ಮೈಸೂರು

ಸುದ್ದಿ ಸಂಕ್ಷೇಪ

Published On :

'ಖಾತ್ರಿಯಿಂದ ಅಭಿವೃದ್ಧಿ'
ಹುಣಸೂರು: ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಖಾತ್ರಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಿಸಿದಲ್ಲಿ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂದು ಜಿಪಂ ಸದಸ್ಯ ರಮೇಶ್ ಅಭಿಪ್ರಾಯಪಟ್ಟರು. ತಾಲೂಕಿನ ಕಸಬಾ ಹೋಬಳಿಯ ಆಸ್ಪತ್ರೆ ಕಾವಲ್ ಗ್ರಾಪಂನಲ್ಲಿ 2013-14ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮದ ವಿನೋಬಾ ಕಾಲೋನಿಯ ದೊಡ್ಡಮ್ಮನ ದೇವಸ್ಥಾನದ ಬಳಿಯಿರುವ ಗೋಕಟ್ಟೆಯಲ್ಲಿ ಹೂಳೆತ್ತುವ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು. ತಾಪಂ ಸದಸ್ಯೆ ಜಯಂತಿ ವೀರಭದ್ರಪ್ಪ, ಗ್ರಾಪಂ ಅಧ್ಯಕ್ಷ ಆರ್. ರಾಮಯ್ಯ, ಉಪಾಧ್ಯಕ್ಷ ಪಿ.ಕೆ. ಸೋಮಣ್ಣ ಇದ್ದರು.
ಮಾಜಿ ಸದಸ್ಯ ಲಕ್ಷ್ಮಣಶೆಟ್ಟಿ ನಿಧನ
ಕೆ.ಆರ್. ನಗರ: ಪಟ್ಟಣ ಪುರಸಭೆಯ ಮಾಜಿ ಸದಸ್ಯ ಕೆ.ಟಿ. ಲಕ್ಷ್ಮಣಶೆಟ್ಟಿ (72) ಭಾನುವಾರ ಬೆಳಗ್ಗೆ ನಿಧನರಾದರು.  ಲಕ್ಷ್ಮಣಶೆಟ್ಟಿ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು ಇದ್ದಾರೆ. ಭಾನುವಾರ ಪಟ್ಟಣದ ಸಾರ್ವಜನಿಕ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಿತು. ಸಂಸದ ಎಚ್. ವಿಶ್ವನಾಥ್, ಮಾಜಿ ಸಚಿವ ಎಸ್. ನಂಜಪ್ಪ, ಶಾಸಕ ಸಾ.ರಾ. ಮಹೇಶ್, ಕಾಂಗ್ರೆಸ್ ಮುಖಂಡ ದೊಡ್ಡಸ್ವಾಮೇಗೌಡ, ಪುರಸಭಾ ಮಾಜಿ ಅಧ್ಯಕ್ಷ ತಮ್ಮನಾಯಕ, ನರಸಿಂಹರಾಜ್, ವೈ.ಆರ್. ಪ್ರಕಾಶ್, ಭಾಗ್ಯಲಕ್ಷ್ಮಿ, ಜಿ.ಪಂ. ಸದಸ್ಯ ಸಿ.ಜೆ. ದ್ವಾರಕೀಶ್,  ಸಂತಾಪ ಸೂಚಿಸಿದ್ದಾರೆ.
ಸಾಲಿಗ್ರಾಮ:ಗಣೇಶವಿಸರ್ಜನೆ
ಸಾಲಿಗ್ರಾಮ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಶ್ರೀ ಮಹಾಗಣಪತಿ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಭಾನುವಾರ ವಿಸರ್ಜಿಸಲಾಯಿತು. ಗಣೇಶ ವಿಗ್ರಹವನ್ನು ತೆರೆದ ವಾಹನದಲ್ಲಿ ಪ್ರತಿಷ್ಠಾಪಿಸಿ ವಿದ್ಯುತ್ ದೀಪಾಲಂಕಾರ ಹಾಗೂ ಹೂವಿನ ಪಲ್ಲಕ್ಕಿಯೊಂದಿಗೆ ಶೃಂಗರಿಸಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗೆ ಗ್ರಾಮದ ಮಹಾವೀರ ರಸ್ತೆ, ಚುಂಚನಕಟ್ಟೆ ರಸ್ತೆ, ಕಾಲುವೆ ಬೀದಿ, ಬ್ರಾಹ್ಮಣರ ಬೀದಿ, ಬ್ಯಾಂಕ್ ರಸ್ತೆಗಳ ಮೂಲಕ ವಿನಾಯಕನನ್ನು ವಿವಿಧ ಕಲಾ ತಂಡಗಳ ನೃತ್ಯ, ಗೀತಗಾಯನ ಹಾಗೂ ಮಂಗಳವಾದ್ಯಗಳೊಂದಿಗೆ ಅಪಾರ ಪ್ರಮಾಣದ ಪಟಾಕಿಗಳನ್ನು ಸಿಡಿಸಿ ಮೆರವಣಿಗೆ ನಡೆಸಿ ವಿಸರ್ಜಿಸಲಾಯಿತು. ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಅಪಘಾತ: ಒಬ್ಬ ಸಾವು
ಟಿ. ನರಸೀಪುರ: ತವೇರಾ ಕಾರು ಮತ್ತು ಬಜಾಜ್ ಚೇತಕ್ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬ ಗಾಯಗೊಂಡಿರುವ ಘಟನೆ ತಾಲೂಕಿನ ಆಲಗೂಡು ಗ್ರಾಮದ ಬಳಿ ಶನಿವಾರ ರಾತ್ರಿ ನಡೆದಿದೆ. ಆಲಗೂಡು ಗ್ರಾಮದ ನಾರಾಯಣ ಎಂಬವರ ಪುತ್ರ ಹರೀಶ್ (36) ಮೃತಪಟ್ಟವರು. ರಮೇಶ ಎಂಬ ಮತ್ತೊಬ್ಬ ತೀವ್ರವಾಗಿ ಗಾಯಗೊಂಡು ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.