ಮೈಸೂರು

ನಿರಂತರ ನೀರು ಹರಿಸದಿದ್ದರೆ ಹೋರಾಟ

Published On :

ಕ.ಪ್ರ.ವಾರ್ತೆ ಭೇರ್ಯ ಅ. 20
ರೈತರೊಂದಿಗೆ ಚೆಲ್ಲಾಟವಾಡದೆ ಬತ್ತ ಕಟಾವು ಆಗುವವರೆಗೂ ನಿರಂತರ ನೀರು ಹರಿಸಬೇಕು. ಇಲ್ಲವಾದಲ್ಲಿ ನೀರಾವರಿ ಕಚೇರಿ ಎದುರು ಉಗ್ರ ಹೋರಾಟ ನಡೆಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಎಚ್ಚರಿಕೆ ನೀಡಿದರು.
ಗೊರೂರಿನ ಹೇಮಾವತಿ ನಾಲಾ ಉಪ ಕಾಲುವೆಯ 29ನೇ ಗೇಟ್‌ನಿಂದ ನೀರು ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ತಂದ್ರೆಅಂಕನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ನೀರಾವರಿ ಅಧಿಕಾರಿಗಳು ಮತ್ತು ರೈತರ ಸಭೆಯಲ್ಲಿ ಅವರು ಮಾತನಾಡಿದರು.
ನನ್ನ ಮೇಲೆ ಯಾವುದೇ ಕ್ರಮ ಬೇಕಾದರೂ ತೆಗೆದುಕೊಳ್ಳಿ. ಆದರೆ ರೈತರಿಗೆ ತೊಂದರೆ ನೀಡಿದರೆ ನಾನು ಸಹಿಸುವುದಿಲ್ಲ ಎಂದ ಅವರು, ಈ ಬಾರಿ ಉತ್ತಮ ಮಳೆಯಾಗಿದ್ದರೂ ನೀರನ್ನೇಕೆ ಸ್ಥಗಿತಗೊಳಿಸಿದ್ದೀರಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿ, ಮತ್ತೊಮ್ಮೆ ದೂರು ಬಾರದಂತೆ ನೀರು ಹರಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ತಾಲೂಕಿನ ತಂದ್ರೆಅಂಕನಹಳ್ಳಿ, ಮುಂಡೂರು, ದೇವಿತಂದ್ರೆ, ಮುದುಗುಪ್ಪೆ ಗ್ರಾಮ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಬತ್ತ ನೀರಿಲ್ಲದೆ ಒಣಗುತ್ತಿದ್ದು, ಇಳುವರಿ ಸಂಪೂರ್ಣ ಕುಂಠಿತಗೊಳ್ಳುವ ಆತಂಕ ಎದುರಾಗಿದ್ದು, ಈ ಹಿಂದಿನ ವರ್ಷಗಳಲ್ಲಿ ಮಳೆ ಕಡಿಮೆ ಪ್ರಮಾಣದಲ್ಲಿ ಆಗಿದ್ದರೂ ಸಮರ್ಪಕ ನೀರು ಹರಿಸಲಾಗಿತ್ತು. ಆದರೆ ಈ ಬಾರಿ ಪದೇಪದೇ ನೀರನ್ನು ಸ್ಥಗಿತಗೊಳಿಸುತ್ತಿರುವುದರಿಂದ ಸಾಲ ಮಾಡಿ ತಾವು ಬೆಳೆದ ಬತ್ತದ ಬೆಳೆ ಒಣಗುತ್ತಿದೆ, ಆದರೂ ಅಧಿಕಾರಿಗಳು ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂದು ರೈತರು ಶಾಸಕರ ಎದುರು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ದೊಡ್ಡಕಾಡನೂರಿನ ಹೇಮಾವತಿ ನಾಲಾ ಉಪ ವಿಭಾಗದ ಎಇಇ ಸುಬ್ಬರಾಯಗೌಡ, ಮೇಲಧಿಕಾರಿಗಳ ಆದೇಶದಂತೆ ನಾಲೆಯ ಎಲ್ಲಾ ಭಾಗಗಳಿಗೂ ಸಮರ್ಪಕ ನೀರು ಹರಿಸಲಾಗುತ್ತಿದೆ ಎಂದು ಸಮಜಾಯಿಸಿ ನೀಡಿದರು. ಆದರೂ ರೈತರು ಉಪ ಕಾಲುವೆಯ ಗೇಟ್ ಮುರಿದಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ವೇಳೆ ಕೋಪೋದ್ರಿಕ್ತ ರೈತರು, ನೀರನ್ನು ಸರಿಯಾದ ಪ್ರಮಾಣದಲ್ಲಿ ಹರಿಸಿದ್ದರೆ ಗೇಟ್ ಅನ್ನು ಮುರಿಯುತ್ತಿರಲಿಲ್ಲ. ನೀರಿಲ್ಲದೆ ಬೆಳೆ ಒಣಗುತ್ತಿರಬೇಕಾದರೆ ನಾವು ಸುಮ್ಮನಿರಬೇಕಿತ್ತೆ ಎಂದು ಪ್ರಶ್ನಿಸಿ ವಾದ ವಿವಾದವೇ ನಡೆಯಿತು.  ರೈತರನ್ನು ಸಮಾಧಾನಪಡಿಸಿದ ಶಾಸಕರು, ಸಮರ್ಪಕ ನೀರು ಪೂರೈಕೆಗೆ ಸೂಚನೆ ನೀಡಿದ್ದೇನೆ. ಸಮಸ್ಯೆ ನಿವಾರಣೆಯಾಗದಿದ್ದರೆ ಹೋರಾಟ ಅನಿವಾರ್ಯ. ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿ ಸಭೆ ಮುಕ್ತಾಯಗೊಳಿಸಿದರು. ತಂದ್ರೆಅಂಕನಹಳ್ಳಿ ನೀರು ಬಳಕೆದಾರರ ಸಂಘದ ಅಧ್ಯಕ್ಷ ಮಾರ್ಕಂಡೇಗೌಡ, ಕಾರ್ಯದರ್ಶಿ ಶಿವಣ್ಣ, ಕುಪ್ಪಹಳ್ಳಿ ನೀರು ಬಳಕೆದಾರರ ಸಂಘದ ಕಾರ್ಯದರ್ಶಿ ಕುಮಾರ, ಮುಖಂಡರಾದ ತಂದ್ರೆಅಂಕನಹಳ್ಳಿ ಬಸವರಾಜ್, ದೇವಿತಂದ್ರೆ ಮಹದೇವಪ್ಪ, ನಟರಾಜ್, ಅಂಗಡಿಮೂರ್ತಿ, ಎಂಜಿನಿಯರ್ ಮಹೇಂದ್ರ, ಹಾರಂಗಿ ನಾಲಾ ಸಾಲಿಗ್ರಾಮ ಉಪ ವಿಭಾಗದ ಎಇಇ ಬಸವರಾಜ್ ಇದ್ದರು.

ಶ್ರೀರಾಮ ಸಕ್ಕರೆ ಕಾರ್ಖಾನೆ ಆರಂಭಕ್ಕೆ ಒತ್ತಾಯ
ಕೆ.ಆರ್. ನಗರ: ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯ ಕಾರ್ಮಿಕರನ್ನು ಲೇ ಆಪ್ ಮಾಡದಂತೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಆಯುಕ್ತರನ್ನು ಅ.22ರಂದು ಭೇಟಿಯಾಗಿ ಚರ್ಚಿಸಲಾಗುವುದು.
ಕಾರ್ಖಾನೆ ಶೀಘ್ರ ಆರಂಭಕ್ಕೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಈಗಾಗಲೇ ಕಳೆದ ಅಧಿವೇಶನದಲ್ಲಿ ಕಾರ್ಖಾನೆಯ ಪುನಾರಂಭ ಮಾಡುವಂತೆ ಒತ್ತಾಯಿಸಿದಾಗ ಸಕ್ಕರೆ ಸಚಿವರು ಸೂಕ್ತ ಕ್ರಮ ವಹಿಸುವ ಭರವಸೆ ನೀಡಿದ್ದರು. ಜತೆಗೆ ಮತ್ತೆ ಖಾಸಗಿಯವರಿಗೆ ವಹಿಸಲು ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು. ಈ ಕುರಿತು ಮುಂಬರುವ ಬೆಳಗಾವಿ ಅಧಿವೇಶನದಲ್ಲೂ ಚರ್ಚಿಸಲಾಗುವುದು. ಹೀಗಾಗಿ ಕಾರ್ಮಿಕರು ಮತ್ತು ರೈತರು ಯಾವುದೇ ಆತಂಕ ಪಡುವುದು ಬೇಡ. ಯಾವುದೇ ಕಾರಣಕ್ಕೂ ಸರ್ಕಾರ ಕಾರ್ಮಿಕರನ್ನು ಲೇ ಆಪ್ ಮಾಡಬಾರದು ಎಂದು
ಅವರು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.