ಕನ್ನಡಿಗರಿಗೆ ಉದ್ಯೋಗ ನೀತಿ ಜಾರಿ ಆಗ್ಲಿ
ಕ.ಪ್ರ.ವಾರ್ತೆ ಮೈಸೂರು ಅ. 31
ಕನ್ನಡಿಗರಿಗೆ ಉದ್ಯೋಗ ನೀತಿ ಜಾರಿಯಾಗಲಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ಕರ್ನಾಟಕ ಕಾವಲು ಪಡೆಯು ಮೂರನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ಕಲಾಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಕನ್ನಡ ಜಾಗೃತಿ ಸಮಾವೇಶದಲ್ಲಿ ವರ್ತಮಾನ ಕನ್ನಡ - ಕರ್ನಾಟಕ ವಿಚಾರ ಸಂಕಿರಣ ಹಾಗೂ ಹಿರಿಯ ಸಾಹಿತಿಗಳಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅನೇಕ ಸವಲತ್ತುಗಳನ್ನು ಪಡೆದು ಕೈಗಾರಿಕೆಗಳನ್ನು ಉದ್ಯಮಿಗಳು ಆರಂಭಿಸುತ್ತಾರೆ. ಆದರೆ ಭೂಮಿ ನೀಡುವ ರೈತರ ಮಕ್ಕಳಿಗೆ ಉದ್ಯೋಗ ನೀಡುತ್ತಿಲ್ಲ. ಆದ್ದರಿಂದ ಕೈಗಾರಿಕಾ ನೀತಿಗೆ ತಿದ್ದುಪಡಿ ತರಬೇಕು. ಸ್ಥಳೀಯರಿಗೆ ಹಾಗೂ ಭೂಮಿ ನೀಡಿದವರಿಗೆ ಕೆಲಸ ಕಡ್ಡಾಯವಾಗಿ ಕೊಡಬೇಕು. ಈ ಸಂಬಂಧ ರಾಜ್ಯ ಸರ್ಕಾರ ಉದ್ಯೋಗ ನೀತಿ ಜಾರಿಗೊಳಿಸಬೇಕು ಎಂದರು.
ಡಾ.ಸರೋಜಿನಿ ಮಹಿಷಿ ವರದಿ ಹಾಗೂ ಏಕರೂಪ ಶಿಕ್ಷಣ ನೀತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸುಕರಾಗಿದ್ದಾರೆ. ಮೊದಲ ಕನ್ನಡ ಕಾವಲು ಸಮಿತಿ ಅಧ್ಯಕ್ಷರೂ ಆಗಿದ್ದ ಸಿದ್ದರಾಮಮ್ಯ ಅವರು ಕನ್ನಡ ಭಾಷೆಯ ಅಭಿವೃದ್ಧಿಗೆ ಉತ್ತಮ ನಿರ್ಧಾರ ಕೈಗೊಳ್ಳುವ ಭರವಸೆಯಿದೆ ಎಂದು ತಿಳಿಸಿದರು.
ಮಹಿಷಿ ವರದಿ ಪರಿಷ್ಕರಿಸಲಿ: ಸರೋಜಿನಿ ಮಹಿಷಿ ವರದಿಯನ್ನು ಇಂದಿನ ಕಾಲಮಾನಕ್ಕೆ ತಕ್ಕಂತೆ ಪರಿಷ್ಕರಿಸುವುದು ಅವಶ್ಯಕ. ಇಂದು ಮಾಹಿತಿ ತಂತ್ರಜ್ಞಾನ ಮತ್ತಿತರ ಉದ್ಯಮಗಳು ಸೇರಿಸಬೇಕು. ವೇತನ ವ್ಯತಿರಿಕ್ತವಾಗಿರುವುದರಿಂದ ಅಂದಿನ ಸಮಿತಿ ಸದಸ್ಯರನ್ನು ಒಳಗೊಂಡಂತೆ ಅಥವಾ ಹೊಸ ಸಮಿತಿ ರಿಚಸಿ ವರದಿ ಪರಿಷ್ಕರಿಸಿ ಜಾರಿಗೆ ತರಬೇಕು ಎಂದರು.
ತಾಲೂಕು ಹಾಗೂ ಜಿಲ್ಲಾ ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ತೀರ್ಪು ನೀಡಬೇಕು. ಆದರೆ ಹೈಕೋರ್ಟ್ನಲ್ಲಿ ಬರುವ ಪ್ರಕರಣಗಳು ಸುಪ್ರಿಂಕೋರ್ಟ್ಗೆ ಹೋಗುವ ಅನಿವಾರ್ಯತೆ ಇರುವ ಕಾರಣ ಕನ್ನಡದ ತೀರ್ಪಿಗೆ ತಾಂತ್ರಿಕ ಸಮಸ್ಯೆಯಿದೆ. ಆದ್ದರಿಂದ ಸ್ಥಳೀಯ ನ್ಯಾಯಾಲಯದಲ್ಲಿ ನಡೆಸುವ ವಾದ ವಿವಾದಗಳು ಹಾಗೂ ತೀರ್ಪುಗಳು ಆಯಾಯ ಮಾತೃಭಾಷೆಯಲ್ಲಿ ನಡೆಯುವಂತಾಗಬೇಕು ಎಂದು ಆಶಿಸಿದರು.
ಸಾಮಾಜಿಕ ಜವಾಬ್ದಾರಿಗಳು ಎಂಬ ವಿಷಯ ಕುರಿತು ಹಂಪಿಯ ಕನ್ನಡ ವಿವಿ ಪ್ರಾಧ್ಯಾಪಕ ಡಾ. ಪಿ. ಮಹದೇವಯ್ಯ ಮಾತನಾಡಿದರು. ಸಾಹಿತಿ ನಾ.ಡಿಸೋಜ ಅಧ್ಯಕ್ಷತೆ ವಹಿಸಿದ್ದರು. ಆರ್ಕೆ. ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಎನ್. ಪ್ರಸನ್ನ, ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಚಂದ್ರಶೇಖರ್, ಮಾಜಿ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ತಾಲೂಕು ಅಧ್ಯಕ್ಷ ರಾಜಶೇಖರ ಕದಂಬ ಹಾಗೂ ನೆಲದನಿ ಸಾಂಸ್ಕೃತಿಕ ಸಂಸ್ಥೆ ಸಂಚಾಲಕ ಎಚ್.ವಿ. ಭಕ್ತವತ್ಸಲ ಮುಖ್ಯ ಅತಿಥಿಯಾಗಿದ್ದರು.
ಕಾವಲು ಪಡೆಯ ರಾಜ್ಯಾಧ್ಯಕ್ಷ ಎಂ. ಮೋಹನ್ಕುಮಾರ್ಗೌಡ ಪ್ರಾಸ್ತಾವಿಕ ಮಾತುಗಳಾಡಿದರು. ಸಾಂಸ್ಕೃತಿಕ ಘಟಕದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಸ್ವಾಗತಿಸಿದರು. ಟಿ.ವಿ. ಭಾರತಿ ಹಾಗೂ ಡಾ. ವೈ.ಡಿ. ರಾಜಣ್ಣ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

