ಅಂಬಾರಿ ಧರ್ಮಕಾರಣಕ್ಕೆ ತೀವ್ರ ಖಂಡನೆ
ಕ.ಪ್ರ. ವಾರ್ತೆ ಮೈಸೂರು ಸೆ.6
ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯ ಅಂಬಾರಿ ಕಟ್ಟುವ ವಿಚಾರದಲ್ಲಿ ಧರ್ಮಕಾರಣವನ್ನು ಎಳೆದು ತಂದಿರುವ ಕಿಡಿಗೇಡಿಗಳ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ.
ದಸರಾ ಅಂಬಾರಿ ಕಟ್ಟುವ ವಿಚಾರ ಸುಖಾಂತ್ಯವಾಗಿದ್ದರೂ ಇದನ್ನು ಹುಟ್ಟುಹಾಕಿದವರು ವಿಕೃತ ಮನಸ್ಥಿತಿಯುಳ್ಳವರು. ಕಳೆದ ಹದಿನೈದು ವರ್ಷಗಳಿಂದ ಅಂಬಾರಿ ಕಟ್ಟಿಕೊಂಡು ಬರುತ್ತಿರುವ ಅಕ್ರಂ ಪಾಷಾ ಅತ್ಯಂತ ಪರಿಣತ. ಹಿಂದೊಮ್ಮೆ ಮೈಸೂರು ನಗರಕ್ಕೆ ಕಾಡಾನೆ ದಾಳಿ ಮಾಡಿದ ಸಂದರ್ಭದಲ್ಲಿ ಅರವಳಿಕೆ ಮದ್ದು ನೀಡಿ ಅನಾಹುತ ನಿಯಂತ್ರಿಸಲು ಸಾಕಷ್ಟು ಶ್ರಮಿಸಿದ್ದಾರೆ. ಇಂತಹ ತಜ್ಞನನ್ನು ಕೇವಲ ಧರ್ಮಕ್ಕೆ ಸೀಮಿತಗೊಳಿಸಿ ಅಮಾನತುಗೊಳಿಸುವ ಮಟ್ಟಕ್ಕೆ ಶಿಫಾರಸು ಮಾಡಿರುವುದು ಖಂಡನಾರ್ಹ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎನ್. ಮಹೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡ ಚಳವಳಿಯಲ್ಲಿ ತೊಡಗಿರುವವರೆ ಇಂತಹ ಪ್ರವೃತ್ತಿಗೆ ಪತ್ರ ಬರೆದಿದ್ದು ಸರಿಯಲ್ಲ. ಇವರು ಬರೆಯುತ್ತಿದ್ದನ್ನೇ ಕಾಯುತ್ತಿದ್ದ ಡಿಸಿಎಫ್ ದೇವರಾಜು ತಕ್ಷಣದಲ್ಲೆ ಅಕ್ರಂ ಪಾಷಾ ಅವರನ್ನು ಅಂಬಾರಿ ಕಟ್ಟುವ ದಿನ ಬೇರೆ ಕಡೆ ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿರುವುದು ತಾಲಿಬಾನ್ ಮನಸ್ಥಿತಿಯನ್ನು ತೋರ್ಪಡಿಸುವಂತಿದೆ. ಈ ಹಿನ್ನೆಲೆಯಲ್ಲಿ ದೇವರಾಜು ಆಡಳಿತದಲ್ಲಿ ಅನುಮಾನ ಮೂಡುತ್ತದೆ ಎಂದರು.
ಮಾವುತ ಜಾತ್ಯತೀತ: ಮಾವುತ ಅಕ್ರಂ ಪಾಷಾ ಅತ್ಯಂತ ಜಾತ್ಯತೀತ. ದಸರಾ ವೇಳೆ ಅಂಬಾರಿ ಕಟ್ಟುವ ಕೆಲಸ ವಹಿಸಿಕೊಂಡಿರುವುದರಿಂದ ಆತ ಆ 9 ದಿನಗಳ ಕಾಲ ಮಾಂಸ ತಿನ್ನುವುದಿಲ್ಲ ಎಂಬ ವಿಚಾರ ಪ್ರಶಂಸನೀಯ. ಅಷ್ಟು ಕಟ್ಟುನಿಟ್ಟಾಗಿ ಬಹಳ ಪರಿಣತಿಯಿಂದ ಅಂಬಾರಿ ಕಟ್ಟುವ ಕೆಲಸವನ್ನು ಧರ್ಮದ ದೃಷ್ಟಿಯಿಂದ ನೋಡಬಾರದು. ಇನ್ನು ಮುಂದೆ ಈ ತರಹದ ವಿವಾದಗಳು ಮರುಕಳಿಸಬಾರದು ಎಂದು ಒತ್ತಾಯಿಸಿದರು.
ಅಂಬಾರಿ ಕಟ್ಟುವ ವಿಚಾರದಲ್ಲಿ ತಿಳಿಗೇಡಿಗಳು ಅನಾಮಧೇಯ ಕಾಗದ ಬರೆದು ಕೋಮು ಸಂಘಟನೆಗೆ ಇಂಬು ನೀಡಿದ್ದಾರೆ. ಶತಮೂರ್ಖರು ಇಂತಹ ಕೆಲಸ ಮಾಡಲು ಸಾಧ್ಯ. ನಾನು ತಿಳಿದಂತೆ ಅರಮನೆ ಒಳಗೆ ಅಂಬಾರಿಗೆ ಪೂಜೆ ಸಲ್ಲಿಸಿ ಅಲ್ಲಿಯೇ ಶ್ರೀ ಚಾಮುಂಡೇಶ್ವರಿ ದೇವಿ ವಿಗ್ರಹವನ್ನು ಪ್ರತಿಷ್ಠಾಪಿಸಿ ನಂತರ ಕ್ರೇನ್ ಮೂಲಕ ಆನೆ ಮೇಲೆ ಕೂರಿಸಿ ಹಗ್ಗದಿಂದ ಕಟ್ಟುತ್ತಾರೆ. ಇಂತಹ ಸಂದರ್ಭದಲ್ಲಿ ಅಕ್ರಂ ಪಾಷಾ ಬಹಳ ತಂತ್ರ ಬಳಸಿ ಕಟ್ಟುತ್ತಾನೆ. ಇದಾವುದನ್ನು ಯೋಚಿಸಿದವರು ಹೀಗೆ ಪತ್ರ ಬರೆಯುತ್ತಾರೆ. ಅಧಿಕಾರಿಗಳು ತಕ್ಷಣ ಕ್ರಮ ತೆಗೆದುಕೊಳ್ಳುತ್ತಾರೆ. ಇಂತಹ ಕೆಟ್ಟ ಪ್ರವೃತ್ತಿಯಿಂದ ಸಮಾಜ ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಮುಖಂಡರಾದ ಶಿವಕುಮಾರ್, ಶಿವ ಮಹದೇವ, ಮಹದೇವಸ್ವಾಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

