ಮೈಸೂರು

ನರ್ಸರಿ, ತರಕಾರಿಯಿಂದ ಒಳ್ಳೆ ಲಾಭ ರೀ..

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 12
ಕೆಲವರು ವ್ಯವಸಾಯ ಅಂದ್ರೆ ಬತ್ತ, ರಾಗಿ, ಕಬ್ಬು, ಹೊಗೆಸೊಪ್ಪು, ರೇಷ್ಮೆ, ಮುಸುಕಿನ ಜೋಳ ಎಂದುಕೊಂಡಿದ್ದಾರೆ. ಆದರೆ ತರಕಾರಿ ಬೆಳೆದು ಜೊತೆಗೆ ನರ್ಸರಿಯನ್ನು ಹೊಂದಿದ್ದರೆ ಲಕ್ಷಾಂತರ ರು. ಆದಾಯ ಗಳಿಸಬಹುದು ಎಂಬುದಕ್ಕೆ ಹುಣಸೂರು ತಾಲೂಕು ತೆಂಕನಕೊಪ್ಪಲು ಗ್ರಾಮದ ಶ್ರೀನಿವಾಸ್ ನಿದರ್ಶನ.
ಅಳಿಯ ಮನೆ ತೊಳಿಯ ಎಂಬ ಗಾದೆ ಮಾತಿದೆ. ಆದರೆ ಶ್ರೀನಿವಾಸ್ ಮಾತ್ರ ಇದಕ್ಕೆ ತದ್ವಿರುದ್ಧ. ಬಿಳಿಕೆರೆ ಬಳಿಯ ಮೈದನಹಳ್ಳಿಯ ಕೃಷ್ಣೇಗೌಡ ಎಂಬವರ ಪುತ್ರರಾದ ಶ್ರೀನಿವಾಸ್ ತೆಂಕನಕೊಪ್ಪಲಿಗೆ ಮನೆ ಅಳಿಯನಾಗಿ ಹೋದವರು. ಅಂದರೆ ಅವರ ಮಾವನವರಿಗೆ ಗಂಡು ಮಕ್ಕಳಿಲ್ಲ. ಹೀಗಾಗಿ ಶ್ರೀನಿವಾಸ್ ಪತ್ನಿಯ ಮನೆಗೆ ಹೋಗಿ ನೆಲೆನಿಂತು, ಶ್ರಮಪಟ್ಟು ವ್ಯವಸಾಯ ಮಾಡುತ್ತಾ ಮನೆ ಬೆಳಗುತ್ತಿದ್ದಾರೆ.
ಶ್ರೀನಿವಾಸ್ ಅವರಿಗೆ 4 ಎಕರೆ ಜಮೀನಿದೆ. ಅಲ್ಲಿ ಎರಡು ಕೊಳವೆ ಬಾವಿ ಕೊರೆಸಿದ್ದಾರೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಎಲೆಕೋಸು, ಹೂಕೋಸು, ಟೊಮೆಟೋ, ಮೆಣಸಿನಕಾಯಿ, ಬದನೆಕಾಯಿ, ಸೌತೆಕಾಯಿ ಸಸಿಗಳನ್ನು ಬೆಳೆಸುವ ನರ್ಸರಿ ಇದೆ. ನರ್ಸರಿ ಹಾಗೂ ಹನಿ ನೀರಾವರಿ ಸೌಲಭ್ಯಕ್ಕೆ ತೋಟಗಾರಿಕೆ ಇಲಾಖೆಯವರು ಸಹಾಯಧನ ನೀಡಿದ್ದಾರೆ. ಅಲ್ಲದೇ ಕೋಕೋಫಿಟ್ ತಯಾರಿಸಿ, ಮಾರಾಟ ಮಾಡುತ್ತಾರೆ. ಹುಣಸೂರು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಆಗಾಗ ಜಮೀನಿಗೆ ಭೇಟಿ ನೀಡಿ, ಸಲಹೆ ಸೂಚನೆ ನೀಡುತ್ತಿರುತ್ತಾರೆ. ತರಕಾರಿಯನ್ನು ಮೈಸೂರಿನ ಬಂಡೀಪಾಳ್ಯ ಎಪಿಎಂಸಿ ಮಾರುಕಟ್ಟೆ, ಸಸಿಗಳನ್ನು ನರ್ಸರಿ ಬಳಿಯೇ ಮಾರಾಟ ಮಾಡುತ್ತಾರೆ.
ವೆಚ್ಚವೂ ಕಡಿಮೆ: ಶ್ರೀನಿವಾಸ್ ಸತತ 18 ವರ್ಷಗಳಿಂದಲೂ ಎಲೆಕೋಸು, ಹೂಕೋಸು, ಟೊಮೆಟೋ, ಸೌತೆಕಾಯಿ, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ. 1 ಎಕರೆ ಎಲೆಕೋಸಿನಿಂದ 15 ರಿಂದ 20 ಟನ್ ಇಳುವರಿ ಬರುತ್ತದೆ. ಪ್ರತಿ ಕೆಜಿ 18 ವರೆಗೆ ಮಾರಾಟವಾಗುತ್ತದೆ. ವಾರ್ಷಿಕ 30 ರಿಂದ 35,000 ವೆಚ್ಚವಾಗಲಿದ್ದು, 3.25 ಲಕ್ಷ ನಿವ್ವಳ ಲಾಭ ಸಿಗುತ್ತದೆ. ಕೆಲವೊಮ್ಮೆ ಮಾತ್ರ ಬೆಲೆ ಕುಸಿತದಿಂದ ನಷ್ಟವಾಗಿದೆ.
ಟೊಮೆಟೋ ಕೂಡ 12 ರಿಂದ 15 ಟನ್ ಇಳುವರಿ ಬರುತ್ತದೆ. ಆದರೆ ಟೊಮೆಟೋ ದರ ಮಾತ್ರ ಯಾರೂ ಊಹಿಸಲಾಗದು. ಕೆಲವು ಬಾರಿ ಆದಾಯ- ಖರ್ಚು ಎರಡೂ ಸಮ. ಮತ್ತೆ ಕೆಲವು ಬಾರಿ 1.35 ಲಕ್ಷ ಆದಾಯ ಬರುತ್ತದೆ. 60,000 ವೆಚ್ಚವಾಗುತ್ತದೆ. ಸೌತೆಕಾಯಿ ಪ್ರತಿ ಕೆಜಿ 12 ವರೆಗೆ ಮಾರಾಟವಾಗಲಿದ್ದು, 60,000 ಆದಾಯ ಬಂದರೆ 30,000 ವೆಚ್ಚವಾಗುತ್ತದೆ.
ಹೂಕೋಸಿನ 10,000 ಗಿಡಗಳಿದ್ದು, ಕಳೆದ ಬಾರಿ ಪ್ರತಿ ಕೆಜಿ 18ಕ್ಕೆ ಮಾರಾಟವಾಗಿ, 1.20 ಲಕ್ಷ ಆದಾಯ ಬಂದಿತ್ತು. ಖರ್ಚು 25,000 ಮಾತ್ರ. ಮೆಣಸಿನಕಾಯಿಯಿಂದ 1.10 ಲಕ್ಷ ಆದಾಯ ಬಂದಿದ್ದು, 40,000 ವೆಚ್ಚವಾಗಿದೆ. ಒಟ್ಟಾರೆ ತರಕಾರಿ ಬೆಳೆಗಳಿಂದ 5 ಲಕ್ಷ ಆದಾಯ ಬರಲಿದ್ದು, 1.10 ಲಕ್ಷ ವೆಚ್ಚವಾಗುತ್ತದೆ. ನಿವ್ವಳ ಲಾಭ 3.50 ಲಕ್ಷ.
ನರ್ಸರಿಯಲ್ಲಿ ತರಕಾರಿ ಸಸಿಗಳ ಮಾರಾಟದಿಂದ ಖರ್ಚು ಕಳೆದು 1.50 ಲಕ್ಷ ಆದಾಯ ಬರುತ್ತಿದೆ. ಕೋಕೋಫಿಟ್ ಮಾರಾಟದಿಂದ 6- 8 ಲಕ್ಷ ಆದಾಯ ಬರುತ್ತಿದೆ. ಶ್ರೀನಿವಾಸ್ ಅವರ ಒಟ್ಟು ವಾರ್ಷಿಕ ಆದಾಯ 11 ಲಕ್ಷ. ಖರ್ಚು 3 ಲಕ್ಷ. ನಿವ್ವಳ ಲಾಭ 8 ಲಕ್ಷ ಆಗುತ್ತದೆ. ಇದು ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಆಧರಿಸಿರುತ್ತದೆ.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.