'ಮಹಿಳೆಗೆ ಬವಣೆ ನಿಭಾಯಿಸುವ ಕಲೆ ರಕ್ತಗತ'
ಕ.ಪ್ರ.ವಾರ್ತೆ ಮೈಸೂರು ಸೆ. 14
ಯಾವುದೇ ಬವಣೆ ನಿಭಾಯಿಸುವಲ್ಲಿ ಮಹಿಳೆಯರು ಹೆಚ್ಚು ಸಮರ್ಥರು ಎಂದು ಹೆಸರಾಂತ ಕಾದಂಬರಿಗಾರ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ವೈದೇಹಿ ಹೇಳಿದರು.
ಸಂತ ಫಿಲೋಮಿನಾ ಕಾಲೇಜಿನ ಇಂಗ್ಲಿಷ್ ವಿಭಾಗವು ವಿವಿ ಧನಸಹಾಯ ಆಯೋಗದ ಪ್ರಾಯೋಜಕತ್ವದಲ್ಲಿ ಮೈಸೂರು ವಿವಿಯ ಮಹಿಳಾ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಇಂಗ್ಲಿಷ್ ಸಾಹಿತ್ಯ ಅಧ್ಯಯನದಲ್ಲಿ ಸ್ತ್ರೀವಾದದ ಅಳವಡಿಕೆ ಎಂಬ ವಿಷಯ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಸಮಾಜವನ್ನು ಹಾಗೂ ಪುರುಷರನ್ನು ಜಾಣತನದಿಂದ ನಿಭಾಯಿಸುವ ಶಕ್ತಿ, ಬವಣೆಯನ್ನು ಮೆಟ್ಟಿ ನಿಲ್ಲುವ ಸಾಮರ್ಥ್ಯ ಅರಿತಿದ್ದಾರೆ. ಈ ಪರಿಜ್ಞಾನ ಅವರ ಬದುಕಿನಲ್ಲಿ ಕರಗತವಾಗಿ ಬಂದಿದೆ. ಆದರೆ ಹೆಣ್ಣಿನ ರೆಕ್ಕೆ ಕತ್ತರಿಸಿ ಅವಳು ಮೇಲೆ ಹಾರಾಡದಂತೆ ಮಾಡುವ ಪ್ರಯತ್ನಗಳು ನಿರಂತರವಾಗಿ ನಡೆದಿದೆ. ಸ್ತ್ರೀಯರ ಮೇಲಿನ ಶೋಷಣೆ ಪುರಾಣ ಹಾಗೂ ಆಧ್ಯಾತ್ಮದಲ್ಲಿಯೇ ಪ್ರತಿಬಿಂಬಿತವಾಗಿರುವುದನ್ನು ಕಾಣಬಹುದು. ಹೆಣ್ಣು ಇಂದು ಎಲ್ಲ ರಂಗದಲ್ಲಿಯೂ ಪ್ರಗತಿ ಸಾಧಿಸಿರುವುದು ಸಂತಸದ ಸಂಗತಿ. ಆದರೆ ಈ ಕಾಲದಲ್ಲಿಯೂ ಪುರುಷರು ಪ್ರೀತಿಯಿಂದ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದರು.
ಹೆಣ್ಣಿನ ಮುಗ್ದತೆ, ದಾಕ್ಷಿಣ್ಯ ಹಾಗೂ ಮಾಧ್ಯಮವೇ ಶೋಷಣೆಗೆ ಕಾರಣ. ಮಹಿಳೆಯೊಬ್ಬಳು ಮಧ್ಯರಾತ್ರಿಯಲ್ಲಿ ಏಕಾಂಗಿಯಾಗಿ ನಿರ್ಭೀತಿಯಿಂದ ಓಡಾಡುವುದೇ ಸ್ವಾತಂತ್ರ್ಯ ಎಂದಿದ್ದರು ಗಾಂಧೀಜಿ. ಆದರೆ ಇಂದು ರಾತ್ರಿ ಇರಲಿ, ಹಗಲಿನಲ್ಲಿಯೂ ಮಹಿಳೆಯರು ನಿರ್ಭಯವಾಗಿ ಓಡಾಡಲು ಭಯ ಪಡುವಂತಾಗಿದೆ. ಹಗಲು ಕತ್ತಲಾಗಿರುವುದೇ ನಿಜವಾದ ಪ್ರಳಯ. ಗಂಡು ಮತ್ತು ಹೆಣ್ಣನು ಸಮ ಮನೋಭಾವದಿಂದ ಮನುಷ್ಯರಾಗಿ ನೋಡುವ ಅಗತ್ಯವಿದೆ ಎಂದರು.
ಕಾಲೇಜು ಪ್ರಾಂಶುಪಾಲ ಪ್ರೊ. ಲೆಸ್ಲಿ ಮೊರಸ್ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ಮಹಿಳಾ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಬಿ.ಎಂ.ಮಂಗಳಾ ಇದ್ದರು. ಪ್ರಾಂಶುಪಾಲ ಪ್ರೊ. ಬಿ.ಎನ್.ಬಾಲಾಜಿ ಸ್ವಾಗತಿಸಿದರು. ನಂದಿನಿ ಸಿಂಗ್ಲ ನಿರೂಪಿಸಿದರು. ವಿಭಾಗದ ಮುಖ್ಯಸ್ಥೆ ಪ್ರೊ. ಮೇರಿ ಪುನೀದವಲ್ಲಿ ವಂದಿಸಿದರು.
ಗೋಷ್ಠಿ: ನಂತರ ನಡೆದ ಗೋಷ್ಠಿಯಲ್ಲಿ ಭಾರತೀಯ ಆಧುನಿಕ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ. ಟಿ.ಆರ್.ಎಸ್.ಶರ್ಮ, ಕುವೆಂಪು ವಿವಿ ಇಂಗ್ಲಿಷ್ ಪ್ರಾಧ್ಯಾಪಕ ಡಾ. ರಾಜೇಂದ್ರ ಚೆನ್ನಿ ಹಾಗೂ ಕರ್ನಾಟಕ ಪೊಲೀಸ್ ಅಕಾಡೆಮಿ ಉಪನಿರ್ದೇಶಕಿ ಹಾಗೂ ಲೇಖಕಿ ಡಾ. ಧರಣಿದೇವಿ ಮಾಲಗತ್ತಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

