ಸಾಂಸ್ಕೃತಿಕ ಕೇಂದ್ರವಾದ ಚಿಕ್ಕ ಗಡಿಯಾರ ವೃತ್ತ
ಡಿ.ಎನ್. ಮಹೇಂದ್ರ
ಮೈಸೂರು: ಮೈಸೂರಿನ ಪಾರಂಪರಿಕ ಕಟ್ಟಡಗಳ ಸಾಲಿಗೆ ಚಿಕ್ಕ ಗಡಿಯಾರವೂ ಸೇರುತ್ತದೆ. ಬ್ರಿಟಿಷ್ ವೈಸರಾಯ್ ಡಫರಿನ್ನ ಗೌರವಾರ್ಥವಾಗಿ ನಿರ್ಮಿಸಿರುವ ಈ ಸ್ಮಾರಕ ದೇವರಾಜ ಮಾರುಕಟ್ಟೆಗೆ ಹೊಂದಿಕೊಂಡಂತೆ ಇದೆ. ಇದುವರೆಗೆ ಕೇವಲ ಪಾರಂಪರಿಕ ಸ್ಮಾರಕವಾಗಿದ್ದ ಚಿಕ್ಕ ಗಡಿಯಾರ ಈಗ ಸಾಂಸ್ಕೃತಿಕ ಕೇಂದ್ರವಾಗಿದೆ.
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ನಗರದ ವಿವಿಧೆಡೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಹಿಂದೆ ಪುರಭವನ, ಜಗನ್ಮೋಹನ ಅರಮನೆ, ಕಲಾಮಂದಿರ, ವೀಣೆ ಶೇಷಣ್ಣ ಭವನ, ನಾದಬ್ರಹ್ಮ ಸಂಗೀತ ಸಭಾ ಮುಂತಾದ ಕಡೆಗಳಲ್ಲಿ ಮಾತ್ರ ಕಾರ್ಯಕ್ರಮ ಆಯೋಜಿಸಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ಚಿಕ್ಕ ಗಡಿಯಾರ ಸ್ಮಾರಕವನ್ನು ಕೇಂದ್ರವಾಗಿರಿಸಿಕೊಂಡು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಹಲವು ದಶಕಗಳವರೆಗೆ ಚಿಕ್ಕ ಗಡಿಯಾರ ವೃತ್ತ ಕೇವಲ ಸ್ಮಾರಕವಾಗಿತ್ತು. ಆದರೂ ಅದರ ಸಂರಕ್ಷಣೆಯ ಹೊಣೆಯನ್ನು ವಹಿಸಿಕೊಂಡವರು ಸರಿಯಾಗಿ ನಿರ್ವಹಿಸಿರಲಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಪಾಲಿಕೆ ಸದಸ್ಯ ಹಾಗೂ ಮಾಜಿ ಉಪ ಮೇಯರ್ ಎಂ.ಜೆ. ರವಿಕುಮಾರ್ ವಿಶೇಷ ಆಸಕ್ತಿ ವಹಿಸಿ ಚಿಕ್ಕ ಗಡಿಯಾರ ವೃತ್ತವನ್ನು ಅಭಿವೃದ್ಧಿಪಡಿಸಿದ್ದಾರೆ. ಮುಖ್ಯಮಂತ್ರಿಗಳ 100 ಕೋಟಿ ಅನುದಾನದಡಿ ಕೈಗೊಂಡ ಕಾಮಗಾರಿಗಳಲ್ಲಿ ಇದೂ ಒಂದು. ಸುಮಾರು 1 ಕೋಟಿ ವೆಚ್ಚದಲ್ಲಿ ಈ ಸ್ಮಾರಕ ಸಂರಕ್ಷಿಸಲಾಗಿದೆ. 18 ಲಕ್ಷ ವೆಚ್ಚದಲ್ಲಿ ಮಧ್ಯಪ್ರದೇಶದ ಇಂಧೋರ್ನಿಂದ ಪಾರಂಪರಿಕ ಶೈಲಿಯ ವಿದ್ಯುತ್ ದೀಪದ ಕಂಬಗಳನ್ನು ತರಿಸಲಾಗಿದೆ.
ದುಬೈ, ಇಂಗ್ಲೆಂಡ್ನಲ್ಲಿರುವ ಅನೇಕ ಸ್ಮಾರಕಗಳ ಮಾದರಿಯಲ್ಲಿಯೆ ಚಿಕ್ಕಗಡಿಯಾರ ಅಭಿವೃದ್ಧಿಪಡಿಸಲಾಗಿದೆ. ಈ ಬಾರಿಯ ದಸರಾ ಮಹೋತ್ಸವ ಅಂಗವಾಗಿ ಚಿಕ್ಕ ಗಡಿಯಾರ ವೇದಿಕೆಯಲ್ಲಿ ಮಹಿಳಾ ಕಲಾವಿದರಿಂದ ವೀರಗಾಸೆ, ಚೌಡಿಕೆ ಪದ, ಕರಡಿ ಮಜಲು, ಸುಗಮ ಸಂಗೀತ, ಕಂಸಾಳೆ ಜಾನಪದ ಸಂಗೀತ, ಜಾನಪದ ಸಂಗೀತ ಮತ್ತು ಸಂಗೀತ ವೈವಿಧ್ಯ ಕಾರ್ಯಕ್ರಮಗಳು, ಸೋಂಗಿ ಮುಖವಾಟೆ ಜಾನಪದ ನೃತ್ಯ, ಹಿಂದೂಸ್ತಾನಿ ಸಂಗೀತ, ಕಂಸಾಳೆ, ಸುಗಮ ಸಂಗೀತ, ರಂಗ ಗೀತೆ, ತತ್ವಪದ, ತಾಸೇ ವಾದನ, ಸುಗಮ ಸಂಗೀತ, ಅರ್ಜುನ ನೃತ್ಯ ಮತ್ತು ಪಟಿಯಾನಿ ನೃತ್ಯ ಪ್ರದರ್ಶನ ಇರುತ್ತದೆ.
ಬ್ರಿಟಿಷ್ ವೈಸರಾಯ್ ಡಫರಿನ್ ಅವರ ಗೌರವಾರ್ಥವಾಗಿ ಈ ಚಿಕ್ಕ ಗಡಿಯಾರ ನಿರ್ಮಿಸಲಾಗಿತ್ತು. ಇದನ್ನು ಇಂಗ್ಲೆಂಡ್ನ ಗಡಿಯಾರ ಗೋಪುರದ ಮಾದರಿಯಲ್ಲಿಯೆ ನಿರ್ಮಿಸಿರುವುದು ವಿಶೇಷ. ಇಂತಹ ಅಪರೂಪದ ಸ್ಮಾರಕದ ಕಡೆಗೆ ವಿದೇಶಿಯರು ಹೊರತುಪಡಿಸಿ ಸ್ಥಳೀಯರು ಹೆಚ್ಚು ಗಮನ ಹರಿಸಿರಲಿಲ್ಲ. ಈಗ ಚಿಕ್ಕಗಡಿಯಾರ ಅಭಿವೃದ್ಧಿಪಡಿಸಿದ ಬಳಿಕ ಅನೇಕರು ಆ ಕಡೆಗೆ ಆಕರ್ಷಿತರಾಗಿದ್ದಾರೆ. ಅಲ್ಲದೆ ದಸರಾ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಿಕ್ಕ ಗಡಿಯಾರ ವೃತ್ತವನ್ನು ವೇದಿಕೆ ಆಗಿ ಬಳಸಿಕೊಂಡಿರುವುದು ಅದರ ಹಿರಿಮೆಯನ್ನು ಮತ್ತಷ್ಟು ಹೆಚ್ಚಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

