ಗುಡಿಸಲಲ್ಲಿ ಇದ್ದರೂ ಎಪಿಎಲ್ ಕಾರ್ಡ್!
ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ ಮೈಸೂರು ಸೆ. 2
ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕೆಜಿಗೆ 1 ರಂತೆ ಪ್ರತಿ ಮಾಹೆ ಗರಿಷ್ಠ 30 ಕೆಜಿ ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತಿದ್ದಂತೆಯೇ ಬಿಪಿಎಲ್ ಕಾರ್ಡ್ಗೆ ಇನ್ನಿಲ್ಲದ ಬೇಡಿಕೆ. ಅನರ್ಹರು ಕೂಡ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ದೂರುಗಳಿವೆ. ಆದರೆ ಇಲ್ಲಿ ಹೇಳ ಹೊರಟಿರುವುದು ಎಲ್ಲಾ ಅರ್ಹತೆಗಳಿದ್ದರೂ ಬಿಪಿಎಲ್ ಕಾರ್ಡ್ ಸಿಗದ ವೃದ್ಧೆಯ ಕಥೆ.
ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಬಡತನ ರೇಖೆಗಿಂತ ಕೆಳಗಿನವರಿಗೆ ನೀಡುವ ಬಿಪಿಎಲ್ ಕಾರ್ಡ್ಗಳು ದುರುಪಯೋಗವಾಗುತ್ತಿವೆ. ಆದರೆ ಮೈಸೂರಿನಲ್ಲಿ ಎಲ್ಲಾ ಅರ್ಹತೆ ಇದ್ದರೂ ವೃದ್ಧೆಯೊಬ್ಬರಿಗೆ ಬಿಪಿಎಲ್ ಕಾರ್ಡ್ ಸಿಕ್ಕಿಲ್ಲ. ಅವರಿಗೆ ಬಡತನ ರೇಖೆಗಿಂತ ಮೇಲಿರುವ ಅಂದರೆ ಎಪಿಎಲ್ ಕಾರ್ಡ್ ನೀಡಲಾಗಿದೆ.
ಮೈಸೂರಿನ ರಾಮಾನುಜ ರಸ್ತೆ 19ನೇ ಕ್ರಾಸ್ನಲ್ಲಿ ಗುಡಿಸಲಿನಲ್ಲಿ ವಾಸಿಸುತ್ತಿರುವ ವೆಂಕಟೇಶ್ ಎಂಬವರ ಪತ್ನಿ ಶಾರದಮ್ಮ (60)ಗೆ ಬಿಪಿಎಲ್ ಬದಲು ಎಪಿಎಲ್ ಕಾರ್ಡ್ ನೀಡಲಾಗಿದೆ. ಶಾರದಮ್ಮ ಅವರು ಪುತ್ರಿ ಚೈತ್ರಾ (14) ಜೊತೆ ಆ ಗುಡಿಸಲಿನಲ್ಲಿ ವಾಸಿಸುತ್ತಾ ಕಳೆದ 20 ವರ್ಷಗಳಿಂದ ಪ್ರತಿನಿತ್ಯ ನಾಲ್ಕು ಮನೆಗಳಲ್ಲಿ ಮನೆಗೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ಆಧಾರ್ನಲ್ಲಿಯೂ ಗುಡಿಸಲು: ಅವರ ಎಪಿಎಲ್ ಅನಿಲ ರಹಿತ ಕಾರ್ಡ್ ಸಂಖ್ಯೆ ಎಂವೈಎಸ್ಐ 00104386. ಸದಸ್ಯರ ಸಂಖ್ಯೆ 2. ತ್ಯಾಗರಾಜ ರಸ್ತೆಯಲ್ಲಿರುವ ಎಂ.ವಿ. ತಮ್ಮಯ್ಯ ನ್ಯಾಯಬೆಲೆ ಅಂಗಡಿಯಲ್ಲಿ ಅವರು ಪಡಿತರ ಪಡೆಯಬೇಕು.
ಶಾರದಮ್ಮ ಅವರ ಆಧಾರ್ ಕಾರ್ಡ್ನಲ್ಲಿಯೂ ಗುಡಿಸಲು ವಾಸಿ ಎಂದೇ ಇದೆ. ಆದರೆ ಆಹಾರ ಮತ್ತು ನಾಗರಿಕ ಪೂರೈಕೆ ಅಧಿಕಾರಿಗಳು ಮಾತ್ರ ಕಣ್ಣುಬಿಟ್ಟಿಲ್ಲ. ನಿಜವಾಗಿಯೂ ಶಾರದಮ್ಮ ಅವರಿಗೆ ಬಿಪಿಎಲ್ ಕಾರ್ಡ್ ಸಿಗಬೇಕು. ಆದರೆ ಅಧಿಕಾರಿಗಳು ಮಾತ್ರ ಕಣ್ಣಿದ್ದೂ ಕುರುಡರಂತೆ, ಕಿವಿ ಇದ್ದೂ ಕಿವುಡರಂತೆ ವರ್ತಿಸುತ್ತಿದ್ದಾರೆ. ಪರಿಣಾಮ ಶಾರದಮ್ಮ ಮನೆಗೆಲಸ ಮಾಡಿಕೊಂಡು, ಬಿಡುವಿದ್ದಾಗ ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ ಬಿಪಿಎಲ್ ಕಾರ್ಡ್ ಮಾತ್ರ ಸಿಗುತ್ತಿಲ್ಲ.
ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಬಿಪಿಎಲ್ ಕಾರ್ಡ್ದಾರರಿಗೆ ತಿಂಗಳಿಗೆ 30ಗೆ ಗರಿಷ್ಠ 30 ಕೆಜಿ ಅಕ್ಕಿ ನೀಡುತ್ತದೆ. ನಮ್ಮ ಮನೆಯಲ್ಲಿ ಇಬ್ಬರು ಇರುವುದರಿಂದ 20ಕ್ಕೆ 20 ಕೆಜಿ ಅಕ್ಕಿ ಸಿಗುತ್ತದೆ. ಆ ಅಕ್ಕಿ ಪಡೆದರೆ ಹೇಗೋ ಜೀವನ ಸಾಗುತ್ತದೆ. ಆದರೆ ನನಗೆ ಅನ್ನಭಾಗ್ಯವೇ ಇಲ್ಲ ಎಂದು ಶಾರದಮ್ಮ ನೋವಿನಿಂದ ಹೇಳುತ್ತಾರೆ.
ಅಧಿಕಾರಿಗಳು ಹೇಳೋದೇನು?: ಕೆಇಬಿ ಬಿಲ್, ಆಧಾರ್ ಕಾರ್ಡ್, ಗುಡಿಸಲಿನ ವಾಸಿ ಎಂಬುದಕ್ಕೆ ದಾಖಲೆ ತೆಗೆದುಕೊಂಡು ಸಂಬಂಧಿಸಿದ ಕಂಪ್ಯೂಟರ್ ಕೇಂದ್ರಕ್ಕೆ ಹೋದಲ್ಲಿ ಈ ಸಮಸ್ಯೆ ಬಗೆಹರಿಸಿ, ಬಿಪಿಎಲ್ ಕಾರ್ಡ್ ನೀಡುತ್ತಾರೆ. ಆರ್ಸಿಎನ್ಇಡಬ್ಲ್ಯೂ ಎಂದು ಟೈಪ್ ಮಾಡಿ, ಅವರ ಹೆಸರನ್ನು ಮೊ.9212357123ಕ್ಕೆ ಎಸ್ಎಂಎಸ್ ಕಳುಹಿಸಿದರೆ ಅವರಿಗೆ ಒಂದು ಕೋಡ್ ನಂಬರ್ ಬರುತ್ತದೆ. ಅದನ್ನು ಅರ್ಜಿಯಲ್ಲಿ ದಾಖಲಿಸಿ, ಸಲ್ಲಿಸಿದರೆ ಕೂಡಲೇ ಬಿಪಿಎಲ್ ಕಾರ್ಡ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಆ ಮಹಿಳೆ ನೇರವಾಗಿ ತಮ್ಮ ಬಳಿ ಬಂದು ಅರ್ಜಿ ನೀಡಿದರೂ ತಕ್ಷಣ ಬಿಪಿಎಲ್ ಕಾರ್ಡ್ ನೀಡಲು ಕ್ರಮ ವಹಿಸಲಾಗುವುದು ಎನ್ನುತ್ತಾರೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಸಹಾಯಕ ನಿರ್ದೇಶಕ ದೇವಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

