ಮೈಸೂರು

ಮೈಸೂರು ಪಾಲಿಕೆಗೂ 'ಬೃಹತ್‌' ಬಯಕೆ

Published On :

ಕ.ಪ್ರ.ವಾರ್ತೆ ಬೆಂಗಳೂರು ಅ. 25
'ಬೃಹತ್‌' ಆಗಬೇಕೆಂಬ ಬಯಕೆ ಈಗ ಮೈಸೂರು ಮಹಾನಗರ ಪಾಲಿಕೆಗೂ ಶುರುವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾದರಿಯಲ್ಲಿ ಮೈಸೂರನ್ನೂ ವಿಸ್ತರಿಸಬೇಕೆಂದು ಮೈಸೂರು ನಗರ ಪಾಲಿಕೆ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಪ್ರಸ್ತಾಪವನ್ನೂ ಸಿದ್ಧಪಡಿಸಿರುವ ಮೈಸೂರು ಮಹಾನಗರ ಪಾಲಿಕೆ ಸದ್ಯದಲ್ಲಿ 'ಬೃಹತ್ ಮೈಸೂರು ಮಹಾನಗರ ಪಾಲಿಕೆ' ಕುರಿತ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲಿದೆ. ಮೈಸೂರು ಮೇಯರ್ ಹಾಗೂ ಪಾಲಿಕೆ ಸದಸ್ಯರ ತಂಡ ಶುಕ್ರವಾರ ಬಿಬಿಎಂಪಿಗೆ ಭೇಟಿ ನೀಡಿ ಅಭಿವೃದ್ಧಿ ಯೋಜನೆಗಳ ವಿನಿಮಯ ಮಾಡಿಕೊಂಡಿತು.
ಮೈಸೂರು ಮೇಯರ್ ರಾಜೇಶ್ವರಿ ಹಾಗೂ ಮಾಜಿ ಮೇಯರ್‌ಗಳಾದ ಶ್ರೀಕಂಠಯ್ಯ ಮತ್ತು ಪುರುಷೋತ್ತಮ್ ಮತ್ತು 5 ಸ್ಥಾಯಿ ಸಮಿತಿಗಳ ಅಧ್ಯಕ್ಷರು ಬಿಬಿಎಂಪಿಯಲ್ಲಿ ದಿನವೀಡೀ ಸಭೆಗಳನ್ನು ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೈಸೂರು ಮೇಯರ್ ರಾಜೇಶ್ವರಿ ಹಾಗೂ ಮಾಜಿ ಮೇಯರ್ ಶ್ರೀಕಂಠಯ್ಯ, ಮೈಸೂರು ನಗರ ವಿಸ್ತಾರವಾಗುತ್ತಿರುವುದರಿಂದ ಮಹಾನಗರ ಪಾಲಿಕೆಯನ್ನು ಬೃಹತ್ ಮಹಾನಗರ ಪಾಲಿಕೆ ಮಾಡಲು ನಿರ್ಧರಿಸಲಾಗಿದೆ. ಮೈಸೂರು ಸುತ್ತಮುತ್ತಲ 44 ಗ್ರಾಮಪಂಚಾಯಿತಿಗಳನ್ನು ಪಾಲಿಕೆ ವ್ಯಾಪ್ತಿಗೆ ಸೇರಿಸಲಾಗುತ್ತದೆ. ಇದಕ್ಕೆ ಗ್ರಾಮಪಂಚಾಯಿತಿಗಳೂ ಒಪ್ಪಿಗೆ ನೀಡಿವೆ ಎಂದರು.
ಇದೇವೇಳೆ ಮೈಸೂರು ಮೇಯರ್ ತಂಡ ಬಿಬಿಎಂಪಿ ಮೇಯರ್ ಕಟ್ಟೆ ಸತ್ಯನಾರಾಯಣ, ಆಡಳಿತ ಪಕ್ಷ ನಾಯಕ ಎನ್.ನಾಗರಾಜು, ಉಪ ಮೇಯರ್ ಇಂದಿರಾ ಹಾಗೂ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಸೋಮಶೇಖರ್, ಎ.ಎಚ್.ಬಸವರಾಜು, ರೇಖಾ ಕದ್ರಿರೇಶ್ ಸೇರಿದಂತೆ ಅನೇಕ ಮುಖಂಡರನ್ನು ಭೇಟಿ ಮಾಡಿ ಚರ್ಚಿಸಿದರು.
ವಿಶೇಷವಾಗಿ ಕ್ರಿಯಾ ಯೋಜನೆಗಳನ್ನು ಏಕಗವಾಕ್ಷಿ ಯೋಜನೆಯಲ್ಲಿ ಒಂದೇ ದಿನ ಅನುಮೋದನೆ ನೀಡುವಂತೆ ಪ್ರಯೋಗಕ್ಕೆ ಮೈಸೂರು ಮೇಯರ್ ತಂಡ ಮೆಚ್ಚಿಗೆ ವ್ಯಕ್ತಪಡಿಸಿತು. ಅಲ್ಲದೆ, ಕಸದಿಂದ ಗೊಬ್ಬರ ಮತ್ತು ವಿದ್ಯುತ್ ತಯಾರಿಸುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದನ್ನು ಮೈಸೂರು ಪಾಲಿಕೆ ವ್ಯಾಪ್ತಿಯಲ್ಲೂ ಜಾರಿಗೊಳಿಸುವ ಬಗ್ಗೆ ಸಮಾಲೋಚಿಸಿದರು.

ಮಹಿಳೆ ಸಾವು: ವೈದ್ಯರ ನಿರ್ಲಕ್ಷ್ಯ
ಮೈಸೂರು:
ಮಹಿಳೆಯೊಬ್ಬರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತರ ಸಂಬಂಧಿಕರು ಕೆ.ಆರ್. ಆಸ್ಪತ್ರೆ ಎದುರು ಶುಕ್ರವಾರ ಪ್ರತಿಭಟಿಸಿದರು. ಟಿ. ನರಸೀಪುರ ತಾಲೂಕಿನ ಬನ್ನೂರು ನಿವಾಸಿ ಸೈಯದ್ ಮುನಾವರ್ ಎಂಬವರ ಪತ್ನಿ ರೇಷ್ಮಾಬಾನು (26) ಮೃತಪಟ್ಟವರು. ಬನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಸಂತಾನಹರಣ ಶಸ್ತ್ರಚಿಕಿತ್ಸಾ ಶಿಬಿರ ಏರ್ಪಡಿಸಲಾಗಿತ್ತು. ರೇಷ್ಮಾಬಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ರೇಷ್ಮಾಬಾನುಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ ವೇಳೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದರಿಂದ ಈಕೆಯನ್ನು ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸುತ್ತಿರುವುದಾಗಿ ವೈದ್ಯರು ಸಮಜಾಯಿಷಿ ನೀಡಿದ್ದರು. ಆದರೆ, ಶಸ್ತ್ರಚಿಕಿತ್ಸೆ ವೇಳೆಯೆ ರೇಷ್ಮಾಬಾನು ಮೃತಪಟ್ಟಿದ್ದು, ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ವೈದ್ಯರ ವಿರುದ್ಧ ಬನ್ನೂರು ಠಾಣೆಯಲ್ಲಿ ದೂರು ನೀಡಿರುವುದಾಗಿ ಪತಿ ಸೈಯದ್ ಮುನಾವರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.