ಎಲೆ ತೋಟ ಉಳಿಸಲು ಸಚಿವರಿಗೆ ಮನವಿ
ಕ.ಪ್ರ.ವಾರ್ತೆ ಮೈಸೂರು ಅ. 17
ಎಲೆ ತೋಟವನ್ನು ಭೂ ಕಬಳಿಕೆದಾರರಿಂದ ರಕ್ಷಿಸಬೇಕು ಎಂದು ಅಶೋಕಪುರಂ ನಿವಾಸಿ ಸಿದ್ದಸ್ವಾಮಿ ಅವರು ಕಂದಾಯ ಸಚಿವರಿಗೆ ಮನವಿ ಮಾಡಿದ್ದಾರೆ.
ಅಶೋಕಪುರಂನ ದಲಿತರಿಗಾಗಿ ಸರ್ಕಾರವು ಈ ಎಲೆ ತೋಟವನ್ನು ನೀಡಿತ್ತು. ಆದರೆ ಈಗ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇರುವ ಅಲ್ಪಸ್ವಲ್ಪ ಆಸ್ತಿಯನ್ನು ಕಬಳಿಸಲು ಹಲವರು ಹೊಂಚು ಹಾಕುತ್ತಿದ್ದಾರೆ. ಜಮೀನು ಉಳಿಸಿಕೊಳ್ಳಲು ದಶಕಗಳಿಂದ ನಡೆಸಿದ ಹೋರಾಟ ಈಗ ನಿಷ್ಕ್ರೀಯವಾಗಿದೆ ಎಂದು ಆರೋಪಿಸಿದ್ದಾರೆ.
ಅಶೋಕಪುರಂನ ಬಡವರ ಸ್ಥಿತಿ ಚಿಂತಾಜನಕವಾಗಿದೆ. ನಿಲ್ಲಲು ನೆಲೆ ಇಲ್ಲ. ಮಲಗಲು ಮನೆ ಇಲ್ಲದೆ ದೇವಸ್ಥಾನದ ಮೂಲೆಗಳು, ರಸ್ತೆ ಬದಿ ಮಲಗುವಂತಾಗಿದೆ. ಇಕ್ಕಟ್ಟಾದ ಮನೆಗಳಲ್ಲಿ ಕಾಲು ನೀಡಿ ಮಲಗಲೂ ಆಗದ ಸ್ಥಿತಿ ಇದೆ. ಈ ಮಧ್ಯೆ ಆಸ್ತಿ ರಕ್ಷಣೆಗಾಗಿ ಎಂಬ ಸುಳ್ಳು ನೆಪದ ಮೇಲೆ ಹುಟ್ಟಿದ ಎಲೆ ತೋಟ ಹೆಸರಿನ ಸಂಘಟನೆ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದೆ. ಆದ್ದರಿಂದ ಕೂಡಲೆ ಸರ್ಕಾರ ಆ ಸಂಘಟನೆಯನ್ನು ನಿಷೇಧಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ದಲಿತರ ಭೂಮಿಯನ್ನು ಕಬಳಿಸಲು ಯತ್ನಿಸುವವರನ್ನು ಒಳಗೊಂಡು ಅದಕ್ಕಾಗಿ ಸಂಚು ರೂಪಿಸಿರುವ ಎಲೆ ತೋಟದ ಸಕ್ರಿಯ ಸದಸ್ಯರ ವಿರುದ್ಧ ಸರ್ಕಾರ ಭೂ- ಸ್ವಾಧೀನ ಕಾಯಿದೆ ಮತ್ತು ದೌರ್ಜನ್ಯ ಕಾಯಿದೆ ಬಳಸಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಈ ನಿಟ್ಟಿನಲ್ಲಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ನಾಳೆ ಜೈನ ಸಮಾಜದಿಂದ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಅ. 17
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ಖಂಡಿಸಿ ಜೈನ ಸಮಾಜವು ಅ.19ರಂದು ಪ್ರತಿಭಟನೆ ಹಮ್ಮಿಕೊಂಡಿದೆ.
ಅಂದು ಬೆಳಗ್ಗೆ 10ಕ್ಕೆ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ಮನವಿ ಸಲ್ಲಿಸಲಾಗುವುದು ಎಂದು ದಿಗಂಬರ ಜೈನ ಸಮಾಜದ ಅಧ್ಯಕ್ಷ ಗೌರವಾಧ್ಯಕ್ಷ ಹರೀಶ್ ಹೆಗ್ಗಡೆ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಧರ್ಮಸ್ಥಳ ಕ್ಷೇತ್ರದಲ್ಲಿ ಸೌಜನ್ಯ ಎಂಬ ಯುವತಿಯ ಸಾವಿನ ಪ್ರಕರಣ ವಿವಿಧ ತಿರುವುಗಳನ್ನು ಪಡೆಯುತ್ತಿದೆ. ಈ ವಿಚಾರವಾಗಿ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅನವಶ್ಯಕಾಗಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯನ್ನು ದೂಷಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಂದ ದೇಶಕ್ಕೆ ಮಾದರಿಯಾಗಿರುವ ಶ್ರೀಕ್ಷೇತ್ರದ ಧರ್ಮಸ್ಥಳ ಮಂಜುನಾಥೇಶ್ವರ ವಿದ್ಯಾಸಂಸ್ಥೆಯನ್ನು ಸಹ ದೂಷಿಸಲಾಗುತ್ತಿದೆ ಎಂದರು.
ಈಗಾಗಲೇ ನಡೆಯುತ್ತಿರುವ ಸಿಐಡಿ ತನಿಖೆ ಮತ್ತು ಸರ್ಕಾರದ ಯಾವುದೇ ತನಿಖೆಗೆ ಮುಕ್ತವಾಗಿ ಸಹಕರಿಸುವುದಾಗಿ ಧರ್ಮಾಧಿಕಾರಿಗಳು ತಿಳಿಸಿದ್ದರೂ ಸಹ ಅವರ ವಿರುದ್ಧ ಕೆಲವರು ವಾಗ್ದಾಳಿ ಖಂಡನೀಯ. ತನಿಖೆ ವಿಳಂಬವಾಗುತ್ತಿರುವುದಕ್ಕೆ ಧರ್ಮಾಧಿಕಾರಿಯನ್ನು ದೂಷಿಸುವುದು ಸರಿಯಲ್ಲ ಎಂದರು.
ಸಮಾಜದ ಅಧ್ಯಕ್ಷ ಎಸ್.ಎನ್. ಪ್ರಕಾಶ್ಬಾಬು, ಉಪಾಧ್ಯಕ್ಷ ಎನ್. ಪ್ರಸನ್ನ ಕುಮಾರ್, ಕೋಶಾಧ್ಯಕ್ಷ ಸುನಿಲ್ಕುಮಾರ್ ಹಾಗೂ ಸದಸ್ಯೆ ಶೀಲಾ ನಟರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

