. ಬಿ.ಎಸ್. ಶಂಕರ, ಮೈಸೂರಿನಲ್ಲಿ ನೀರು ಸರಬರಾಜು ನಿರ್ವಹಣೆಗೆ ಒಂದು ಸ್ವಾಯತ್ತ ನಿಕಾಯ ಸ್ಥಾಪಿಸಿ, ನಿಕಾಯ ನಿಯಂತ್ರಿಸಲು ಕರ್ನಾಟಕ ರಾಜ್ಯ ವಿದ್ಯುತ್ ನಿಯಂತ್ರಣಾ ಆಯೋಗದಂತಹ ಆಯೋಗ ಸ್ಥಾಪಿಸಬೇಕು ಎಂದಿದ್ದಾರೆ.
ಮೈಸೂರು ಪ್ರತಿ ವರ್ಷವೂ ಅಪಾಯದೊಡನೆ ಆಟವಾಡುತ್ತಿದೆ. ಪ್ರತಿ ಬೇಸಿಗೆಯಲ್ಲಿ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಬಹಳ ಇಳಿಯುತ್ತದೆ. ನಗರದ ಅನೇಕ ಭಾಗಗಳಿಗೆ ದಿನಗಟ್ಟಲೆ ವಾರಗಟ್ಟಲೆ ನೀರು ಸರಬರಾಜಾಗುವುದಿಲ್ಲ. ಜನರು ಹತಾಶರಾಗುತ್ತಾರೆ ಎಂದು ಹೇಳಿದ್ದಾರೆ.
ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಲು ಅದು ಅಲ್ಪಕಾಲೀನ ಮತ್ತು ಮಧ್ಯಕಾಲೀನ ಕ್ರಮ ಕೈಗೊಳ್ಳಬೇಕು. ವಿಶ್ವಾಸರ್ಹವಲ್ಲದ ದೇವರಾಯನ ಕಾಲುವೆಯಿಂದ ನೀರನ್ನು ರೇಚಿಸುವ ಬದಲು ಸೆಟ್ಟಿಕಟ್ಟೆಯ ಮೇಲ್ಭಾಗದಲ್ಲಿ ನದಿಯಿಂದಲೇ ನೀರನ್ನು ರೇಚಿಸಲು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಸರ್ಕಾರದ ಮುಂದಿಟ್ಟಿರುವ ಯೋಜನೆ ಸೇರಿದೆ. ಇದನ್ನು ತುರ್ತಾಗಿ, ಏನೇ ಆದರೂ ಮುಂದಿನ ಬೇಸಿಗೆಗೆ ಮುಂಚೆ ಮುಗಿಯುವಂತೆ ಕೈಗೆತ್ತಿಕೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.

ಡೊನೇಷನ್‌ಗೆ ಕಡಿವಾಣ ಹಾಕಿ
ಕ.ಪ್ರ.ವಾರ್ತೆ ಮೈಸೂರು ಮೇ 19
ನಗರದ ಖಾಸಗಿ ಮತ್ತು ಅನುದಾನಿತ ವಿದ್ಯಾಸಂಸ್ಥೆಗಳಲ್ಲಿನ ಡೊನೇಷನ್ ಹಾವಳಿಗೆ ಕಡಿವಾಣ ಹಾಕಬೇಕು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಸಂಸ್ಥೆ ಮತ್ತು ಯುವ ಕಾಂಗ್ರೆಸ್ ಸಮಿತಿ ಒತ್ತಾಯಿಸಿದೆ.
ಡೊನೇಷನ್ ಹಾವಳಿಯಿಂದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜನಾಂಗಗಳು ಶಿಕ್ಷಣದಿಂದ ವಂಚಿತವಾಗುತ್ತಿವೆ. ಜಿಲ್ಲೆಯ ಎಲ್ಲಾ ಖಾಸಗಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ದಲಿತರಿಗೆ ಕಡ್ಡಾಯ ಉಚಿತ ಪ್ರವೇಶ ನೀಡಬೇಕು.
ಶಿಕ್ಷಣ ಇಲಾಖೆ ಆಯುಕ್ತರು ಶುಲ್ಕಗಳ ಬಗ್ಗೆ ಹೊರಡಿಸಿರುವ ಆದೇಶದ ಪ್ರತಿಯನ್ನು ಎಲ್ಲಾ ಶಾಲಾ, ಕಾಲೇಜುಗಳ ನಾಮಫಲಕಗಳಲ್ಲಿ ಪ್ರಕಟಿಸಬೇಕು ಮತ್ತು ಜಿಲ್ಲೆಯಲ್ಲಿನ ಡೊನೇಷನ್ ಹಾವಳಿಗೆ ಕಡಿವಾಣ ಹಾಕಲು ಪ್ರಾದೇಶಿಕ ಆಯುಕ್ತರು, ಜಿಲ್ಲಾಡಳಿತ ಮತ್ತು ಸಮಜ ಕಲ್ಯಾಣ ಇಲಾಖೆ ಮುಂದಾಗಬೇಕು ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾಸಂಸ್ಥೆ ಅಧ್ಯಕ್ಷ ಸಿ. ಚಿದಂಬರ ಮತ್ತು ಉಪಾಧ್ಯಕ್ಷ ಕೆ. ಮುರುಳಿದಾಸ್ ಒತ್ತಾಯಿಸಿದ್ದಾರೆ. ನಗರದ ಮರಿಮಲ್ಲಪ್ಪ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಪ್ರವೇಶದಲ್ಲಿ ವ್ಯಾಪಕ ಅಕ್ರಮ ನಡೆದಿದೆ. ಕ್ಷೇತ್ರದಲ್ಲಿನ ವಿದ್ಯಾರ್ಥಿಗಳಿಗೆ ಪ್ರವೇಶ ಕೋರಲು ತೆರಳಿದ್ದ ನನ್ನೊಂದಿಗೆ ಸಚಿವ ವಿ. ಶ್ರೀನಿವಾಸಪ್ರಸಾದ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರನ್ನು ಏಕವಚನದಲ್ಲಿ ನಿಂದಿಸಿರುವ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಪಂಚಾಕ್ಷರಸ್ವಾಮಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲಿಕೆ ಸದಸ್ಯ ಪಿ. ಪ್ರಶಾಂತ್‌ಗೌಡ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.