ಆಂಗ್ಲ ವ್ಯಾಮೋಹದಿಂದ ಕನ್ನಡ ಭಾಷೆ ಅವನತಿ
ಕ.ಪ್ರ.ವಾರ್ತೆ ಎಚ್.ಡಿ.ಕೋಟೆ ನ. 1
ಕನ್ನಡಿಗರು ಹೃದಯ ವೈಶಾಲ್ಯ ಹೊಂದಿರುವುದರಿಂದಲೇ ರಾಜ್ಯದಲ್ಲಿ ಅನೇಕ ಪರಭಾಷಿಕರು ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ಆದರೆ ಕನ್ನಡಿಗರು ಹೊರ ರಾಜ್ಯದಲ್ಲಿ ಈ ರೀತಿ ಸ್ವಾತಂತ್ರ್ಯ ಹೊಂದಿಲ್ಲ ಎಂದು ಶಾಸಕ ಎಸ್. ಚಿಕ್ಕಮಾದು ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಶುಕ್ರವಾರ ನಡೆದ 58ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಹೊರರಾಜ್ಯಗಳ ಅನೇಕ ಮಂದಿ ಇದ್ದಾರೆ. ಅವರ ಭಾಷೆಯನ್ನು ಕಲಿಯುವ ಆಸೆಯಿಂದ ಅವರಿಗೆ ನಮ್ಮ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡುತ್ತಿಲ್ಲ, ಹೀಗಾಗಿ ಕನ್ನಡ ಮರೆಯಾಗುತ್ತಿದೆ ಎಂದು ತಿಳಿಸಿದರು.
ಮುಖ್ಯ ಭಾಷಣಕಾರರಾಗಿ ಮಾತನಾಡಿದ ವಿಮಲ, ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಗೌರವ ಸಿಗುತ್ತಿರುವುದು ಕನ್ನಡ ರಾಜ್ಯೋತ್ಸವದ ದಿನ ಮಾತ್ರ. ಆಂಗ್ಲ ಭಾಷೆಯ ವ್ಯಾಮೋಹದಿಂದ ಕನ್ನಡ ಅವನತಿ ಹಾದಿಯಲ್ಲಿದೆ. ಕರ್ನಾಟಕ ಎಂಬ ಹೆಸರನ್ನು ನಾಮಕರಣ ಮಾಡಿದ ಡಿ.ದೇವರಾಜು ಅರಸು ಅವರನ್ನು ಸ್ಮರಿಸಿದರು.
ಇದೇ ವೇಳೆ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಕಳೆದ ಸಾಲಿನಲ್ಲಿ ತಾಲೂಕಿನಲ್ಲಿ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ಎಸ್ಸೆಸ್ಸೆಲ್ಸಿ ಪ್ರವೀಣ್ಕುಮಾರ್, ಸಚಿನ್ಗೌಡ, ಎಂ.ವಸಂತ ಮತ್ತು ಪಿ.ಯು ತರಗತಿಗಳ ಎಸ್.ಎಸ್. ಗೋವಿಂದರಾಜು, ಎಸ್.ರವಿ, ಪ್ರಮೀಳ ವಿದ್ಯಾರ್ಥಿಗಳನ್ನು ಮತ್ತು ಕನ್ನಡದಲ್ಲಿ ಪಿ.ಎಚ್.ಡಿ ಮಾಡಿರುವ ನಾಗನಾಯಕ ಅವರನ್ನು, ದಸರಾ ಅಂಬಾರಿ ಆನೆ ಮಾವುತ ದೊಡ್ಡ ಮಾಸ್ತಿ, ಸಾಹಿತಿ ಮಹದೇವನಾಯಕ ಅವರನ್ನು ಸನ್ಮಾನಿಸಿದರು.
ಕಾರ್ಯಕ್ರಮಕ್ಕೂ ಮುನ್ನ ತಾಲೂಕು ಕಚೇರಿ ಮುಂಭಾಗದಲ್ಲಿ ತಹಸೀಲ್ದಾರ್ ಕೆ.ಕೃಷ್ಣ ರಾಷ್ಟ್ರ ಧ್ವಜವನ್ನು, ಕಾರ್ಯನಿರ್ವಹಣಾಧಿಕಾರಿ ಲಿಂಗರಾಜು ಕನ್ನಡ ಧ್ವಜವನ್ನು ಹಾರಿಸಿದರು. ನಂತರ ಒಂದನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ವರದರಾಜಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ನಂದಿಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಶಾಸಕರು ಮೆರವಣಿಗೆಗೆ ಚಾಲನೆ ನೀಡಿದರು. ಕಾಲೇಜು ಆವರಣದಲ್ಲಿ ತಾಲೂಕು ಛಾಯಾಗ್ರಾಹಕರ ಸಂಘದಿಂದ ಏರ್ಪಡಿಸಿದ್ದ ಛಾಯಾಚಿತ್ರ ಪ್ರದರ್ಶನವನ್ನು ಶಾಸಕರು ವೀಕ್ಷಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮೂರು ಸ್ತಬ್ದಚಿತ್ರಗಳಿಗೆ ಪ್ರಥಮ ಸ್ಥಾನ ಸೇಂಟ್ ಮೇರಿಸ್ ಪ್ರೌಢಶಾಲೆ, ದ್ವಿತೀಯ ಸ್ಥಾನ ಆದರ್ಶ ಶಾಲೆ, ತೃತೀಯ ಸ್ಥಾನ ವಾಲ್ಮೀಕಿ ಸಂಘಕ್ಕೆ ನೀಡಲಾಯಿತು. ಇತರೆ ಸ್ತಬ್ದಚಿತ್ರಗಳಿಗೆ ಸಮಾಧಾನಕಾರ ಬಹುಮಾನ ಘೋಷಿಸಲಾಯಿತು. ಇದೇ ಮೊದಲ ಬಾರಿಗೆ ಶಾಸಕ ಚಿಕ್ಕಮಾದು, ನೃತ್ಯ ಮತ್ತು ನಾಟ್ಯ ಪ್ರದರ್ಶಿಸಿದ ಶಾಲಾ ಮಕ್ಕಳಿಗೆ ನಗದು ಬಹುಮಾನ ವಿತರಿಸಿದರು.
ತಾಪಂ ಪ್ರಭಾರ ಅಧ್ಯಕ್ಷ ಬಿ.ಜಿ. ಮಹೇಂದ್ರ, ಜಿಪಂ ಸದಸ್ಯರಾದ ಡಿ.ಎಂ. ಚಿಕ್ಕಣ್ಣೇಗೌಡ, ನಂದಿನಿ, ಎಚ್.ಆರ್. ಭಾಗ್ಯಲಕ್ಷ್ಮಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ದೇ.ರಂ. ಮಹೇಶ್, ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಪ್ರಮೋದ್, ಲಯನ್ಸ್ ಅಧ್ಯಕ್ಷ ಸಿ.ಬಸವರಾಜು, ಮಂಜುಕೋಟೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

