ವಾರಕ್ಕೊಮ್ಮೆ ಪಿಂಚಣಿ ಅದಾಲತ್ ನಡೆಸಿ
ಕ.ಪ್ರ.ವಾರ್ತೆ ಮೈಸೂರು ಸೆ. 2
ಹೋಬಳಿ ಮಟ್ಟದಲ್ಲಿ ವಾರಕ್ಕೊಮ್ಮೆ, ತಿಂಗಳಲ್ಲಿ ನಾಲ್ಕು ಪಿಂಚಣಿ ಅದಾಲತ್ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಸೋಮವಾರ ಮಧ್ಯಾಹ್ನ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಹುಣಸೂರು ಉಪ ವಿಭಾಗದಲ್ಲಿ 27, ಮೈಸೂರು ಉಪ ವಿಭಾಗದಲ್ಲಿ 14 ಹೋಬಳಿಗಳಿವೆ. ಎಲ್ಲ ಹೋಬಳಿಗಳಲ್ಲಿ ಪಿಂಚಣಿ ಅದಾಲತ್ ನಡೆಸಬೇಕು. ಯಾವುದೇ ದೂರು ಬರದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದರು.
ಉದ್ಯೋಗ ಖಾತ್ರಿ ಯೋಜನೆಯಡಿ ಜಿಲ್ಲೆಯಲ್ಲಿ 46 ಸಾವಿರ ಶೌಚಾಲಯಗಳನ್ನು ತಲಾ 9400 ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ 2822 ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ ಎಂದು ಜಿಪಂ ಸಿಇಒ ಪಿ.ಎ. ಗೋಪಾಲ್ ಹೇಳಿದರು.
ಪರಿಶಿಷ್ಟರಿಗೆ 15 ಸಾವಿರ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿಕೊಡಬೇಕು. ಆಲಗೂಡು ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಿಸುವಂತೆ ಹೇಳಿದರು.
ನೀರು ಕೊಡಿ: ನಗರದ ಜನರಿಗೆ ಸರಿಯಾಗಿ ಕುಡಿಯುವ ನೀರು ಪೂರೈಸಬೇಕು. ಶಾರದಾದೇವಿ ನಗರ, ಮಂಡಿ ಮೊಹಲ್ಲಾ ಇತರೆಡೆ ನೀರಿನ ಸಮಸ್ಯೆ ಇದೆ. ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಪರಿಹರಿಸಬೇಕು. ಚಾಮುಂಡಿ ಬೆಟ್ಟಕ್ಕೆ ನೀರು ಸರಬರಾಜು ಮಾಡುವಂತೆ ತಿಳಿಸಿದರು.
ಜಸ್ಕೋ ಕಂಪನಿಯವರು ಸರಿಯಾಗಿ ಕೆಲಸ ಮಾಡದಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನರ್ಮ್ ಮತ್ತು ಜಸ್ಕೋ ಸಂಬಂಧಿಸಿದಂತೆ ಸದ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಶಾಸಕರು, ಸಂಸದರು ಮತ್ತು ಸ್ಥಳೀಯ ಜನಪ್ರತಿನಿಧಿಗಳ ಪ್ರತ್ಯೇಕ ಸಭೆ ನಡೆಸಲಿದ್ದಾರೆ ಎಂದು ಹೇಳಿದರು.
ಜಿಲ್ಲೆಯ ಕೆ.ಆರ್. ನಗರ, ಮೈಸೂರು ಮತ್ತು ಟಿ. ನರಸೀಪುರ ತಾಲೂಕಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಕೃಷಿ ಅಧಿಕಾರಿ ಹೇಳಿದರು. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಿಯಾಗಿ ಪೂರೈಸಬೇಕು. ಬರಗಾಲ ಇರುವ ತಾಲೂಕುಗಳಿಗೆ ವಿಶೇಷ ನೆರವು ನೀಡುವ ಸಂಬಂಧ ವರದಿ ಸಲ್ಲಿಸಬೇಕು. ಕಬಿನಿ ಯೋಜನೆಯಡಿ ಜಯಪುರ ಸುತ್ತಮುತ್ತಲಿನ ಗ್ರಾಮಗಳಿಗೆ ನೀರು ಸರಬರಾಜು ಮಾಡುವ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಅನ್ನಭಾಗ್ಯ ಯೋಜನೆಯಡಿ 1ಕ್ಕೆ ಕೆಜಿ ಅಕ್ಕಿ ನೀಡಲಾಗುತ್ತಿದೆ. ಕೆಲವು ನ್ಯಾಯಬೆಲೆ ಅಂಗಡಿಯವರು 15 ಕೆಜಿ ಉಚಿತವಾಗಿ ನೀಡಿ, 15 ಕೆಜಿ ತಾವೆ ಇರಿಸಿಕೊಳ್ಳುತ್ತಿದ್ದಾರೆ. ಯಾರೂ 1 ಹೆಚ್ಚಾಗಿ ಮಾರಾಟ ಮಾಡಬಾರದು. ಅಧಿಕಾರಿಗಳು ಅಕ್ಕಿ ವಿತರಣೆಯ ಬಗ್ಗೆ ಆಗಾಗ ತಪಾಸಣೆ ಮಾಡಿ ಅಕ್ರಮ ತಡೆಗಟ್ಟಬೇಕು. ಅಕ್ರಮದಲ್ಲಿ ತೊಡಗಿರುವ ನ್ಯಾಯಬೆಲೆ ಅಂಗಡಿಯ ಪರವಾನಗಿ ರದ್ದುಗೊಳಿಸುವಂತೆ ಸೂಚಿಸಿದರು. ಡಿಸೆಂಬರ್ನಲ್ಲಿ ತಲಕಾಡು ಪಂಚಲಿಂಗ ದರ್ಶನ ನಡೆಯಲಿದ್ದು, ರಸ್ತೆ ಅಭಿವೃದ್ಧಿ ಸಂಬಂಧಿಸಿದಂತೆ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಇದ್ದರು.
ಪಿಂಚಣಿ ಅದಾಲತ್ ನಡೆಸುವ ಸ್ಥಳಕ್ಕೆ ವೈದ್ಯರನ್ನು ಸಹ ಅಧಿಕಾರಿಗಳು ಕರೆದುಕೊಂಡು ಹೋಗಬೇಕು. ಉಪ ವಿಭಾಗಾಧಿಕಾರಿಗಳು ಸ್ಥಳದಲ್ಲಿ ಪಿಂಚಣಿ ಮಂಜೂರು ಮಾಡಬೇಕು. ವಿಧವೆಯರು, ವಿಚ್ಚೇದಿತ ಮಹಿಳೆಯರು ಸೇರಿದಂತೆ ಎಲ್ಲರಿಗೂ ಪಿಂಚಣಿ ಸೌಲಭ್ಯ ಕಲ್ಪಿಸಬೇಕು. ಯಾವುದೇ ದೂರು ಬರದಂತೆ ಅಧಿಕಾರಿಗಳು ಪಿಂಚಣಿ ಅದಾಲತ್ ನಡೆಸಬೇಕು.
- ಸಿದ್ದರಾಮಯ್ಯ, ಮುಖ್ಯಮಂತ್ರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

