ಮೈಸೂರು

ಅಭಿವೃದ್ಧಿ ಕಡೆಗಣಿಸಿದ ವೆಂಕಟೇಶ್: ರೇವಣ್ಣ

Published On :

ಕ.ಪ್ರ. ವಾರ್ತೆ ರಾವಂದೂರು ಮೇ 22
20 ವರ್ಷ ಶಾಸಕರಾಗಿದ್ದ ಕೆ. ವೆಂಕಟೇಶ್ ಪಿರಿಯಾಪಟ್ಟಣ ತಾಲೂಕಿನ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.
ಪಿರಿಯಾಪಟ್ಟಣ ತಾಲೂಕಿನ  ಕೆಲ್ಲೂರು ಗ್ರಾಮದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಮಹದೇವ್ ಪರ ಪ್ರಚಾರ ನಡೆಸಿ ಮಾತನಾಡಿ, ಬೆಟ್ಟದಪುರ ರಸ್ತೆ ಅಭಿವೃದ್ಧಿಗೆ ತಾವು ಲೋಕೋಪಯೋಗಿ ಸಚಿವರಾಗಿದ್ದ ಸಂದರ್ಭದಲ್ಲಿ ಹಣ ಮಂಜೂರು ಮಾಡಲಾಗಿತ್ತು. ಇದುವರೆಗೂ ರಸ್ತೆ ನಿರ್ಮಾಣವಾಗಿಲ್ಲ. ಆಲನಹಳ್ಳಿ ಮುಸ್ಲಿಂ ಸಮುದಾಯ ಹೆಚ್ಚಾಗಿರುವ ಕಡೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ 5 ಕೋಟಿ ಮಂಜೂರು ಮಾಡಿದ್ದರೂ ಇದೂ ನಿರ್ಮಾಣವಾಗದಂತೆ ಸ್ಥಳೀಯ ಶಾಸಕರು ತಡೆ ಒಡ್ಡಿದ್ದಾರೆ ಎಂದು ದೂರಿದರು.
ಇಡೀ ದೇಶದಲ್ಲಿ ಬಡವರಿಗೆ ಮೊದಲು ಕೆಜಿಗೆ 3ರಂತೆ ಅಕ್ಕಿ ಕೊಟ್ಟಿದ್ದು ದೇವೇಗೌಡರು ಪ್ರಧಾನಿಯಾದಾಗ. ಆದರೆ, ಪಿರಿಯಾಪಟ್ಟಣ ಚುನಾವಣೆ ಬಾಕಿ ಇದ್ದು, ಇದರ ನಿಟ್ಟಿನಲ್ಲಿ ಬಡವರಿಗೆ 30 ಕೆಜಿ ಅಕ್ಕಿ ಕೊಡುವ ಪ್ರಕಟಣೆಯನ್ನು ಹೊರಡಿಸಿದ್ದು ಎಷ್ಟು ಸರಿ. 24 ಸಾವಿರ ಅನಧಿಕೃತ ತಂಬಾಕು ಬೆಳೆಗಾರರಿಗೆ ಲೈಸನ್ಸ್ ಕೊಡಿಸಿದ್ದು ದೇವೇಗೌಡರು, ನಮ್ಮ ತಂದೆಯ ನೆರಳಿನಲ್ಲಿ ಬೆಳೆದ ಸಿದ್ದರಾಮಯ್ಯ ಮತ್ತು ವೆಂಕಟೇಶ್‌ಗೆ ದೇವೇಗೌಡರ ಕುಟುಂಬ ಟೀಕಿಸುವ ನೈತಿಕ ಹಕ್ಕಿಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಪಿರಿಯಾಪಟ್ಟಣ ತಾಲೂಕಿಗೆ ದೇವೇಗೌಡರಿಗೆ ಅವಿನಾಭಾವ ಸಂಬಂಧವಿದ್ದು, ಅವರು ನೀರಾವರಿ ಸಚಿವರಾದ ಸಂದರ್ಭದಲ್ಲಿ ಕರಡಿಲಕ್ಕನ ಕೆರೆ ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದರು. ಆದರೆ, ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ತಮಗೆ ಚುನಾವಣೆಯಲ್ಲಿ ಸಹಾಯ ಮಾಡಿದ ಮದ್ಯದ ದೊರೆಗಳ ಋಣ ತೀರಿಸಲು ಸಿದ್ದರಾಮಯ್ಯ ಮದ್ಯ ಮಾರಾಟ ಆರಂಭಿಸಲು ಮುಂದಾಗಿದ್ದಾರೆ. ಇದು ಕಾಂಗ್ರೆಸ್ ಸರ್ಕಾರ ಜನವಿರೋಧಿ ನೀತಿಯನ್ನು ಎತ್ತಿತೋರಿಸಿದೆ ಎಂದು ಜರಿದರು.
ಈಗ ತಾಲೂಕಿನ ಅಭಿವೃದ್ಧಿ ಮತ್ತು ತಂಬಾಕು ಬೆಳೆಗಾರರನ್ನು ಅಭಿವೃದ್ಧಿ ಪರ ಮಾತನಾಡುವ ಮುಖ್ಯಮಂತ್ರಿ ಕೇಂದ್ರದಲ್ಲಿ ಅವರದೆ ಸರ್ಕಾರ 9 ವರ್ಷದಿಂದ ಇದ್ದರೂ ಇದುವರೆಗೆ ಏಕೆ ತಂಬಾಕು ಬೆಳೆಗಾರರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡಿಲ್ಲ. ಅವರ ಕಷ್ಟ- ಸುಖ ಅರಿಯಲು ನಿಯೋಗ ಕರೆದುಕೊಂಡು ಹೋಗಲಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ತಂಬಾಕು ರೈತರು ನೆನಪಾಗುತ್ತಾರಾ ಎಂದು ಲೇವಡಿ ಮಾಡಿದರು.
ಚುನಾವಣಾ ಪ್ರಚಾರಕ್ಕೂ ಮುನ್ನ ಕಗ್ಗುಂಡಿ ಗ್ರಾಮದ ಹರಳಯ್ಯ ಮಠಕ್ಕೆ ಪೂಜೆ ಸಲ್ಲಿಸಿ ನಂತರ ಪ್ರಚಾರ ಕೈಗೊಂಡರು. ಮೆಲ್ಲಹಳ್ಳಿ, ಕಿರನಲ್ಲಿ, ಬಸಲಾಪುರ, ವಿ.ಜಿ. ಕೊಪ್ಪಲು, ದೊಡ್ಡಬೇಲಾಲು ಮಾಕೋಡು ರಾವಂದೂರು ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದರು.
ಅಭ್ಯರ್ಥಿ ಕೆ. ಮಹದೇವ್, ಜಿಪಂ ಉಪಾಧ್ಯಕ್ಷೆ ಎಂ.ಕೆ. ಸುಚಿತ್ರಾ, ಸದಸ್ಯ ಶಿವಣ್ಣ, ತಾಪಂ ಮಾಜಿ ಅಧ್ಯಕ್ಷ ಜವರಪ್ಪ, ಮುಖಂಡರಾದ ಎಲ್. ಆನಂದ್, ಗೋವಿಂದೇಗೌಡ, ಪಪಂ ಸದಸ್ಯ ವೇಣುಗೋಪಾಲ್, ಕೆ.ಕೆ. ರಾಮಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.