ತಲಕಾಡಿನಲ್ಲಿ ಡಿ.2ರಂದು ಪಂಚಲಿಂಗ ದರ್ಶನ
ಕ.ಪ್ರ.ವಾರ್ತೆ ಮೈಸೂರು ಅ. 19
ತಲಕಾಡಿನಲ್ಲಿ ಡಿ.2ರಂದು ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿದೆ ಅಂದು ಬೆಳಗ್ಗೆ 10ರಿಂದ ರಾತ್ರಿ 12ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಜಿಲ್ಲಾಧಿಕಾರಿ ಸಿ. ಶಿಖಾ ಹೇಳಿದರು.
ತಲಕಾಡಿನಲ್ಲಿ ಶನಿವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ತಲಕಾಡು ವೈದ್ಯನಾಥೇಶ್ವರ ಹಾಗೂ ಸಮೂಹ ದೇವಾಲಯಗಳ ಆಗಮಿಕರಾದ ಎನ್. ಕೃಷ್ಣ ದೀಕ್ಷಿತ್ ಪಂಚಲಿಂಗ ದರ್ಶನದ ಬಗ್ಗೆ ಮಾಹಿತಿ ನೀಡಿದರು.
2013ರ ಪಂಚಲಿಂಗ ದರ್ಶನ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ನ.28ರಿಂದ ಪ್ರಾರಂಭಗೊಂಡು ಡಿ.7ರವರೆಗೆ ನಡೆಯಲಿದೆ. ನ.28ರಂದು ಅಂಕುರಾರ್ಪಣ ಹಾಗೂ ಯಾಗಶಾಲಾ ಪ್ರವೇಶ, ನ.29ರಂದು ಧ್ವಜಾರೋಹಣ ಹಾಗೂ ರಕ್ಷಬಂಧನ, ನ.30ರಂದು ಪುಷ್ಪಮಂಟಪಾರೋಹಣೋತ್ಸವ, ಡಿ.1ರಂದು ವೃಷಭಾರೋಹಣೋತ್ಸವ ನಡೆಯಲಿದೆ. ಡಿ.2ರಂದು ದಿವ್ಯ ಪಂಚಲಿಂಗ ದರ್ಶನ ಮಹೋತ್ಸವ, ಡಿ.3ರಂದು ಬ್ರಹ್ಮರಥೋತ್ಸವ, ಡಿ.4ರಂದು ಶಯನೋತ್ಸವ ಪೂರ್ವಕ ಅಶ್ವರೋಹಣೋತ್ಸವ, ಡಿ.5ರಂದು ಅವಬೃತ ಪೂರ್ವಕ ತೀರ್ಥಸ್ನಾನ ತೆಪ್ಪೋತ್ಸವ, ಡಿ.6ರಂದು ಮಹಾಭಿಷೇಕ, ಡಿ.7ರಂದು ಶನಿವಾರ ನಂದಿ ಮಹೋತ್ಸವದ ಜೊತೆ ಪಂಚಲಿಂಗ ದರ್ಶನ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಹೇಳಿದರು.
ನಾಲ್ಕು ವರ್ಷಗಳಿಗೊಮ್ಮೆ: ಪಂಚಲಿಂಗ ದರ್ಶನ ಮಹೋತ್ಸವವು 97 ವರ್ಷಗಳಿಂದೀಚೆಗೆ ಅಂದರೆ 1911, 1924, 1938, 1952, 1959, 1965, 1979, 1986, 1993, 2006 ಮತ್ತು 2009ರಲ್ಲಿ ಜರುಗಿತ್ತು. ಈ ಬಾರಿ ಡಿ.1ರಂದು ಪುನಃ ಪಂಚಲಿಂಗ ದರ್ಶನವು ನಡೆಯಲಿದೆ. ಈ ಹಿಂದಿನ ಪಂಚಲಿಂಗ ದರ್ಶನ ಮಹೋತ್ಸವಗಳು 13 ವರ್ಷಕ್ಕೆ ಅಥವಾ 7 ವರ್ಷಗಳಿಗೆ ನಡೆದಿರುತ್ತದೆ. ಆದರೆ, 2013ರಲ್ಲಿ ನಡೆಯಲಿರುವ ಪಂಚಲಿಂಗ ದರ್ಶನ ಮಹೋತ್ಸವವು ನಾಲ್ಕು ವರ್ಷಗಳಿಗೆ ಸಂಭವಿಸುತ್ತಿದ್ದು, ಬಹಳ ವಿಶೇಷತೆಯನ್ನು ಪಡೆದಿರುತ್ತದೆ ಎಂದು ತಿಳಿಸಿದರು. ಪಂಚಲಿಂಗ ದರ್ಶನ ಮಹೋತ್ಸವಕ್ಕೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಯಾತ್ರಾರ್ಥಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಕೈಗೊಂಡಿರುವ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಪರಿಶೀಲಿಸಿದರು.
ಶಾಶ್ವತ ಪ್ರವಾಸಿ ಮಂದಿರ: ಪಂಚಾಯತ್ ರಾಜ್ ಎಂಜನಿಯರಿಂಗ್ ವಿಭಾಗದವರು 10 ಕಡೆಗಳಲ್ಲಿ ತಾತ್ಕಾಲಿಕ ಕುಡಿಯುವ ನೀರಿನ ವ್ಯವಸ್ಥೆ, 11 ಕಡೆ ತಾತ್ಕಾಲಿಕ ಹಾಗೂ 5 ಕಡೆ ಶಾಶ್ವತ ಶೌಚಾಲಯಗಳ ವ್ಯವಸ್ಥೆ ಮಾಡಬೇಕು. 1,300 ಬಟ್ಟೆ ಬದಲಾಯಿಸುವ ತಾತ್ಕಾಲಿಕ ಹಾಗೂ ಶಾಶ್ವತ ಕೊಠಡಿಗಳ ನಿರ್ಮಾಣವಾಗಬೇಕು. ನಾಲ್ಕು ಕಡೆಗಳಲ್ಲಿ ತಾತ್ಕಾಲಿಕ ವಾಹನ ನಿಲುಗಡೆ ಪ್ರದೇಶಗಳ ಅಭಿವೃದ್ಧಿಯಾಗಬೇಕು. ಮುಡುಕುತೊರೆ ಗ್ರಾಮದಲ್ಲಿ ಶಾಶ್ವತ ಪ್ರವಾಸಿ ಮಂದಿರ ನಿರ್ಮಾಣ ಹಾಗೂ ಪ್ರವಾಸಿಗರಿಗೆ ಶಾಶ್ವತ ವಿಶ್ರಾಂತಿ ಗೃಹ ನಿರ್ಮಾಣ ಮಾಡಬೇಕು ಎಂದು ಹೇಳಿದರು. ಲೋಕೋಪಯೋಗಿ ಇಲಾಖೆಯವರು ತಾತ್ಕಾಲಿಕ ಬ್ಯಾರಿಕೇಡ್ ವ್ಯವಸ್ಥೆ, ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಾಣ, ದೇವಸ್ಥಾನಗಳಿಗೆ ಸ್ಟೈನ್ಲೆಸ್ ಸ್ಟೀಲ್ ಹಿತ್ತಾಳ್ ರೈಲಿಂಗ್ ತಲಕಾಡು ಸಂಪರ್ಕಿಸುವ ಪ್ರಮುಖ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾರ್ಯ ಕೈಗೊಳ್ಳುವಂತೆ ತಿಳಿಸಿದರು.
30-35 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳುವ ಸಾಧ್ಯತೆ: ಕಾವೇರಿ ನೀರಾವರಿ ನಿಗಮದವರು ಕಾವೇರಿ ನದಿಯ ಬದಿಯಲ್ಲಿ ಮಾಧವ ಮಂತ್ರಿ ನಾಲಾ ಮತ್ತು ಶಾಖಾ ನಾಲಾಗಳ ವಿವಿಧ ಸ್ಥಳಗಳಲ್ಲಿ, ಪಂಚಲಿಂಗಗಳಲ್ಲಿ ಒಂದಾದ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸಮೀಪ ಸಾಮೂಹಿಕ ಸ್ನಾನ ಘಟ್ಟಗಳನ್ನು ನಿರ್ಮಿಸಬೇಕು. ಪ್ರವಾಸಿಗರ ಓಡಾಟಕ್ಕೆ ಪಂಚಲಿಂಗಗಳ ದೇವಸ್ಥಾನಗಳಿಗೆ ಸಂಪರ್ಕ ಕಲ್ಪಿಸುವ ವಿವಿಧ ಸೇವಾ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕು. ಸೇವಾ ರಸ್ತೆಯಲ್ಲಿ ಬರುವ ಶಿಥಿಲಗೊಂಡ ಸೇತುವೆಗಳನ್ನು ಪುನರ್ ನಿರ್ಮಿಸುವಂತೆ ಸೂಚಿಸಿದರು.
ದೇಶದ ಹಾಗೂ ರಾಜ್ಯದ ನಾನಾ ಭಾಗಗಳಿಂದ ಸುಮಾರು 30ರಿಂದ 35 ಲಕ್ಷ ಭಕ್ತಾದಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಬರುವ ಭಕ್ತಾದಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಮುಡುಕುತೊರೆ, ತಲಕಾಡು ಹಾಗೂ ಬಿಜಾಪುರದ ದೇವಸ್ಥಾನಗಳಿಗೆ ಯಾತ್ರಾರ್ಥಿಗಳು ಸಂಚರಿಸಲು ಅನುವಾಗುವಂತೆ ಮಿನಿ ಬಸ್ಸಿನ ವ್ಯವಸ್ಥೆ ಮಾಡುವುದು. ತಲಕಾಡಿಗೆ ರಾಜ್ಯದ ನಾನಾ ಭಾಗಗಳಿಂದ ಹೆಚ್ಚುವರಿಯಾಗಿ ಬಸ್ ನಿಯೋಜಿಸುವಂತೆ ರಸ್ತೆ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ. ಗೋಪಾಲ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಾಲಯ್ಯ, ಉಪ ವಿಭಾಗಾಧಿಕಾರಿ ಬಸವರಾಜು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

