ರಂಗಾಯಣ ಮತ್ತೆ ವಿಶ್ವ ಮಟ್ಟದಲ್ಲಿ ಮೆರೆಯಲಿ
ಕ.ಪ್ರ.ವಾರ್ತೆ , ಮೈಸೂರು , ಅ. 16
ರಂಗಾಯಣವನ್ನು ಮತ್ತೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕಾದ ಜವಾಬ್ದಾರಿ ಜನ್ನಿಯ ಮೇಲಿದೆ ಎಂದು ರಂಗಾಯಣ ಮಾಜಿ ನಿರ್ದೇಶಕ ಸಿ. ಬಸವಲಿಂಗಯ್ಯ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕದಂಬ ರಂಗ ವೇದಿಕೆಯು ಕಸಾಪ ನಗರ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಾಯಣ ನಿರ್ದೇಶಕ ಎಚ್. ಜನಾರ್ದನ್(ಜನ್ನಿ) ಅವರನ್ನು ಅಭಿನಂದಿಸಿ ಮಾತನಾಡಿದರು.
ರಂಗಾಯಣ ಇದುವರೆಗೆ ಸ್ಥಾವರವಾಗಿತ್ತು, ನಾನು ಅದನ್ನು ಜಂಗಮ ಮಾಡುತ್ತೇನೆ ಎಂದಿರುವ ಜನಾರ್ದನ್ ಅವರು ರಂಗಾಯಣವನ್ನು ಮತ್ತೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ಕಾರಂತರು ಮತ್ತು ನಾನು ನಿರ್ದೇಶಕರಾಗಿದ್ದ ಅವಧಿಯಲ್ಲಿ ರಂಗಾಯಣ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದಿತ್ತು. ಆದರೆ ಈ ನಡುವೆ ರಂಗಾಯಣ ಮೈಸೂರಿಗೆ ಮಾತ್ರ ಸೀಮಿತವಾಯಿತು. ಹೊಸ ಕಲಾವಿದರನ್ನು ಪ್ರೋತ್ಸಾಹಿಸಿ, ತರಬೇತಿ ನೀಡಿ ರಾಜ್ಯದ ಮೂಲೆ ಮೂಲೆಗಳಲ್ಲಿ ನಾಟಕ ನಡೆಸಿ ಎಂದು ಅವರು ಸಲಹೆ ನೀಡಿದರು.
ಮುಕ್ತ ವಿವಿ ಸರ್ಟಿಫಿಕೇಟ್ ಅಗತ್ಯವಿಲ್ಲ: ಈ ಹಿಂದೆ ಇದ್ದಂತೆ ರಂಗಾಯಣಕ್ಕೆ ಹಣದ ಕೊರತೆ ಇಲ್ಲ. ಕನಸಿನ ಕೊರತೆ ಮಾತ್ರ ಇದೆ. ಆದರೆ ಜನ್ನಿಗೆ ಕನಸಿನ ಕೊರತೆ ಇಲ್ಲ ಎಂದುಕೊಳ್ಳುತ್ತೇನೆ. ಹೊಸಬರನ್ನು ರಂಗಾಯಣಕ್ಕೆ ಆಹ್ವಾನಿಸಲಾಗುತ್ತಿದೆ. ಡಿಪ್ಲೋಮಾ ತರಗತಿ ತೆರೆಯಲಾಗಿದೆ. ಆದರೆ ಮುಕ್ತ ವಿವಿಯಿಂದ ಸರ್ಟಿಫಿಕೇಟ್ ನೀಡುವ ಅಗತ್ಯವೇನು ಇಲ್ಲ. ಈ ವಿಷಯದಲ್ಲಿ ರಂಗಾಯಣವೆ ಒಂದು ವಿಶ್ವವಿದ್ಯಾನಿಲಯದಂತೆ ಕೆಲಸ ಮಾಡಬೇಕು. ಕಾರಂತರ ಬೀಜಮಂತ್ರವಾಗಿದ್ದ ಹವ್ಯಾಸಿ ರಂಗಭೂಮಿಯ ಪ್ರಯೋಗಶೀಲತೆ, ವೃತ್ತಿ ಕಂಪನಿಯ ಬದ್ಧತೆ ಸೇರಿಸಿ ಹೊಸ ಪ್ರಯೋಗ ಮಾಡಬೇಕು ಎಂದರು.
ರಂಗಾಯಣ ಒಳ್ಳೆಯ ಕೆಲಸಕ್ಕೆ ಪ್ರಚಾರ ಗಿಟ್ಟಿಸಿಕೊಂಡಿದ್ದು ಕಡಿಮೆ. ರಂಗಾಯಣಕ್ಕೆ ಈಗ 25 ವರ್ಷವಾಗಿದೆ. ತನ್ನದೆ ಆದ ಬೆಲೆ ಇದೆ. ಹೊಸ ಹೊಸ ಪ್ರಯೋಗಕ್ಕೆ ಒಡ್ಡಿಕೊಳ್ಳಬೇಕು. ಅಮೆರಿಕದಲ್ಲಿ ನಾಟಕಗಳಿಗೆ ಒಂದು ವರ್ಷಕ್ಕೆ ಮೊದಲೆ ಟಿಕೆಟ್ ಕಾಯ್ದಿರಿಸಲಾಗುತ್ತದೆ. ಅಂತೆಯೆ ಬೆಂಗಳೂರಿನಲ್ಲಿ ನಡೆಸಿದ ಮಲೆಗಳಲ್ಲಿ ಮದುಮಗಳು ನಾಟಕದ 25 ಪ್ರದರ್ಶನಗಳಿಗೆ 1 ತಿಂಗಳ ಮುಂಚೆಯೆ ಟಿಕೆಟ್ ಕಾಯ್ದಿರಿಸಲಾಗಿತ್ತು ಎಂದು ಉದಾಹರಣೆ ನೀಡಿದರು.
ಹಣದ ಕೊರತೆ ಇಲ್ಲ: ಸರ್ಕಾರ ನೀನಾಸಂ ಮುಂತಾದ ರಂಗಸಂಸ್ಥೆಗಳಿಗೆ ವರ್ಷವೂ ಹೆಚ್ಚು ಅನುದಾನ ನೀಡುತ್ತದೆ. ಆದರೆ ರಂಗಾಯಣಕ್ಕೆ ಈ ಹಿಂದೆ ಅನುದಾನದ ಕೊರತೆ ಇತ್ತು. ಆದರೆ ಈಗ ರಂಗಾಯಣಕ್ಕೆ ಅನುದಾನದ ಕೊರತೆ ಇಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ 250 ಕೋಟಿ ಅನುದಾನ ನೀಡಲಾಗಿದೆ. ಅದನ್ನು ಹೇಗೆ ಬಳಸಬೇಕು ಎಂಬುದು ಇಲಾಖೆಗೆ ಗೊತ್ತಿಲ್ಲ. ಅದನ್ನು ನೀವು ಬಳಸಿಕೊಳ್ಳಬೇಕು. ಒಳ್ಳೆಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಹಣ ಬಿಡುಗಡೆ ಮಾಡಿಸಿಕೊಳ್ಳುವುದು ದೊಡ್ಡದೇನಲ್ಲ ಎಂದು ಹೇಳಿದರು.
ನಾಟಕ ನೋಡಬೇಕು: ರಂಗಾಯಣ ಕಲಾವಿದರು ಇತರರು ಮಾಡುವ ನಾಟಕಗಳನ್ನು ನೋಡುವುದಿಲ್ಲ. ತಾವೆ ದೊಡ್ಡ ಕಲಾವಿದರು ಎಂದು ತಿಳಿದಿರುತ್ತಾರೆ. ಮೈಸೂರಿನಲ್ಲಿ ರಂಗಭೂಮಿಗೆ ತನ್ನದೆ ಆದ ಮಹತ್ವ ಇದೆ. ನಾಟಕಕ್ಕೆ ಈಗಲೂ ಒಳ್ಳೆಯ ಬೆಲೆ ಇದೆ. ಆದರೂ ಕನ್ನಡಿಗರು ತಮಿಳರ ರೀತಿಯಲ್ಲಿ ಭಾಷಾಭಿಮಾನಿಗಳಾಗಬೇಕು ಎಂದರು.
ರಂಗಾಯಣ, ನೀನಾಸಂ ಮುಂತಾದ ಸಂಸ್ಥೆಗಳ ಹೆಸರನ್ನು ಕೇವಲ ಕಿರುತೆರೆ ಮತ್ತು ಹಿರಿತೆರೆಯಲ್ಲಿ ಅವಕಾಶ ಪಡೆಯಲು ಮಾತ್ರ ಬಳಸಿಕೊಳ್ಳಬಾರದು ಎಂದು ಹೇಳಿದರು.
ಪ್ರಾಧ್ಯಾಪಕ ಎಂ. ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಇದ್ದರು. ಜಿಲ್ಲಾ ಕಸಾಪ ಅಧ್ಯಕ್ಷ ಎಂ. ಚಂದ್ರಶೇಖರ್ ಪ್ರಾಸ್ತಾವಿಕ ಭಾಷಣ ಮಾಡಿದರು. ರಾಜಶೇಖರ ಕದಂಬ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

