ಮೈಸೂರು

ಬೃಹತ್ ಗಣೇಶ ವಿಗ್ರಹ ಪ್ರತಿಷ್ಠಾಪನೆ

Published On :


ಟಿ. ನರಸೀಪುರ: ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ 17ನೇ ವರ್ಷದ ಶ್ರೀ ಗಣಪತಿ ಮಹೋತ್ಸವದ ಪ್ರಯುಕ್ತ ಹನ್ನೊಂದಡಿ ಎತ್ತರದ ಸುಬ್ರಮಣ್ಯ ಸಮೇತ ವಿಘ್ನನಿವಾರಕ ಗಣಪತಿಯನ್ನು ಗೌರಿ ಗಣೇಶ ಹಬ್ಬದ ದಿನವಾದ ಸೋಮವಾರ ಪ್ರತಿಷ್ಠಾಪಿಸಲಾಗಿದೆ.
ಕಳೆದ ಒಂದೂವರೆ ದಶಕದಿಂದಲೂ ಗಣಪತಿ ಉತ್ಸವ ಹಮ್ಮಿಕೊಳ್ಳುತ್ತಿರುವ ಖಾಸಗಿ ಬಸ್ ಏಜೆಂಟರ ಸಂಘ ಈ ವರ್ಷ ಗೌರಮ್ಮನ ಜೊತೆಯಲ್ಲೇ ಗಣಪತಿಯನ್ನು ಸಹೋದರ ಸುಬ್ರಮಣ್ಯ ಸಮೇತ ಪ್ರತಿಷ್ಠಾಪನೆ ಮಾಡಿರುವುದು ವಿಶೇಷವಾಗಿದ್ದು, ಲೋಕಾಭಿರಾಮವಾಗಿ ನಿಂತ ಸಹೋದರರಿಬ್ಬರು ಸಾರ್ವಜನಿಕರು ಹಾಗೂ ಭಕ್ತರನ್ನು ಆಕರ್ಷಿಸುತ್ತಿದೆ.
ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ. ಪುಟ್ಟರಾಜು, ಕಾರ್ಯದರ್ಶಿ ರಾಜಣ್ಣ, ಎಪಿಎಂಸಿ ಅಧ್ಯಕ್ಷ ಕಗ್ಗಲೀಪುರ ಎಂ.ರಾಜು, ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಎ.ಜೆ. ವೆಂಕಟೇಶ್, ಪತ್ರಕರ್ತ ಎಂ. ನಾರಾಯಣ, ಕೀರ್ತಿ ಸೌಂಡ್ಸ್ನ ಮಾಲೀಕ ಮುದ್ದಣ್ಣ, ಮುಖಂಡರಾದ ಹೊಟೇಲ್ ಲಿಂಗರಾಜು, ಉಮೇಶ್, ನವಿಲೂರು ಸುಬ್ಬಣ್ಣ, ಆಲಗೂಡು ಸಿದ್ದಪ್ಪ ಇದ್ದರು.

ಅತ್ಯಾಚಾರದ ಆರೋಪಿ ರವಿ ಬಂಧನ
ಎಚ್.ಡಿ. ಕೋಟೆ: ತಾಲೂಕಿನ ಮಾಗುಡಿಲು ಗ್ರಾಮದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಾಗುಡಿಲು ಗ್ರಾಮದ ಚಲುವಯ್ಯ ಎಂಬುವವರ ಮಗ ರವಿ (26) ಬಂಧಿತ ಆರೋಪಿ. ಇವರು ಕಳೆದ ಆ. 15 ರಂದು ಜಮೀನಿನಲ್ಲಿ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದರು. ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದ ವೃತ್ತ ನಿರೀಕ್ಷಕ ಗೋವಿಂದರಾಜು ಹಾಗೂ ಸಿಬ್ಬಂದಿ ಮಂಗಳವಾರ ಹ್ಯಾಂಡ್ ಪೋಸ್ಟ್ ಬಳಿ ರವಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.


ನಾಳೆ ಬೈಲುಕುಪ್ಪೆ ಆವರಣದಲ್ಲಿ ಗ್ರಾಮಸಭೆ

ಬೈಲುಕುಪ್ಪೆ: ಬೈಲುಕುಪ್ಪೆ ಗ್ರಾಪಂ ಆವರಣದಲ್ಲಿ ಸೆ.12ರ ಬೆಳಗ್ಗೆ 10.30ಕ್ಕೆ ಅಧ್ಯಕ್ಷ ರವಿ ಅಧ್ಯಕ್ಷತೆಯಲ್ಲಿ ಗ್ರಾಮ ಸಭೆ ನಡೆಯಲಿದೆ. ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ಚುನಾಯಿತ ಸದಸ್ಯರು, ಸಾರ್ವಜನಿಕರು ಹಾಗೂ ಮಹಿಳಾ ಹಾಗೂ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗ್ರಾಪಂ ಪಿಡಿಒ ಶಿವಯೋಗ ತಿಳಿಸಿದ್ದಾರೆ. ಇಲಾಖಾವಾರು ವೈಯಕ್ತಿಕ ಸೌಲಭ್ಯ ಒದಗಿಸಲು ಫಲಾನುಭಾವಿಗಳ ಆಯ್ಕೆ ಮಾಡಬೇಕಾದಲ್ಲಿ ವಾರ್ಡ್ ಸಭೆ ಮತ್ತು ಗ್ರಾಮಸಭೆಗೆ ಮುಂಚಿತವಾಗಿ ಲಿಖಿತ ಮೂಲಕ ಪಂಚಾಯಿತಿಗೆ ಮಾಹಿತಿ ನೀಡುವುದು ಹಾಗೂ ಇಲಾಖೆಗೆ ಸಂಬಂಧಿಸಿದ ಮುಖ್ಯಸ್ಥರು ಸಭೆಯ ದಿನಾಂಕದಂದು ಮಾಹಿತಿಯೊಂದಿಗೆ ಹಾಜರಾಗುವಂತೆಯೂ ಕೋರಿದ್ದಾರೆ.



13ರಂದು ಪಿಂಚಣಿ ಅದಾಲತ್
ಎಚ್.ಡಿ. ಕೋಟೆ: ತಾಲೂಕಿನ ಅಂತರಸಂತೆ ಹೋಬಳಿ ಮಟ್ಟದ ಪಿಂಚಣಿ ಅದಾಲತ್ ಸೆ.13ರ ಬೆಳಗ್ಗೆ 11ಕ್ಕೆ ಅಂತರಸಂತೆ ನಾಡ ಕಚೇರಿಯಲ್ಲಿ ನಡೆಯಲಿದೆ ಎಂದು ತಹಸೀಲ್ದಾರ್ ಕೃಷ್ಣ ತಿಳಿಸಿದ್ದಾರೆ. ಇತ್ತೀಚೆಗೆ ಸರಗೂರು ಪಟ್ಟಣದ ನಾಡ ಕಚೇರಿಯಲ್ಲಿ ಹುಣಸೂರು ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅದಾಲತ್ ನಡೆಸಲು ತೀರ್ಮಾನಿಸಲಾಯಿತು. ಸಂಧ್ಯಾ ಸುರಕ್ಷಾ ಯೋಜನೆಯ 20, ವಿಧವಾ ವೇತನ 20, ಅಂಗವಿಕಲ ವೇತನವನ್ನು 5 ಮಂದಿಗೆ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.