ಮೈಸೂರು

ಕರಾಟೆ ಕಲಿಕೆ ಕಡ್ಡಾಯ ಸ್ವಾಗತಾರ್ಹ: ಕೋಟಿ

Published On :

ಕ.ಪ್ರ.ವಾರ್ತೆ  ಮೈಸೂರು  ಅ. 6
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕರಾಟೆ ಕಲಿಕೆ ಕಡ್ಡಾಯಗೊಳಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಹೇಳಿದರು. ಒಕಿನವ ಶೋರಿನ್‌ರ್ಯೂ ಶೋರಿನ್ ಕೈ ಕರಾಟೆ ಸಂಸ್ಥೆಯು ಬೋಗಾದಿಯ ಅಮೃತ ವಿದ್ಯಾಲಯದಲ್ಲಿ ಆಯೋಜಿರುವ ಮೂರು ದಿನಗಳ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಹಾಗೂ ಕೊಬುಡೊ ತರಬೇತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಯಲ್ಲಿ ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸಲು ಸರ್ಕಾರ ಮುಂದಾಗಿ ಅವರ ಸ್ವಯಂ ರಕ್ಷಣೆಗೆ ತರಬೇತಿ ನೀಡುತ್ತಿರುವ ಕಾರ್ಯ ಪ್ರಸ್ತುತ ಅವಶ್ಯಕ. ಇಂದಿನ ಯುವಜನತೆ ಈ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಜಪಾನ್ ದೇಶದ ಸಾಂಪ್ರದಾಯಿಕ ಕಲೆಯನ್ನು ಆ ದೇಶದ ನುರಿತ ತರಬೇತುದಾರರಿಂದ ನೇರವಾಗಿ ಕಲಿಯಲು ಈ ಶಿಬಿರ ಏರ್ಪಡಿಸಿರುವುದು ಮೆಚ್ಚುಗೆಯ ಸಂಗತಿ ಎಂದರು.
ಅಮೃತ ವಿದ್ಯಾಲಯದ ಪ್ರಾಂಶುಪಾಲ ವಿರಾಜಮೃತ ಚೈತನ್ಯ, ಶ್ರೀಲಂಕಾದ ನಿವೃತ್ತ ಅಧಿಕಾರಿ ಡಾ. ಚಂದ್ರ ಅಬೆಶೇಖರ್ ಹಾಗೂ ನಗರ ಪಾಲಿಕೆ ಮಾಜಿ ಸದಸ್ಯ ಆರ್.ಸುನಂದಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಶಿಬಿರದ ಸಂಘಟಕ ಹಾಗೂ ತರಬೇತಿದಾರ ರೆನ್ಸಿ ಎಸ್. ಸುನಿಲ್‌ಕುಮಾರ್, ಸಂಚಾಲನ ಸಮಿತಿ ಕಾರ್ಯದರ್ಶಿ ಟಿ.ಕೆ. ಸುಕುಮಾರನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ನಂತರ ನಡೆದ ತರಬೇತಿಯಲ್ಲಿ ಜಪಾನಿನ ಕರಾಟೆ ಶಿಕ್ಷಕರಾದ ಹಂಶಿ ಕೈಶಿನ್ ಕಾಕಿನೊಹನ, ಸೆನ್ನೈ ತೈಸೈ ಓಟ, ಸನ್ಸೈ ಹಿಕುರ ಕಾಗೆಕಿ ಹಾಗೂ ಶ್ರೀಲಂಕಾದ ಕ್ಯೋಶಿ ಎಚ್. ಗಮಿನಿ ಸೊಯೊಸ ಅವರು ಬ್ರೌನ್ ಆ್ಯಂಡ್ ಬ್ಲಾಕ್ ಬೆಲ್ಟ್‌ಗಳಿಗೆ ಟೋನ್ಫಾ ಮತ್ತು ಬೋ ಎಂಬ ಆಯುಧ ಕಲೆಯನ್ನು ಹಾಗೂ ಬ್ರೌನ್ ಆ್ಯಂಡ್ ಬ್ಲಾಕ್ ಬೆಲ್ಟ್‌ಗಳಿಗೆ ಸಾಂಪ್ರದಾಯಿಕ ಕರಾಟೆ ಕಲೆಯ ತರಬೇತಿ ನೀಡಿದರು. ಶಿಬಿರದಲ್ಲಿ ಸುಮಾರು 100 ಮಂದಿ ಭಾಗವಹಿಸಿದ್ದಾರೆ.
ಕರಾಟೆ ಪಟುಗಳ ಮೆರವಣಿಗೆ: ಮೈಸೂರು ಕರಾಟೆ ಅಸೋಸಿಯೇಷನ್ ವತಿಯಿಂದ ಕರಾಟೆ ಪಟುಗಳ ಮೆರವಣಿಗೆಯನ್ನು ಭಾನುವಾರ ಏರ್ಪಡಿಸಿತ್ತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಿಸ್ಥಾನದ ಮುಂಭಾಗದಿಂದ ಹೊರಟ ಈ ಮೆರವಣಿಗೆಯನ್ನು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಉದ್ಘಾಟಿಸಿದರು. ನಂತರ ಅಲ್ಲಿಂದ ಹೊರಟ ಮೆರವಣಿಗೆಯು ಪ್ರಮುಖ ರಸ್ತೆಯಲ್ಲಿ ಸಾಗಿ ನಜರ್‌ಬಾದಿನ ನಿಂಬುಜಾದೇವಿ ದೇವಸ್ಥಾನದ ಬಳಿ ಅಂತ್ಯಗೊಂಡಿತು.
ದಸರಾ ಕರಾಟೆ ಸ್ಪರ್ಧೆಯ ಆಯ್ಕೆಗಾಗಿ ಅ.7 ರಂದು ಬೆಳಗ್ಗೆ 8 ವಿನಾಯಕನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಕರಾಟೆ ಸ್ಪರ್ಧೆ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಎನ್. ಶಂಕರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.