ಮೈಸೂರು

ಸಮರ್ಪಕ ನೀರು ಪೂರೈಕೆಗೆ ಕ್ರಮ

Published On :

ಕ.ಪ್ರ. ವಾರ್ತೆ ಮೈಸೂರು ಮೇ 22
ಹೇಮಾವತಿ ಜಲಾಶಯದಿಂದ ಕೃಷ್ಣರಾಜ ಜಲಾಶಯಕ್ಕೆ 2 ಟಿಎಂಸಿ ನೀರು ಹರಿಸಲಾಗಿದ್ದು, ನಗರದ ಜನತೆ ಇನ್ನು ಹದಿನೈದು ದಿನಗಳ ಕಾಲ ಕುಡಿಯುವ ನೀರಿಗೆ ಚಿಂತಿಸಬೇಕಾಗಿಲ್ಲ. ಆದರೂ ಈ ಬಗ್ಗೆ ಸೂಕ್ತ ಮಾಹಿತಿ ಕಲೆ ಹಾಕಲು ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಬುಧವಾರ ಅಧಿಕಾರಿಗಳೊಂದಿಗೆ ಕೆಆರ್‌ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಕಾರ್ಯಪಾಲಕ ಎಂಜಿನಿಯರ್ ಸುಬ್ರಹ್ಮಣ್ಯ, ಅಧೀಕ್ಷಕ ಎಂಜಿನಿಯರ್ ಕೃಷ್ಣ, ಜಸ್ಕೋ ಉಸ್ತುವಾರಿ ಅಧಿಕಾರಿ ಸುಬ್ಬೇಗೌಡ ಅವರೊಂದಿಗೆ ತೆರಳಿದ ಸೋಮಶೇಖರ್ ಜಲಾಶಯದ ಪ್ರಸ್ತುತ ನೀರಿನ ಮಟ್ಟ, ಬೆಂಗಳೂರಿಗೆ ಹರಿಸಲಾಗುತ್ತಿರುವ ನೀರಿನ ಪ್ರಮಾಣ, ಮೈಸೂರಿಗೆ ಪೂರೈಸಲಾಗುತ್ತಿರುವ ನೀರಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದುಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕೆಆರ್‌ಎಸ್‌ನಲ್ಲಿ ಸದ್ಯ 66.55 ಅಡಿ ನೀರಿದೆ. ನಗರಕ್ಕೆ ಪ್ರತಿದಿನ 200 ಎಂಎಲ್‌ಡಿ ನೀರಿನ ಅವಶ್ಯಕತೆ ಇದ್ದು, ಪ್ರಸ್ತುತ 150 ಎಂಎಲ್‌ಡಿ ನೀರನ್ನು ಪೂರೈಸಲಾಗುತ್ತಿದೆ. ಬೆಳಗೊಳ 1 ಮತ್ತು 2ನೇ ಹಂತದಿಂದ 46, ಹೊಂಗಳ್ಳಿ 2 ಮತ್ತು 3ನೇ ಹಂತದಿಂದ 40, ಮೇಳಾಪುರ 1 ಮತ್ತು 2ನೇ ಹಂತದಿಂದ 59 ಸೇರಿದಂತೆ ಒಟ್ಟು 148 ಎಂಎಲ್‌ಡಿ ನೀರು ಪೂರೈಸಲಾಗುತ್ತಿದೆ. ಹೊಂಗಳ್ಳಿಯಲ್ಲಿ ತುರ್ತು ಪಂಪ್ ಅಳವಡಿಸಲಾಗಿದ್ದು, ಬೆಂಗಳೂರಿಗೆ ಪೂರೈಸುತ್ತಿರುವ ನೀರಿನ್ನು ಪಂಪ್ ಮಾಡಲಾಗುತ್ತಿದೆ. ಹೀಗಾಗಿ ಮೈಸೂರಿನ ಜನತೆಗೆ ಹದಿನೈದು ದಿನಗಳ ಕಾಲ ಚಿಂತಿಸುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ಮಳೆಯನ್ನು ನಂಬಿಕೊಳ್ಳಬೇಕಿದೆ ಎಂದರು.
ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಅಧೀಕ್ಷಕ ಎಂಜಿನಿಯರ್ ಕೃಷ್ಣ ಮಾತನಾಡಿ, ಹೊಂಗಳ್ಳಿಯಲ್ಲಿ ನೀರನ್ನು ಪಂಪ್ ಮಾಡಲಾಗುತ್ತಿದೆ. ಸೇತಿಕಟ್ಟೆಯಲ್ಲಿ ನೀರು ಪೋಲಾಗದಂತೆ ಕ್ರಮ ವಹಿಸಲಾಗಿದೆ. ಅಲ್ಲದೆ, ನೀರಿನ ಕೊಳವೆಗಳಿಗೆ ರಂಧ್ರ ಮಾಡಿ ನೀರು ಕದಿಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನೀರು ಸರಬರಾಜಿನ ವಿವರ: ನಗರಪಾಲಿಕೆ ವಾರ್ಡ್ 1 ರಿಂದ 9 ರವರೆಗೆ ಎರಡು ದಿನಕ್ಕೊಮ್ಮೆ, 10 ಮತ್ತು 11 ರವರೆಗೆ ಮೂರು ದಿನಕ್ಕೊಮ್ಮೆ, 12 ರಿಂದ 18 ರವರೆಗೆ ಎರಡು ದಿನಕ್ಕೊಮ್ಮೆ, 19 ರಿಂದ 24, 31,35,37 ರವರೆಗೆ ಮೂರು ದಿನಗಳಿಗೊಮ್ಮೆ, 25 ರಿಂದ 29 ರವರೆಗೆ ಎರಡು ದಿನಕ್ಕೊಮ್ಮೆ, 30,32,33,34,38,45 ರವರೆಗೆ ಮೂರು ದಿನಗಳಿಗೊಮ್ಮೆ, 46 ರಿಂದ 54 ರವರೆಗೆ ಎರಡು ದಿನಕ್ಕೊಮ್ಮೆ, 55 ರಿಂದ 65 ರವರೆಗೆ ಎರಡು ದಿನಕ್ಕೊಮ್ಮೆ ಮತ್ತು ಮೂರು ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುತ್ತದೆ ಎಂದರು.
ಪಾಲಿಕೆ ಸದಸ್ಯರಾದ ಎಂ. ಸುನಿಲ್, ಎನ್. ಸುನಿಲ್‌ಕುಮಾರ್, ಜೆ.ಎಸ್. ಜಗದೀಶ್, ಮಂಜುಳಾ ಮಾನಸ, ಉಮಾಮಣಿ ಮಾದೇಗೌಡ, ಸಾದಿಕ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.