ಮಹಾರಾಣಿ ಕಾಲೇಜು ವಾರ್ಷಿಕ ಸಂಚಿಕೆ ಬಿಡುಗಡೆ
ಕ.ಪ್ರ.ವಾರ್ತೆ , ಮೈಸೂರು , ಅ. 16
ವಿದ್ಯಾರ್ಥಿಗಳು ಪದವಿಯ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತಮ ಶ್ರೇಣಿಯನ್ನು ಪಡೆಯಬೇಕು, ಮುಂದೆ ಭವಿಷ್ಯದಲ್ಲಿ ಯಾವುದೇ ವೃತ್ತಿಯನ್ನು ಕೈಗೊಂಡರೂ ವ್ಯಕ್ತಿತ್ವ ಉನ್ನತಿಯೆಡೆಗೆ ನಡೆಯಬೇಕಾದ ಕರ್ತವ್ಯ ನಿಮ್ಮದಾಗಿದೆ ಎಂದು ನಿವೃತ್ತ ಪ್ರಾಂಶುಪಾಲ ಪ್ರೊ. ಎಚ್.ಬಿ. ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಕಲಾ ಮಂಟಪದಲ್ಲಿ ಹಿರಿಯ ವಿದ್ಯಾರ್ಥಿನಿಯರ ಸಂಘದಿಂದ ಪದವೀಧರರ ದಿನಾಚರಣೆ ಹಾಗೂ ಪೂರ್ಣಿಮಾ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭದಲ್ಲಿ ವಿದ್ಯಾರ್ಥಿನಿಯರನ್ನು ಮಾತನಾಡಿದ ಅವರು, ಈ ಕಾಲೇಜಿನಲ್ಲಿ ಎಲ್ಲ ಅಧ್ಯಾಪಕ ವರ್ಗದವರು ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳಾಗಿದ್ದು, ವಿದ್ಯಾರ್ಥಿನಿಯರು ಇದರ ಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು. ನಿಮ್ಮ ಎಲ್ಲ ಕಾರ್ಯಗಳಿಗೆ ನಮ್ಮೆಲ್ಲರ ಸಹಕಾರ ಸದಾ ಇರುತ್ತದೆ. ಆದ್ದರಿಂದ ಇವೆಲ್ಲದರ ಒತ್ತಾಸೆಯಿಂದ ನೀವು ಈ ಕಾಲೇಜಿಗೆ ಉತ್ತಮ ಹೆಸರು ತಂದು, ಕಾಲೇಜಿನ ಬೆಳವಣಿಗೆಗೂ ಸಹಕರಿಸಬೇಕು ಎಂದು ಕರೆ ನೀಡಿದರು.
ಕರ್ನಾಟಕ ಮಾಜಿ ಟೇಬಲ್ ಟೆನ್ನಿಸ್ ಆಟಗಾರ್ತಿ ದೇವಕಿ ಮಾಧವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ವಿದ್ಯಾರ್ಥಿನಿಯರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಆಗ ಸಂಪೂರ್ಣ ವ್ಯಕ್ತಿತ್ವ ವಿಕಸನವಾಗುತ್ತದೆ.
ಜೊತೆಗೆ ಉತ್ತಮ ನಡತೆಯನ್ನು ರೂಪಿಸಿಕೊಳ್ಳಬೇಕಾದ ಅಗತ್ಯವಿದೆ. ಈ ಕಾಲೇಜಿನಲ್ಲಿ ಅಂತಹ ಉತ್ತಮ ಪರಿಸರವಿರುವುದು ನನಗೆ ಹೆಮ್ಮೆ ತಂದಿದೆ ಎಂದು ತಿಳಿಸಿದರು.
ಪ್ರೊ. ಮಧುಸೂದನ್ ರೆಡ್ಡಿ, ವಾರ್ಷಿಕ ಸಂಚಿಕೆಯಲ್ಲಿ ಅಡಕವಾಗಿರುವ ಹತ್ತಾರು ವಿಷಯಗಳ ಬಗ್ಗೆ ವಿವರವಾಗಿ ಸಭೆಗೆ ತಿಳಿಸಿದರು. ಪ್ರಾಂಶುಪಾಲೆ ಡಾ. ಜಿ.ಎಂ. ಸುಶೀಲ ಮಾತನಾಡಿದರು. ಸಂಘದ ಅಧ್ಯಕ್ಷೆ ಪ್ರೊ. ವಿ. ಕಮಲಮ್ಮ ಇದ್ದರು. ಪದವಿ ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಬೆಂಗಳೂರಿನ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಪ್ರೊ. ಎಚ್.ಆರ್. ನಟರಾಜ ಅರಸ್ ಅವರು ಅತಿ ಹೆಚ್ಚು ಅಂಕ ಗಳಿಸಿದ ಪದವಿ ವಿದ್ಯಾರ್ಥಿನಿಯರಿಗೆ ತಮ್ಮ ಅನುಪಸ್ಥಿತಿಯಲ್ಲಿ ಬಹುಮಾನ ನೀಡುವ ಏರ್ಪಾಡು ಮಾಡಿದ್ದರು. ಹಿರಿಯ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಮೀರಾ ದೀಕ್ಷಿತ್ ಪ್ರಾರ್ಥಿಸಿದರು. ಪ್ರೊ. ವಿ. ಕಮಲಮ್ಮ ಸ್ವಾಗತಿಸಿದರು. ಸುಚಿತ್ರ ವಂದಿಸಿದರು. ಡಾ. ಎಂ. ಜಮುನ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

