ಮೈಸೂರು

ಅಂಬೇಡ್ಕರ್ ಭವನ ಸಾಂಸ್ಕೃತಿಕ ತಾಣವಾಗಲಿ

Published On :

ಕ.ಪ್ರ. ವಾರ್ತೆ   ಹುಣಸೂರು   ಸೆ.8
ಇಲ್ಲಿನ ಅಂಬೇಡ್ಕರ್ ಭವನ ಅಧ್ಯಯನ, ಸಾಂಸ್ಕೃತಿಕ ಚಟುವಟಿಕೆಗಳ ತಾಣವಾಗಲಿ ಎಂದು ಶಾಸಕ ಎಚ್.ಪಿ. ಮಂಜುನಾಥ್ ಆಶಿಸಿದರು.
ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಸಭಾಂಗಣದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ತಾಲೂಕಿನ ಪ.ಜಾತಿ, ವರ್ಗಗಳ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.
ದಲಿತ ಮುಖಂಡ ನಿಂಗರಾಜ ಮಲ್ಲಾಡಿ ಅಂಬೇಡ್ಕರ್ ಭವನವನ್ನು ಅಭಿವೃದ್ಧಿಗೊಳಿಸಿ ಮದುವೆ ಸಮಾರಂಭಗಳಿಗೆ ನೀಡಬೇಕು. ಪಟ್ಟಣದಲ್ಲಿ ಅಂಬೇಡ್ಕರ್ ಪ್ರತಿಮೆ ಪ್ರತಿಷ್ಠಾಪಿಸಬೇಕೆಂಬ ಪ್ರಸ್ತಾಪಕ್ಕೆ, ಭವನದ ಮೊದಲನೆ ಅಂತಸ್ತು ನಿರ್ಮಾಣಕ್ಕೆ ಒಂದು ಕೋಟಿ ರು. ಮಂಜೂರಾಗಿದೆ. ಪುರಸಭೆಗೆ ನೂತನ ಕಟ್ಟಡ ನಿರ್ಮಿಸುತ್ತಿದ್ದು, ಉದ್ಘಾಟನೆ ನಂತರ ಹಳೆಯ ಕಚೇರಿ ಕಟ್ಟಡ ಒಡೆದು ಹಾಕಿದರೆ ಅಂಬೇಡ್ಕರ್ ಭವನ ಸುಂದರವಾಗಿ ಕಾಣಿಸಿಕೊಳ್ಳಲಿದೆ. ಇಲ್ಲಿ ಮದುವೆಗೆ ಅವಕಾಶ ನೀಡುವುದು ಬೇಡ, ಎಚ್.ಡಿ. ಕೋಟೆ ಸರ್ಕಲ್ ಬಳಿ ನಿರ್ಮಿಸುತ್ತಿರುವ ಬಾಬು ಜಗಜೀವನರಾಂ ಭವನಕ್ಕೆ ಮತ್ತೊಂದು ಕೋಟಿ ರು. ಮಂಜೂರಾಗಿದ್ದು, ಅಲ್ಲಿ ಮದುವೆಗೆ ಅವಕಾಶ ಕಲ್ಪಿಸಲಾಗುವುದು. ಪುರಸಭೆ ಹಾಗೂ ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಅಂಬೇಡ್ಕರ್ ಪ್ರತಿಮೆಗೆ ಸ್ಥಳ ನಿಗದಿಗೊಳಿಸಲಾಗುವುದು ಎಂದು ಹೇಳಿದರು. ಪೊಲೀಸ್ ಠಾಣೆಗೆ ಬರುವ ಸಾಕಷ್ಟು ದೂರುಗಳಲ್ಲಿ ಸಂಘಟನೆಯವರೆ ಮಧ್ಯವರ್ತಿಗಳಾಗುತ್ತಿದ್ದಾರೆ. ಹೀಗಾಗಿ ಪೊಲೀಸ್, ಸಾರ್ವಜನಿಕರ ನಡುವೆ ಕೆಟ್ಟ ವಾತಾವರಣ ನಿರ್ಮಾಣವಾಗುತ್ತಿದೆ. ತಮ್ಮನ್ನು ತಾವು ತಿದ್ದುಕೊಳ್ಳುವ ಮೂಲಕ ಇಂತಹ ನಡವಳಿಕೆಯಿಂದ ನಾವು ದೂರವಿರಬೇಕು ಎಂದು ಮುಖಂಡ ಹರಿಹರ ಆನಂದಸ್ವಾಮಿ ಅವರ ಮಾರ್ಮಿಕ ಸಲಹೆ ಸಭೆಯಲ್ಲಿ ಸಂಚಲನ ಮೂಡಿಸಿತು. ಅಲ್ಲದೆ ಲ್ಯಾಂಪ್ಸ್ ಅಧ್ಯಕ್ಷ ಕೃಷ್ಣಯ್ಯರ ಭೂಮಿ ವಿವಾದ ಸಂಬಂಧಿಸಿದಂತೆ ಆದ ಪ್ರಸ್ತಾಪಕ್ಕೆ ಹರಿಹರ ಆನಂದಸ್ವಾಮಿ ಹಾಗೂ ಹಲವು ಮುಖಂಡರ ನಡುವೆ ಬಿರುಸಿನ ಚರ್ಚೆ, ವಾಗ್ವಾದ ನಡೆದಾಗ ಶಾಸಕರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ದಲಿತರಿಗೆ ಸ್ಮಶಾನವಿಲ್ಲ: ತಾಲೂಕಿನ ಬಹುತೇಕ ಕಡೆ ದಲಿತರಿಗೆ ಸ್ಮಶಾನವಿಲ್ಲ. ಇದ್ದರೂ ಕೆಲವೆಡೆ ಒತ್ತುವರಿಯಾಗಿದ್ದರೂ ತೆರವುಗೊಳಿಸುತ್ತಿಲ್ಲ. ಹಲವೆಡೆ ಇದ್ದರೂ ಅಭಿವೃದ್ಧಿಗೊಳಿಸುತ್ತಿಲ್ಲವೆಂಬ ದೂರಿಗೆ ಕಾಲಮಿತಿಯೊಳಗೆ ಒತ್ತುವರಿ ತೆರವುಗೊಳಿಸುವ, ಅಭಿವೃದ್ಧಿ ಮಾಡುವ ಹಾಗೂ ಸ್ಮಶಾನವೆ ಇಲ್ಲದ ಕಡೆ ಭೂಮಿ ಖರೀದಿಸಿ, ಸ್ಮಶಾನ ಭೂಮಿ ನಿಗದಿಪಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಶಾಸಕರು ಸೂಚನೆ ನೀಡಿ, ಈ ಸಂಬಂಧ ಗ್ರಾಪಂಗಳ ಪಿಡಿಒ ಹಾಗೂ ಅಧ್ಯಕ್ಷರ ಸಭೆ ನಡೆಸಿ ಪರಿಹಾರ ಕಂಡು ಹಿಡಿಯಲಾಗುವುದು ಎಂದು ಶಾಸಕರು ತಿಳಿಸಿದರು.
ಪೊಲೀಸ್ ಠಾಣೆಗಳಲ್ಲಿ ಅಪರಾಧಿ- ಫಿರ್ಯಾದಿಗಳ ದೂರು ದಾಖಲು ಮಾಡಿಕೊಳ್ಳುತ್ತಿರುವುದರಿಂದ ಎಲ್ಲರೂ ತೊಂದರೆಗೊಳಗಾಗುತ್ತಿದ್ದಾರೆ. ಲಂಚದ ಹಾವಳಿ ಮಿತಿ ಮೀರಿದೆ ಎಂಬ ಕಟ್ಟೆಮಳಲವಾಡಿಯ ಹರೀಶ್ರ ಆರೋಪಕ್ಕೆ ಹಲವರು ಧ್ವನಿಗೂಡಿಸಿದರು. ಆಗ ಸುಪ್ರೀಂ ಕೋರ್ಟ್ನ ಸೂಚನೆಯಂತೆ ದೂರನ್ನು ದಾಖಲಿಸುತ್ತಿದ್ದಾರೆ. ಸಂಘಟನೆಗಳವರೆ ದೂರು- ಪ್ರತಿ ದೂರು ನೀಡುವವರನ್ನು ಪರ-ವಿರೋಧ ನಿಲ್ಲುವುದರಿಂದಾಗಿ ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಸಿಗುತ್ತಿಲ್ಲವೆಂಬ ದೂರು ಕೇಳಿ ಬರುತ್ತಿದ್ದು, ಈ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕೆಂದು ಹಿರಿಯ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು ಹೇಳಿದರು.
ಚಿಕ್ಕ ಹುಣಸೂರಿನ ಮುಖ್ಯರಸ್ತೆಯ ಬಳಿಯ ಸರ್ಕಾರಿ ಜಾಗದಲ್ಲಿ ಹತ್ತಾರು ವರ್ಷಗಳಿಂದ ದಲಿತರು ವಾಸಿಸುತ್ತಿದ್ದು, ಈಗ ತೆರವುಗೊಳಿಸಲಾಗಿದೆ. ಅಲ್ಲಿ ಶಾಲೆಗೆ ಎರಡು ಎಕರೆ ಬಿಟ್ಟು ಉಳಿಕೆ ಭೂಮಿಯಲ್ಲಿ ದಲಿತರಿಗೆ ನಿವೇಶನ ನೀಡಬೇಕೆಂಬ ಹಲವು ಮುಖಂಡರ ಒತ್ತಾಯಕ್ಕೆ ಅಲ್ಲಿ ವಾಸವಿದ್ದವರಿಗೆ ಬೇರೆಡೆ ನಿವೇಶನ ನೀಡಲಾಗುವುದು. ಅಲ್ಲಿ ಶಾಲೆ ನಿರ್ಮಿಸಲು ಉದ್ದೇಶಿಸಿದ್ದು, ಸಹಕರಿಸುವಂತೆ ಶಾಸಕರು ಮನವಿ ಮಾಡಿದರು.
ಸಭೆಯಲ್ಲಿ ಭೂಮಿ, ಕೆರೆ, ರಸ್ತೆ, ಒಣಿ ಒತ್ತುವರಿ ಸೇರಿದಂತೆ ಹಲವಾರು ವಿಷಯಗಳು ಪ್ರಸ್ತಾಪವಾದವು. ಪ್ರತಿ ಆರು ತಿಂಗಳಿಗೊಮ್ಮೆ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಪ್ರಗತಿ ಬಗ್ಗೆ ಪರಿಶೀಲನೆ ನಡೆಸುತ್ತೇನೆಂದು ಶಾಸಕರು ಸಮಸ್ಯೆಗಳಿದ್ದಲ್ಲಿ ತಮ್ಮನ್ನು ನೇರವಾಗಿ ಭೇಟಿ ಮಾಡಬೇಕೆಂದು ಸೂಚಿಸಿದರು.
ತಹಸೀಲ್ದಾರ್ ವೆಂಟಕಾಚಲ ಹಾಗೂ ವೃತ್ತ ನಿರೀಕ್ಷಕ ಗಜೇಂದ್ರ ಪ್ರಸಾದ್, ಮುಖಂಡರಾದ ಹರಿಹರ ಆನಂದಸ್ವಾಮಿ, ಬಸವರಾಜು ಕಲ್ಕುಣಿಕೆ, ಕಾಂತರಾಜು, ವರದರಾಜು, ಚಿಕ್ಕಸ್ವಾಮಿ, ಗೋವಿಂದರಾಜು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.