ಮಾತು ಬಾರದವರ ಮನದಾಳ...
ಜೆ. ಮಹದೇವ್
ಕ.ಪ್ರ.ವಾರ್ತೆ ಮೈಸೂರು ಮೇ 31
ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದು ಹಠ ತೊಟ್ಟಾಗ ಅವರಿಗೆ ಅಂಗವಿಕಲತೆ ಅಡ್ಡ ಬರುತ್ತಿತ್ತು. ಇದನ್ನು ಮೆಟ್ಟಿ ನಿಂತು ಮೂರು ವರ್ಷಗಳ ಜ್ಯುವೆಲ್ಲರಿ ಡಿಸೈನ್ ಹಾಗೂ ಟೆಕ್ನಿಕಲ್ ಡಿಪ್ಲೊಮಾ ಕೋರ್ಸ್ ಮುಗಿಸಿದ ವಿದ್ಯಾರ್ಥಿಗಳು ಕೊನೆಯ ಸೆಮಿಸ್ಟರ್ನಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಸ್ವತಃ ಆರು ತಿಂಗಳ ಕಾಲ ಶ್ರಮಪಟ್ಟು ತಯಾರಿಸಿದ ಆಭರಣಗಳ ಮಾದರಿಗಳನ್ನು ಪ್ರದರ್ಶಿಸಿದ್ದಾರೆ. ಇಂಥದ್ದೊಂದು ಅಪರೂಪದ ಪ್ರದರ್ಶನ ಏರ್ಪಾಡಾಗಿದ್ದು ಮಾನಸಗಂಗೋತ್ರಿಯ ಜೆಎಸ್ಎಸ್ ಅಂಗವಿಕಲ ಪಾಲಿಟೆಕ್ನಿಕ್ನಲ್ಲಿ. ಮೇ 31 ಮತ್ತು ಜೂ. 1ರಂದು ಈ ಪ್ರದರ್ಶನ ನಡೆಯಲಿದೆ. ಶುಕ್ರವಾರ ಪಾಲಿಟೆಕ್ನಿಕ್ ಪ್ರಾಂಶುಪಾಲ ನಂಜುಂಡಸ್ವಾಮಿ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದರು. ಅಂತಿಮ ಹಂತದ ವಿದ್ಯಾರ್ಥಿಗಳಾದ ಸಿ.ವಿ. ನಾಗರಾಜು, ಶ್ರೀಕಾಂತ್, ಶಮಂತ್, ಚಾಮರಾಜ, ನಿಷ್ಕಲ, ವರ್ಷ, ಪೃಥ್ವಿ, ಸಿ.ಎಂ. ಚೈತ್ರ ಅವರು ತಮ್ಮ ಕೌಶಲ್ಯತೆಯ ಛಾಪು ಮೂಡಿಸಿದ್ದಾರೆ.
ಡಿಪ್ಲೊಮಾ ಕೋರ್ಸ್: 2000ರಲ್ಲಿ ಆರಂಭವಾದ ಜೆಎಸ್ಎಸ್ ಅಂಗವಿಕಲರ ಪಾಲಿಟೆಕ್ನಿಕ್ ಸಂಸ್ಥೆ ಮೊದಲಿಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸ್ಅನ್ನು ಪ್ರಾರಂಭಿಸಿತು. ನಂತರ 2005ರಿಂದ ಒಂದು ವರ್ಷದ ಕೋರ್ಸ್ಅನ್ನು ಮೂರು ವರ್ಷದ ಕೋರ್ಸ್ನ್ನಾಗಿ ಪರಿವರ್ತಿಸಿ ದಕ್ಷಿಣ ಭಾರತದಲ್ಲಿಯೇ ಪ್ರಥಮ ಸಂಸ್ಥೆ ಎನಿಸಿಕೊಂಡಿತು.
ಒಟ್ಟು 30 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಕೊನೆಯ ಸೆಮಿಸ್ಟರ್ನಲ್ಲಿ 8 ವಿದ್ಯಾರ್ಥಿಗಳಿದ್ದಾರೆ. ಕೋರ್ಸಿನ ಕೊನೆಯಲ್ಲಿ ಕಡ್ಡಾಯವಾಗಿ ಆಭರಣಗಳ ಮಾದರಿ ತಯಾರಿಸಿ ಪ್ರದರ್ಶಿಸುವುದು ಪಠ್ಯಕ್ರಮದ ಭಾಗವಾಗಿದೆ.
ಇಲ್ಲಿ ಶಿಕ್ಷಣ ಪಡೆದವರು ಬ್ರಾಂಡೆಡ್ ಜ್ಯುವೆಲ್ಲರಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಗಾಂಜಾಂ ನಾಗಪ್ಪ ಆ್ಯಂಡ್ ಸನ್ಸ್, ಸೂರಜ್ ಡೈಮಂಡ್ ಪ್ರೈ.ಲಿ., ತನಿಷ್ಕ್ ಜ್ಯುವೆಲ್ಲರಿ, ರಿಲಯನ್ಸ್ ಜ್ಯುವೆಲ್ಲರಿ, ಪಿಕಾಕ್ ಜ್ಯುವೆಲ್ಲರಿ, ಸ್ವರ್ಣಮಂದಿರ್ ಜ್ಯುವೆಲ್ಲರಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದಿಬ್ಬರು ಸೌದಿ, ಈಜಿಪ್ಟ್ ದೇಶಗಳಲ್ಲಿಯೂ ಇದ್ದಾರೆ. ಪ್ರತಿ ವರ್ಷ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಪ್ರತಿಭಾವಂತರನ್ನು ಆಯ್ಕೆ ಮಾಡಲಾಗುತ್ತದೆ ಎಂದು ವಿಭಾಗದ ಮುಖ್ಯಸ್ಥ ಶಿವಕುಮಾರ್ ಕನ್ನಡಪ್ರಭಕ್ಕೆ ತಿಳಿಸಿದರು.
ಪ್ರದರ್ಶನದಲ್ಲಿ ಏನೇನಿದೆ ಗೊತ್ತೆ?
ಆಧುನಿಕ ತಂತ್ರಜ್ಞಾನದ ಮೂಲಕ ಚಿನ್ನಾಭರಣಗಳ ಮಾದರಿಗಳನ್ನು ತಯಾರಿಸಿದ ಆಭರಣ ಪ್ರದರ್ಶಿಸಲಾಗಿದೆ. ಬೆಳ್ಳಿ, ತಾಮ್ರ ಲೋಹದ ಆಭರಣಗಳು ಕಂಗೊಳಿಸುತ್ತಿವೆ. ಓಲೆ, ಮೂಗುತಿ, ಬಳೆ, ಕತ್ತಿನ ಸರ, ಕಿರೀಟ, ಬೆಳ್ಳಿ ಸರ, ಓಂ ಆಕೃತಿ, ಉಂಗುರ ಮುಂತಾದ ಆಭರಣಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

