'ಉದ್ಯೋಗ ಸೃಷ್ಟಿಗೆ ಯುವಕರು ಮುಂದಾಗಿ'
ಕ.ಪ್ರ.ವಾರ್ತೆ ಮೈಸೂರು ಅ. 3
ಯುವಜನತೆ ಉದ್ಯೋಗ ಸೃಷ್ಟಿಗೆ ಹೆಚ್ಚಾಗಿ ಮಹತ್ವ ನೀಡಬೇಕು ಎಂದು ವಿಜಯ್ ಫೌಂಡೇಷನ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಪೈ ಹೇಳಿದರು.
ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ 2013- 14ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ವೇದಿಕೆ ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಉದ್ಯೋಗ ಹುಡುಕುವಲ್ಲಿ ಮಾತ್ರ ಯುವಜನತೆ ಕಾಲಹರಣ ಮಾಡಬಾರದು. ಪದವಿ ಗಳಿಸಿರುವ ಅರ್ಹತೆಯ ಆಧಾರದ ಮೇಲೆ ಸ್ವಂತ ಉದ್ಯೋಗ ಅವಲಂಬಿಸುವ ಮೂಲಕ ಉದ್ಯೋಗ ಸೃಷ್ಟಿಸುವ ಕೆಲಸ ಮಾಡಬೇಕು. ಆ ಮೂಲಕ ನಿರುದ್ಯೋಗ ಸಮಸ್ಯೆಗೆ ಪರಿಹಾರ ರೂಪಿಸುವ ಹೊಣೆಗಾರಿಕೆಯನ್ನು ವಹಿಸಬೇಕು. ಅಂತಹ ಸಾಮಾರ್ಥ್ಯ ಬೆಳೆಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹೆಚ್ಚಾಗಿ ಕಾಣಬಹುದು. ಆದರೆ ಸಂಶೋಧನೆ ಕೊರತೆ ಕಂಡುಬಂದಿದೆ. ಆದ್ದರಿಂದ ಸೃಜನಶೀಲತೆ ಹಾಗೂ ಸಂಶೋಧನೆ ಇವುಗಳ ಸಮತೋಲ ಕಾಪಾಡುವುದು ಅಗತ್ಯವಿದೆ. ಈ ದಿಸೆಯಲ್ಲಿ ತಮ್ಮ ಸೃಜನಶೀಲತೆಯೊಂದಿಗೆ ಕಾರ್ಯಕ್ಷಮತೆ, ನಡವಳಿಕೆ ಹಾಗೂ ವ್ಯಕ್ತಿತ್ವ ನಿರ್ಮಾಣದಿಂದ ಹೊಸ ಸಂಶೋಧನೆಯತ್ತ ತೊಡಗಿಸಿಕೊಂಡಾಗ ಉಜ್ವಲ ಭವಿಷ್ಯ ಸಾಧ್ಯ ಎಂದು ತಿಳಿಸಿದರು.
ದೇಶ ಕಟ್ಟಲು ಮುಂದಾಗಿ: ಪ್ರಪಂಚದ ಪ್ರಸ್ತುತ ವಿದ್ಯಮಾನಗಳನ್ನು ವಿದ್ಯಾರ್ಥಿಗಳು ಅರಿಯುವುದು ಅವಶ್ಯಕ. ಅಂತೆಯೇ ಸಮಾಜದಲ್ಲಿನ ಆಗುಹೋಗುಗಳನ್ನು ಬಹು ಎಚ್ಚರದಿಂದ ಗಮನಿಸಬೇಕು. ಯುವಜನತೆ ಭಾರತದ ಭವಿಷ್ಯ ನಿರ್ಮಾಪಕರು ಆಗಿರುವುದರಿಂದ ಜ್ಞಾನ, ಕೌಶಲ ಹಾಗೂ ಸೃಜನಶೀಲತೆ ಮೂಲಕ ದೇಶ ಕಟ್ಟುವ ಕೆಲಸಕ್ಕೆ ಮುಂದಾಗಬೇಕು ಎಂದು ಆಶಿಸಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪಗೌಡ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಹಾಗೂ ಮಾಜಿ ಮೇಯರ್ ಪಿ.ವಿಶ್ವನಾಥ್, ಖಜಾಂಚಿ ಎಸ್.ಎನ್. ಲಕ್ಷ್ಮೀನಾರಾಯಣ ಮುಖ್ಯ ಅತಿಥಿಯಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ.ಎನ್. ಶಂಕರ್ ಹಾಗೂ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ. ಎಸ್. ಮರಿಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

