ಕಾಲುಬಾಯಿ ಜ್ವರ ಮೃತಪಟ್ಟ ಜಾನುವಾರುಗಳ ಸಂಖ್ಯೆ ಎಷ್ಟು?
ಕ.ಪ್ರ.ವಾರ್ತೆ ಮೈಸೂರು ಅ. 31
ಕಾಲುಬಾಯಿ ಜ್ವರದಿಂದ ಮೈಸೂರು ಜಿಲ್ಲೆಯಲ್ಲಿ ಮೃತಪಟ್ಟಿರುವ ಜಾನುವಾರುಗಳ ಸಂಖ್ಯೆ ಎಷ್ಟು?
- ಇದು ಗುರುವಾರ ಜಿಪಂ ಸಭಾಂಗಣದಲ್ಲಿ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು ಅವರ ಅಧ್ಯಕ್ಷತೆಯಲ್ಲಿ ನಡೆದ ಕರ್ನಾಟಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು. ಅಲ್ಲದೇ ಈವರೆಗೆ ಸರ್ಕಾರದಿಂದ ಯಾರೊಬ್ಬರಿಗೂ ಪರಿಹಾರ ಸಿಗದಿರುವ ಅಂಶವೂ ಬಹಿರಂಗವಾಯಿತು.
ಮೊದಲಿಗೆ ಕಾರ್ಯಸೂಚಿಯಲ್ಲಿದ್ದಂತೆ ಅನುಪಾಲನಾ ವರದಿಯನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು. ಜಿಲ್ಲೆಯಲ್ಲಿ ರೈತರಿಗೆ ಯಾವುದೇ ತೊಂದರೆಯಾಗದಂತೆ ಬಿತ್ತನೆಬೀಜ ಹಾಗೂ ರಸಗೊಬ್ಬರ ವಿತರಣೆಗೆ ಕ್ರಮವಹಿಸಲಾಗಿದೆ ಎಂದು ಕೃಷಿ ಇಲಾಖೆ ಉಪ ನಿರ್ದೇಶಕ ಶಿವಕುಮಾರ್ ತಿಳಿಸಿದರು.
ನಂತರ ಕಾಲುಬಾಯಿ ಜ್ವರದ ವಿಷಯ ಚರ್ಚೆಗೆ ಬಂದಿತು. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಜಿಲ್ಲೆಯಲ್ಲಿ ಎಷ್ಟು ರಾಸುಗಳು ಮೃತಪಟ್ಟಿವೆ. ಸರ್ಕಾರದಿಂದ ಎಷ್ಟು ಮಂದಿಗೆ ಪರಿಹಾರ ನೀಡಲಾಗಿದೆ. ಇಲಾಖೆಯಿಂದ ಸರಿಯಾದ ಮಾಹಿತಿ ನೀಡದೇ ರೈತರಿಗೆ ಅನ್ಯಾಯ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.
ಪರಿಹಾರವನ್ನೇ ನೀಡಿಲ್ಲ: ಇದಕ್ಕೆ ಉತ್ತರಿಸಿದ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ದೇವದಾಸ್, ಕಾಲುಬಾಯಿ ಜ್ವರದ ಲಸಿಕಾ ಕಾರ್ಯಕ್ರಮದ ಬಗ್ಗೆ ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗಿದೆ. ಶೇ.92 ರಷ್ಟು ರಾಸುಗಳಿಗೆ ಲಸಿಕೆ ಹಾಕಲಾಗಿದೆ. ಇಲಾಖೆ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 267 ರಾಸುಗಳು ಕಾಲುಬಾಯಿ ಜ್ವರದಿಂದ ಮೃತಪಟ್ಟಿವೆ. ಆದರೆ ಮೈಮುಲ್ನವರು 1067 ರಾಸುಗಳು ಮೃತಪಟ್ಟಿವೆ ಎಂದು ವರದಿ ನೀಡಿದ್ದಾರೆ. ಇಲಾಖೆಯಿಂದ ಕಾಲುಬಾಯಿ ಜ್ವರಕ್ಕೆ ಲಸಿಕೆ ಹಾಕಿದ್ದು ಹಾಗೂ ರಾಸುಗಳು ಮೃತಪಟ್ಟ ನಂತರ ಪಶುವೈದ್ಯರು ನಡೆಸಿದ ಶವಪರೀಕ್ಷೆಯ ಆಧಾರದ ಮೇಲೆ ಲೆಕ್ಕ ಹಾಕಿದ್ದರೆ, ಮೈಮುಲ್ನವರು ಡೇರಿ ಕಾರ್ಯದರ್ಶಿಗಳ ಮೂಲಕ ವರದಿ ಮಾಡಿಸಿದ್ದಾರೆ. ಹೀಗಾಗಿ ಅಂಕಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಸರ್ಕಾರದಿಂದ ವಿಮೆ ಮಾಡಿಸದ ಪ್ರತಿ ರಾಸಿಗೆ 16,000 ಹಾಗೂ ಮೈಮುಲ್ನಿಂದ 9,500, ಪರಿಹಾರ ನೀಡುವುದಾಗಿ ಘೋಷಿಸಲಾಗಿದೆ. ಆದರೆ ಈವರೆಗೂ ಯಾರೊಬ್ಬರಿಗೂ ಪರಿಹಾರ ನೀಡಿಲ್ಲ ಎಂದು ವಿವರಿಸಿದರು.
ಇಲಾಖೆ ಹಾಗೂ ಮೈಮುಲ್ ನಡುವೆ ಮೃತಪಟ್ಟ ರಾಸುಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇರುವುದರಿಂದ, ಬೇರೆ ಬೇರೆ ಕಾರಣದಿಂದ ಮೃತಪಟ್ಟ ರಾಸುಗಳನ್ನು ಕಾಲುಬಾಯಿ ಜ್ವರದ ಲೆಕ್ಕಕ್ಕೆ ಸೇರಿಸಿರುವುದರಿಂದ ಈಗ ಸರ್ಕಾರದ ಸೂಚನೆಯ ಮೇರೆಗೆ ಪಂಚನಾಮೆ ನಡೆಸಲಾಗುತ್ತಿದೆ. ಗ್ರಾಮಮೊಂದರಲ್ಲಿ 10 ರಾಸುಗಳು ಸತ್ತಿವೆ ಎಂದು ಮೈಮುಲ್ ಹೇಳಿತ್ತು. ಆದರೆ ಪಂಚನಾಮೆ ಮಾಡಿದಾಗ 1 ಮಾತ್ರ ಎಂದು ಗೊತ್ತಾಯಿತು. ಹೀಗಾಗಿ ಮೃತಪಟ್ಟ ರಾಸುಗಳ ಸಂಖ್ಯೆ 400-500ಕ್ಕೆ ಸೀಮಿತವಾಗಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಸರ್ಕಾರ ರಚಿಸಿರುವ ಸಮಿತಿಯಲ್ಲಿ ಪಶುವೈದ್ಯರು, ಮೈಮುಲ್ ಪ್ರತಿನಿಧಿ, ಪಿಡಿಒ, ರಾಜಸ್ವ ನಿರೀಕ್ಷಕರು ಇರುತ್ತಾರೆ. ಹೀಗಾಗಿ ಯಾವುದೇ ಒತ್ತಡಕ್ಕೆ ಮಣಿಯದೇ ನಿಜವಾಗಿಯೂ ಕಾಲುಬಾಯಿ ಜ್ವರದಿಂದ ಮೃತಪಟ್ಟ ರಾಸುಗಳ ಮಾಹಿತಿ ನೀಡುವಂತೆ ಸೂಚಿಸಲಾಗಿದೆ ಎಂದು ಸಿಇಒ ಪಿ.ಎ. ಗೋಪಾಲ್ ಹೇಳಿದರು.
ಲಸಿಕೆಗೆ ಜಿಪಂನಿಂದ ಹಣ ನೀಡಲಾಗಿದೆ. ಇದಲ್ಲದೇ ಜಿಲ್ಲಾಧಿಕಾರಿಯ.ವರು ಪ್ರಕೃತಿ ವಿಕೋಪ ನಿಧಿಯಿಂದ 20 ಲಕ್ಷ ರು. ನೀಡಿದ್ದಾರೆ ಎಂದರು.
ಬೇರೆ ಬೇರೆ ಜಿಲ್ಲೆಗಳಿಂದ ಬರುವ ಕುರಿಮಂದೆ ಬಗ್ಗೆಯೂ ಗಮನಹರಿಸುವಂತೆ ಅವರು ಸೂಚಿಸಿದರು.
ಜಲಾನಯನ ಇಲಾಖೆ ಕಾರ್ಯಕ್ರಮಗಳ ಬಗ್ಗೆ ಕೈಪಿಡಿ ಮುದ್ರಿಸಿ ಚುನಾಯಿತ ಪ್ರತಿನಿಧಿಗಳು ಹಾಗೂ ಜನರಿಗೆ ವಿತರಿಸುವಂತೆ ಅಧ್ಯಕ್ಷ ಎಂ. ಮಹದೇವು ಇಲಾಖೆಯ ಅಧಿಕಾರಿ ಚಂದ್ರೇಗೌಡ ಅವರಿಗೆ ಸೂಚಿಸಿದರು. ತಂಬಾಕು ಕಡಿಮೆ ಮಾಡಲು ರೇಷ್ಮೆ ಬೆಳೆ ಉತ್ತೇಜಿಸುವಂತೆ ಇಲಾಖೆಯ ಉಪನಿರ್ದೇಶಕ ಸಿದ್ದಲಿಂಗಮೂರ್ತಿ ಅವರಿಗೆ ಸಲಹೆ ಮಾಡಿದರು.
ವಿದ್ಯಾರ್ಥಿ ನಿಲಯಗಳು, ಶಾಲಾ- ಕಾಲೇಜುಗಳು, ಆಸ್ಪತ್ರೆ ಆವರಣಗಳಲ್ಲಿ ಗಿಡ ನೆಡುವಂತೆ ಸಿಇಒ ಪಿ.ಎ. ಗೋಪಾಲ್ ಸಾಮಾಜಿಕ ಅರಣ್ಯ ಡಿಎಫ್ಓಗೆ ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯ ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸಬಾರದು. ಸ್ವಂತ ಕಟ್ಟಡಗಳಿಲ್ಲದ ಕಡೆ ಹಾಸ್ಟೆಲ್ಗಳಲ್ಲಿಯೇ ಕಚೇರಿ ಆರಂಭಿಸುವಂಚೆ ಸೂಚಿಸಲಾಗಿದೆ ಎಂದರು.
ಎಲ್ಲೆಡೆ ಅಂಗವಿಕಲರಿಗೆ ಅನುಕೂಲವಾಗುವಂತೆ ರ್ಯಾಂಪ್ ನಿರ್ಮಿಸಿ ಎಂದು ಸಿ.ಜೆ. ದ್ಲಾರಕೀಶ್ ಹೇಳಿದರು. ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಲಲಿತಾ ದೇವೇಗೌಡ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷೆ ಪದ್ಮ ಬಸವರಾಜು, ಮುಖ್ಯ ಯೋಜನಾಧಿಕಾರಿ ಎಚ್.ಡಿ. ವಸುಂಧರಾ ದೇವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

