ಸಾಹಿತ್ಯಕ್ಕೆ ವರ್ಡ್ಸ್ವರ್ತ್, ಕೀಟ್ಸ್ ಕೊಡುಗೆ ಅಪಾರ
ಕ.ಪ್ರ.ವಾರ್ತೆ ಮೈಸೂರು ಮೇ 19
ಪಾಶ್ಚಿಮಾತ್ಯ ಸಾಹಿತ್ಯದಲ್ಲಿ ವರ್ಡ್ಸ್ವರ್ತ್ ಮತ್ತು ಕೀಟ್ಸ್ ಕೊಡುಗೆ ಅಪಾರ ಎಂದು ಮೈಸೂರು ವಿವಿ ಪ್ರಸಾರಂಗ ನಿರ್ದೇಶಕ ಪ್ರೊ.ಸಿ. ನಾಗಣ್ಣ ಹೇಳಿದರು.
19ನೇ ಶತಮಾನವನ್ನು ಇಂಗ್ಲಿಷ್ ಸಾಹಿತ್ಯದ ಮೊದಲ ಕಾವ್ಯ ಕಾಲ ಎಂದು ಕರೆಯಲಾಗುತ್ತದೆ. ಆಗ ಪಿ.ಬಿ. ಶೆಲ್ಲಿ ಮತ್ತು ವರ್ಡ್ಸ್ವರ್ತ್ ಇಂಗ್ಲಿಷ್ ಸಾಹಿತ್ಯದ ಯುಗ ಪುರುಷರು. ಆ ಬಳಿಕ ವರ್ಡ್ಸ್ವರ್ತ್ನ ಜತೆಗೆ ಕೀಟ್ಸ್ ಸೇರಿಕೊಂಡಿದ್ದಾಗಿ ಹೇಳಿದರು.
ಕೀಟ್ಸ್ ಕ್ಷಯರೋಗದಿಂದ ಸತ್ತ, ಶೆಲ್ಲಿ ಚಿಕ್ಕ ವಯಸ್ಸಿನಲ್ಲಿಯೆ ಮದುವೆಯಾದ, ವರ್ಡ್ಸ್ವರ್ತ್ ತನ್ನ ಕಾವ್ಯ ಆರಂಭ ಕಾಲದ 3 ದಶಕದಲ್ಲಿ ಮಾತ್ರ ಉತ್ತಮ ಸಾಹಿತ್ಯ ರಚಿಸಿದ್ದಾನೆ. ಉಳಿದದ್ದು ಹೇಳಿಕೊಳ್ಳುವ ಸಾಹಿತ್ಯವಲ್ಲ ಎಂದು ಇಂಗ್ಲಿಷ್ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ ಎಂದರು.
ಶೆಲ್ಲಿ ಹೇಳುವಂತೆ ಹೊರಗಿನ ಪ್ರಚೋದನೆ ಇಲ್ಲದೆ ನಾಗರಿಕರು ಶ್ರೇಷ್ಠವಾದದ್ದನ್ನು ಸಾಧಿಸುವ ಸಾಮರ್ಥ್ಯ ಪಡೆಯಬೇಕು. ಆದರೆ ನಮ್ಮವರಿಗೆ ಹೊರಗಿನ ಪ್ರಚೋದನೆ ಇಲ್ಲದೆ ಏನನ್ನೂ ಮಾಡಲಾರರು. ಕ್ರಿಸ್ ಗೇಲ್ ಸಿಕ್ಸರ್ ಬಾರಿಸಿದರೆ ಪ್ರಚೋದನೆಗೆ ಒಳಗಾಗುತ್ತಾರೆ. ಆದರೆ ಅವರಿಗೆ ಗಾಢವಾದ ಉದ್ದೇಶ ಇರುವುದಿಲ್ಲ ಎಂದು ಹೇಳಿದರು.
ಇತ್ತೀಚೆಗೆ ಎಲ್ಲರೂ ನಗರ ಪ್ರದೇಶಕ್ಕೆ ವಿಮುಖರಾಗುತ್ತಿದ್ದಾರೆ. 2050ರ ವೇಳೆಗೆ ಶೇ.50 ರಷ್ಟು ಮಂದಿ ನಗರ ಪ್ರದೇಶದ ಜೀವನಕ್ಕೆ ಒಳಗಾಗುತ್ತಾರೆ. ಆದರೆ ನಗರ ಪ್ರದೇಶದ ಜೀವನದಿಂದಾಗಿ ನಾಗರಿಕರಲ್ಲಿ ಗಾಢವಾದ ಉದ್ದೇಶ ಕಡಿಮೆಯಾಗುತ್ತಿದೆ ಎಂದು ಶಿಲ್ಲೆ ಟೀಕಿಸಿದ್ದಾಗಿ ಹೇಳಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಸಹಾಯಕ ಪ್ರಾಧ್ಯಾಪಕ ಡಾ. ರವೀಂದ್ರನಾಥ್, ಪ್ರೊ.ಸೀತಾರಾಮ ಜಾಗೀರ್ದಾರ್ ಇದ್ದರು. ಜೈನಹಳ್ಳಿ ಸತ್ಯನಾರಾಯಣಗೌಡ ಸ್ವಾಗತಿಸಿದರು. ಎಂ.ಬಿ. ಜಯಶಂಕರ್ ನಿರೂಪಿಸಿದರು.
'ಸಮಾಜದ ಉದ್ಧಾರಕ್ಕೆ ಬಸವ ತತ್ವ ಪ್ರಸ್ತುತ'
ಕ.ಪ್ರ.ವಾರ್ತೆ ಮೈಸೂರು ಮೇ 19
ಸಮಾನತೆಯ ಸಂದೇಶ ಸಾರಿದ ಬಸವೇಶ್ವರರ ತತ್ವ ಎಲ್ಲಾ ಕಾಲಕ್ಕೂ ಪ್ರಸ್ತುತ ಎಂದು ರಾಷ್ಟ್ರೀಯ ಬಸವ ದಳದ ಪ್ರಧಾನ ಕಾರ್ಯದರ್ಶಿ ಸರೋಜಮ್ಮ ನಾಗರಾಜು ಹೇಳಿದರು.
ರಾಷ್ಟ್ರೀಯ ಬಸವದಳದ ವತಿಯಿಂದ ಭಾನುವಾರ ಕೆ.ಆರ್. ಮೊಹಲ್ಲಾದ ರೇಣುಕಾ ಮಂದಿರದಲ್ಲಿ ಏರ್ಪಡಿಸಿದ್ದ 880ನೇ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಜಾತ್ಯತೀತ ಸಮಾಜ ನಿರ್ಮಾಣ ಹಾಗೂ ಮಹಿಳೆಯರಿಗೆ ಸಮಾನ ಅವಕಾಶಕ್ಕಾಗಿ ಪ್ರತಿಪಾದಿಸುತ್ತಿದ್ದ ಬಸವೇಶ್ವರರು, 12ನೇ ಶತಮಾನದಲ್ಲಿಯೇ ಸರ್ವ ಜನಾಂಗದವರು ಪ್ರತಿನಿಧಿಸುವಂತೆ ಅನುಭವ ಮಂಟಪ ಸ್ಥಾಪಿಸಿದ್ದರು. ಕೆಳವರ್ಗದ ಹಾಗೂ ಶೋಷಿತರ ಧ್ವನಿಯಾಗಿ ಅವರ ಬದುಕಿಗೆ ಬೆಳಕಾದವರು ಎಂದು ಸ್ಮರಿಸಿದರು.
ಕ್ರಾಂತಿಯೋಗಿ ಬಸವಣ್ಣ ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದ ಮಹನೀಯರಲ್ಲ. ಅವರು ಸಮಾಜ ಎಲ್ಲಾ ವರ್ಗಗಳ ಮಹಾಚೇತನ. ಇಂದು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳುವುದು ಅವಶ್ಯಕ.
ಸಮಾನತೆಯ ನಿರ್ಮಾಣದಿಂದ ಸಮಾಜದ ಶಾಂತಿ ಹಾಗೂ ಪ್ರಗತಿ ಸಾಧ್ಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಸವಣ್ಣನವರ ಪೂಜಾ ವ್ರತವನ್ನು ಆಚರಿಸಿದ ಮಹಿಳೆಯರು ಶಿಶು ಬಸವಣ್ಣನವರ ವಿಗ್ರಹವನ್ನು ತೊಟ್ಟಿಲಿಗೆ ಹಾಕಿ ಜೋಗುಳ ಹಾಡಿದರು. ಅಲ್ಲದೆ ವಚನ ಗಾಯನ ಮತ್ತು ಭಜನೆ ನಡೆಸಿಕೊಟ್ಟರು.
ಶರಣ ಸಂಗಮ ಮಠದ ನಾಗರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಸವದಳದ ಗೌರವಾಧ್ಯಕ್ಷ ಕೆ.ಎಂ. ಶಿವಶಂಕರ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಡಾ.ಗೋಪಾಲ್ ಇದ್ದರು. ಇದಕ್ಕೂ ಮುನ್ನ ಬಸವ ಧ್ವಜಾರೋಹಣವನ್ನು ಶರಣೆ ನಾಗರತ್ನ ನೆರವೇರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

