ಹಸುಗೂಸನ್ನು ನಾಲೆಗೆಸೆದ ಮಹಾತಾಯಿ ಪೊಲೀಸರ ಅತಿಥಿ
ಕ.ಪ್ರ.ವಾರ್ತೆ ಟಿ.ನರಸೀಪುರ ಅ. 1
ಮೂರು ತಿಂಗಳ ಹಸುಗೂಸನ್ನು ಹೆತ್ತ ತಾಯಿಯೇ ನಾಲೆಗೆಸೆದ ಘಟನೆ ತಾಲೂಕಿನ ಹೆಗ್ಗೂರು ಗ್ರಾಮದ ಬಳಿ ಕಳೆದ ರಾತ್ರಿ ನಡೆದಿದೆ.
ಮಳವಳ್ಳಿ ತಾಲೂಕಿನ ಮಾಗನೂರು ಗ್ರಾಮದ ಶಿವಸ್ವಾಮಿ ಎಂಬವರ ಪತ್ನಿ ಜ್ಯೋತಿ ತನ್ನ ಕರುಳಬಳ್ಳಿ ಮೂರು ತಿಂಗಳ ಹೆಣ್ಣು ಮಗುವನ್ನು ನಾಲೆ ಬೀಸಾಕಿದ ಮಹಾತಾಯಿ. ಮಾಡಿದ ತಪ್ಪಿಗೆ ಈಗ ಪೊಲೀಸರ ಅತಿಥಿ.
ಮೂರು ವರ್ಷಗಳ ಹಿಂದೆ ಶಿವಸ್ವಾಮಿ ಎಂಬವರನ್ನು ವಿವಾಹವಾಗಿದ್ದ ಜ್ಯೋತಿಗೆ ಈಗಾಗಲೇ ಎರಡು ವರ್ಷದ ಹೆಣ್ಣು ಮಗುವೊಂದಿದ್ದು, ಎರಡನೇ ಬಾರಿಗೂ ಹೆಣ್ಣು ಮಗು ಜನಿಸಿದ್ದಕ್ಕೆ ಬೇಸತ್ತು ಸೋಮವಾರ ರಾತ್ರಿ ಮೂರು ತಿಂಗಳ ಹಸುಗೂಸನ್ನು ನಾಲೆಗೆಸೆದು ಹತ್ಯೆ ಮಾಡಿದ್ದಾಳೆ. ಮಂಗಳವಾರ ಬೆಳಗ್ಗೆ ಹೆಗ್ಗೂರು ನಾಲೆಯಲ್ಲಿ ಮಗುವಿನ ಶವ ಪತ್ತೆಯಾಗಿದೆ.
ಬೆಂಡರವಾಡಿ ಗ್ರಾಮದ ಅಜ್ಜಿಯ ಮನೆಯಲ್ಲಿ ಬಾಣಂತನದ ಆರೈಕೆಗೆಂದು ಬಂದಿದ್ದ ಜ್ಯೋತಿಯನ್ನು ಪತಿ ಶಿವಸ್ವಾಮಿ ಸೋಮವಾರ ಬೆಳಗ್ಗೆ ಕಾರ್ಯನಿಮಿತ್ತ ಮಳವಳ್ಳಿಗೆ ಕರೆದೊಯ್ದಿದ್ದ. ನಂತರ ಪತ್ನಿಯೊಬ್ಬಳನ್ನೆ ಬೆಂಡರವಾಡಿಗೆ ಜೋಪಾನವಾಗಿ ತೆರಳುವಂತೆ ಟೆಂಪೋ ಹತ್ತಿಸಿದ್ದಾರೆ. ಬೆಂಡರವಾಡಿಯಲ್ಲಿ ಇಳಿಯಬೇಕಿದ್ದ ಆಕೆ ಹೆಗ್ಗೂರು ಗೇಟ್ನಲ್ಲಿಳಿದು ನಾಲೆಗೆ ಮಗುವನ್ನು ಎಸೆದಿದ್ದಾಳೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಗ್ಗೂರು ಗೇಟ್ ಸ್ಥಳ ಪರಿಶೀಲನೆ ನಡೆಸಿ, ಸ್ಥಳೀಯರನ್ನು ವಿಚಾರಿಸಿದ ನಂತರ ಜ್ಯೋತಿಯನ್ನು ತೀವ್ರ ತನಿಖೆಗೊಳಪಡಿಸಿದರು. ಪ್ರಕರಣವನ್ನು ಬೇಧಿಸಿದ ಬನ್ನೂರು ಪೊಲೀಸ್ ಮುಖ್ಯಪೇದೆ ಶಾಂತಲಿಂಗು, ಪಚ್ಚೇಗೌಡ ಅವರು ಮೊಕದ್ದಮೆ ದಾಖಲಿಸಿಕೊಂಡು ಮಗು ಹತ್ಯೆಗೈದ ಜ್ಯೋತಿಯನ್ನು ಬಂಧಿಸಿ, ಮುಂದಿನ ಕ್ರಮಕ್ಕಾಗಿ ಪ್ರಕರಣವನ್ನು ಮಳವಳ್ಳಿ ತಾಲೂಕಿನ ಕಿರುಗಾವಲು ಠಾಣೆಗೆ ವರ್ಗಾಯಿಸಿದ್ದಾರೆ.
ಕಾಲೇಜಿನಲ್ಲಿ ಬ್ಯಾಟರಿ ಕಳವು
ಮೈಸೂರು: ಮಹಾರಾಜ ಕಾಲೇಜು ಹೊಸ ಕಟ್ಟಡದ ಆವರಣದಲ್ಲಿದ್ದ 20 ಬ್ಯಾಟರಿಗಳ ಪೈಕಿ 8 ಬ್ಯಾಟರಿಗಳನ್ನು ಕಳವಾಗಿದೆ. ಹೊಸ ಕಟ್ಟಡದ ಬಾಗಿಲು ಮುರಿದು ಒಳ ನುಗ್ಗಿ 20 ಸಾವಿರ ಮೌಲ್ಯದ 8 ಬ್ಯಾಟರಿಗಳನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಲಕ್ಷ್ಮಿಪುರಂ ಠಾಣೆ ಎಸ್ಐ ದೇವಮ್ಮ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಪರಿಚಿತ ವ್ಯಕ್ತಿ ಸಾವು
ಮೈಸೂರು: ನಗರದ ಚೆಲುವಾಂಬ ಆಸ್ಪತ್ರೆ ಮುಂಭಾಗ ಅಪರಿಚಿತ ವ್ಯಕ್ತಿಯೊಬ್ಬರು ಯಾವುದೋ ಕಾಯಿಲೆಯಿಂದ ನರಳಿ ಮೃತಪಟ್ಟಿದ್ದಾರೆ. ಚಹರೆ- 35 ವರ್ಷ, 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಮಾಸಲು ಬಣ್ಣದ ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418306 ಸಂಪರ್ಕಿಸಲು ದೇವರಾಜ ಠಾಣೆ ಪೊಲೀಸರು ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

