ಮೈಸೂರು

ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ಕೊರತೆ: ಮಹದೇವಪ್ಪ ಆತಂಕ

Published On :

ಕ.ಪ್ರ.ವಾರ್ತೆ ಮೈಸೂರು ಮೇ 20
ಇಂದು ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹದ ಕೊರತೆ ಎದುರಾಗಿದೆ ಎಂದು ಜೆಎಸ್‌ಎಸ್ ಸಂಗೀತಸಭಾದ ಅಧ್ಯಕ್ಷ ಹಾಗೂ ರಾಜ್ಯ ಸಂಗೀತ ವಿದ್ವಾನ್ ಎಸ್.ಮಹದೇವಪ್ಪ ಆತಂಕ ವ್ಯಕ್ತಪಡಿಸಿದರು.
ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ಸರಸ್ವತಿಪುರಂನ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿರುವ ಬಸವ ಜಯಂತಿ ಹಾಗೂ ಸಭಾದ 30ನೇ ವಾರ್ಷಿಕೋತ್ಸವದ ಎರಡು ದಿನಗಳ ಕಾರ್ಯಕ್ರಮದಲ್ಲಿ ಸೋಮವಾರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಥಳೀಯ ಕಲಾವಿದರ ಸಂಗೀತ ಕಾರ್ಯಕ್ರಮಗಳು ಎಂದರೆ ಸಾಕು ಜನರು ಸಭೆಗಳಿಗೆ ಬರುವುದು ಕಡಿಮೆಯಾಗಿದೆ. ಇದೇ ರೀತಿ ಮುಂದುವರಿದರೆ ಸಂಗೀತ ಪಾಠ ಹೇಳಿಕೊಡುವ ವಿದ್ವಾಂಸರಾಗಲಿ ಅಥವಾ ಸಂಗೀತ ಉಳಿಸಿ ಬೆಳೆಸುವ ಕಲಾವಿದರಾಗಲಿ ದೊರಕುವುದು ದುರ್ಲಭವಾಗಲಿದೆ. ಆದ್ದರಿಂದ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಅವಶ್ಯಕ ಎಂದರು.
ವಚನ ಗಾಯನ ಹೆಚ್ಚು ಜನರಿಗೆ ಆಕರ್ಷಿಸುವಂತೆ ಮಾಡಲು ಅದನ್ನು ಹರಿಕಥೆ ರೂಪದಲ್ಲಿ ಪ್ರಸ್ತುತ ಪಡಿಸುವ ಬಗ್ಗೆ ಈಗಾಗಲೇ ಸಂಗೀತ ಸಭಾದಲ್ಲಿ ಚರ್ಚಿಸಲಾಗಿದೆ ಎಂದ ಅವರು, ಕಳೆದ 30 ವರ್ಷಗಳಿಂದ ಮಕ್ಕಳಿಗೆ, ಯುವಕರಿಗೆ ಹಾಗೂ ವಯೋವೃದ್ಧರಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.    
ಪ್ರಾಸ್ತಾವಿಕ ಮಾತುಗಳಾಡಿದ ಮಹಾಜನ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀಧರ್, 12 ನೇ ಶತಮಾನದಲ್ಲಿ ಭಕ್ತಿ ಪಂಥದ ಮೂಲಕ ಬಸವಣ್ಣ ಅವರು ಸಮಾಜ ಸುಧಾರಣೆಗೆ ಮುಂದಾದರು. ಅಂತೆಯೇ 19ನೇ ಶತಮಾನದಲ್ಲಿಯೂ ಜ್ಞಾನದ ಮೂಲಕ ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಯ ಚಳವಳಿಗಳು ನಡೆದವು. ಆದರೆ 700 ವರ್ಷಗಳ ಹಿಂದಿನ ಸಾಮಾಜಿಕ ಸುಧಾರಣೆಯೇ ಮತ್ತೆ ಮರುಕಳಿಸಿತು ಹೊರತು ಅದರಲ್ಲಿ ಹೊಸತನವಿರಲಿಲ್ಲ ಎಂದರು.
ಸಂಸ್ಥೆಯ ಟ್ರಸ್ಟಿ ವೀರಭದ್ರಸ್ವಾಮಿ ಮುಖ್ಯ ಅತಿಥಿಯಾಗಿದ್ದರು. ಬಿ.ಸಿ. ರಾಜಗೋಪಾಲ್ ಸ್ವಾಗತಿಸಿದರು. ವಿದ್ವಾನ್ ಕೆ.ರಾಮಮೂರ್ತಿರಾವ್ ನಿರೂಪಿಸಿದರು. ರಘುಲೀಲಾ ಸಂಗೀತ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.