ಬದುಕಿನ ಗೂಡು ಕಟ್ಟಿದ ನಂಜನಗೂಡು ಬಾಳೆ
ಕ.ಪ್ರ.ವಾರ್ತೆ ಮೈಸೂರು ಸೆ. 16
ಮೈಸೂರಿನ ಸ್ಥಳೀಯ ಸಾಂಪ್ರದಾಯಿಕ ಹಿನ್ನೆಲೆಯುಳ್ಳ ನಂಜನಗೂಡು ರಸಬಾಳೆ ವಿಶಿಷ್ಟ ಗುಣಗಳಿಗೆ ಪ್ರಖ್ಯಾತಿ ಪಡೆದಿದೆ. ಆದರೆ ಇತ್ತೀಚೆಗೆ ಹಲವು ಕಾರಣಗಳಿಂದ ಈ ಬೆಳೆಯನ್ನು ಬೆಳೆಯುವುದು ಕಡಿಮೆಯಾಗಿದೆ. ನಶಿಸಿ ಹೋಗುತ್ತಿರುವ ಈ ಬೆಳೆಯನ್ನು ರಕ್ಷಿಸಲು ತೋಟಗಾರಿಕೆ ಇಲಾಖೆಯು ಕ್ರಮ ಕೈಗೊಂಡಿದೆ. ಆದರೆ ರೈತರೊಬ್ಬರು ಮಾಜಿ ಸೈನಿಕರೊಬ್ಬರ ಸಹಕಾರದಿಂದ ಛಲದಿಂದ ಹೋರಾಡಿ, ಸಾವಯವ ಪದ್ಧತಿಯಲ್ಲಿ ನಂಜನಗೂಡು ರಸಬಾಳೆ ಬೆಳೆದು, 6 ಲಕ್ಷ ಲಾಭದ ನಿರೀಕ್ಷೆಯಲ್ಲಿದ್ದಾರೆ.
ಮೈಸೂರಿನ ಗೋಕುಲಂನ ಡಾಕ್ಟರ್ಸ್ ಕಾರ್ನರ್ ಬಳಿಯ ನಿವಾಸಿಯಾದ ಬೋರೇಗೌಡ ಹಾಗೂ ಮಾಜಿ ಸೈನಿಕ ಡಿ.ಯು. ಪ್ರಕಾಶ್ ಈ ಸಾಹಸಿಗಳು.
ಬೋರೇಗೌಡರು ಮೂಲತಃ ಶ್ರೀರಂಗಪಟ್ಟಣ ತಾಲೂಕು ನಗುವಿನಹಳ್ಳಿಯವರು. ಕೃಷಿಕ ಕುಟುಂಬದಿಂದ ಬಂದವರು. ಮೈಸೂರಿನಲ್ಲಿ ವ್ಯಾಪಾರದಲ್ಲಿ ನಿರತವಾಗಿದ್ದವರು. ಆದರೆ ಕೃಷಿಯ ಸೆಳೆತ. ಹೀಗಾಗಿ ಬಿಡುವಿನ ಸಮಯದಲ್ಲಿ ಊರಿಗೆ ಹೋಗಿ ಕಳೆದ 24 ವರ್ಷಗಳಿಂದಲೂ ವ್ಯವಸಾಯ ಮಾಡುತ್ತಿದ್ದಾರೆ. ನಗರದಲ್ಲಿ ನಡೆಯುವ ಕೃಷಿ, ಸಾವಯವ ಕೃಷಿ ಸಂಬಂಧಿ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಅವರಿಗೆ ನಂಜನಗೂಡು ರಸಬಾಳೆಯನ್ನು ದೇವರಸನಹಳ್ಳಿ, ಕೋಡಿನರಸೀಪುರ, ವೀರದೇವರಪುರ, ತಾಂಡವಪುರ, ಹಗಿನವಾಳು, ಅಮ್ಲಿ ಗ್ರಾಮಗಳಲ್ಲಿ ಬೆಳೆಯುತ್ತಿದ್ದು, ಈಗ ಪನಾಮ ಮತ್ತಿತರ ರೋಗಗಳಿಂದ ನಶಿಸುತ್ತಿರುವುದು ಗೊತ್ತಾಯಿತು. ಆದರೆ ಆ ಹಣ್ಣಿನ ರುಚಿ ಮತ್ತು ಸ್ವಾದಕ್ಕೆ, ಔಷಧಿಯ ಗುಣಗಳಿಗೆ ಮಾರು ಹೋಗಿದ್ದ ಅವರು ಹೇಗಾದರೂ ಮಾಡಿ, ಆ ತಳಿ ಉಳಿಸಬೇಕು. ಸಾಧ್ಯವಾದರೆ ತಾವೂ ಬೆಳೆಯಬೇಕು ಎಂದು ಮನಸ್ಸು ಮಾಡಿದರು. ನಂಜನಗೂಡು ಸುತ್ತಮುತ್ತ ಅವರಿಗೆ ಸಂಬಂಧಿಗಳು ಇದ್ದುದ್ದರಿಂದ ರಸಬಾಳೆ ಬೆಳೆಯುತ್ತಿದ್ದ ಗ್ರಾಮಗಳಲ್ಲಿ ಸಂಚರಿಸಿ, ಮಾಹಿತಿ ಕಲೆ ಹಾಕಿದರು. ಸೇಲಂ ಹಾಗೂ ಕೊಡಗಿನ ಬಾಳೆಹಣ್ಣನ್ನು ರಸಬಾಳೆಯ ಹೆಸರಿನಲ್ಲಿ ಮಾರಾಟ ಮಾಡಿ, ಗ್ರಾಹಕರಿಗೆ ಮೋಸ ಮಾಡುತ್ತಿರುವುದನ್ನು ಕಂಡುಕೊಂಡರು.
ಜಮೀನು ಖರೀದಿ: ನಾಲ್ಕು ವರ್ಷಗಳ ಹಿಂದೆ ನಂಜನಗೂಡು ತಾಲೂಕು ಗೊದ್ದನಪುರ ಬಳಿ ಎಂಟು ಎಕರೆ ಜಮೀನು ಖರೀದಿಸಿದರು. ಅಲ್ಲಿ ಸ್ನೇಹಿತ ಡಿ.ಯು. ಪ್ರಕಾಶ್ ಅವರ ಜೊತೆ ಸೇರಿ 4 ಎಕರೆಯಲ್ಲಿ ನಂಜನಗೂಡು ರಸಬಾಳೆ ಬೆಳೆಯಲು ನಿರ್ಧರಿಸಿದರು. ಒಂದು ಕೊಳವೆ ಬಾವಿ ಕೊರೆಸಿದರು. ಮಣ್ಣು, ನೀರಿನ ಪರೀಕ್ಷೆ ಮಾಡಿಸಿದರು. ಬಾಳೆ ಕಂದುಗಳಿಗಾಗಿ ಹಗಿನವಾಳು, ತಾಂಡವಪುರ ತೋಟಗಾರಿಕೆ ಕಾಲೇಜು, ಸುತ್ತೂರು ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರು ಕೃಷಿ ವಿವಿ, ತೋಟಗಾರಿಕೆ ಇಲಾಖೆ - ಹೀಗೆ ನಾನಾ ಕಡೆ ತಡಹಾಡಿದರು.
ಅಂತೂ 1000 ಗಿಡಗಳನ್ನು ಸಂಪಾದಿಸಿ, ನೆಟ್ಟರು. ಕೊಟ್ಟಿಗೆ ಗೊಬ್ಬರ, ಬೇವಿನಹಿಂಡಿ, ಎರೆಗೊಬ್ಬರ ಹಾಕಿದರು. ನಂತರ ಕೃಷಿ ವಿಜ್ಞಾನಿಗಳನ್ನು ಕಂಡು, ನಂಜನಗೂಡು ರಸಬಾಳೆಗೆ ತಗಲುವ ವೈರಸ್, ನೀಡಬೇಕಾದ ಲಘುಪೋಷಕಾಂಶಗಳ ಬಗ್ಗೆ ಸಮಾಲೋಚಿಸಿದರು. ಸೋಡಾಮಾಸ್, ಟೈಕೋಡರ್ಮ, ಪಿಎಸ್‌ವಿ ನೀಡಬೇಕಾದ ಅಗತ್ಯತೆ ಮನಗಂಡರು.
ನಂಜನಗೂಡು ರಸಬಾಳೆ ಗೊನೆಯಿಂದ ಉದುರುವುದು, ಹಣ್ಣು ಒಡೆಯುವುದು, ಪನಾಮ ರೋಗ ಹರುಡುವುದು ಏಕೆ ಎಂಬುದನ್ನು ತಿಳಿಯಲು ಹರಸಾಹಸ ಮಾಡಿದರು. ಭಾರತೀಯ ಸಂಶೋಧನಾ ಕೇಂದ್ರಕ್ಕೂ ಭೇಟಿ ನೀಡಿದರು. ಅವರು ತಿರುಚ್ಚಿಯಲ್ಲಿ ಕೇಂದ್ರ ಕಚೇರಿಯನ್ನು ಸಂಪರ್ಕಿಸುವಂತೆ ಮಾಡಿದರು.
ಅಧಿಕಾರಿಗಳ ನೆರವು: ಅವರಿಗೆ ತೋಟಗಾರಿಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ಡಾ. ಹಿತ್ತಲಮನಿ, ಜಿಕೆವಿಕೆಯ ಪ್ರಾಧ್ಯಾಪಕಿ ಡಾ. ಸಾವಿತ್ರಿ, ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ನಾರಾಯಣಗೌಡ ಮೊದಲಾದವರು ನೆರವಾದರು. ಬಿಸಿಲು ಕಡಿಮೆಯಾಗಿ, ಬಾಳೆ ಬೆಳೆಗೆ ಕ್ಯಾಲ್ಸಿಯಂ ಅಂಶ ಕಡಿಮೆಯಾಗಿದೆ ಹಣ್ಣು ಉದುರುತ್ತವೆ ಎಂದು ತಿಳಿದುಕೊಂಡರು. ಪೂರ್ಣ ಬಲಿಯುವತನಕ ಬಿಟ್ಟರೆ ಹಣ್ಣು ಒಡೆಯುತ್ತವೆ ಎಂಬುದನ್ನು ಅರಿತುಕೊಂಡರು. ಬೋರೇಗೌಡರು ನಡೆಸಿದ ಹೋರಾಟ ಈಗ ಫಲ ನೀಡಿವೆ. ಅವರ ಜಮೀನಿನಲ್ಲಿ ಬಾಳೆಗೊನೆಗಳು ಕೈಬೀಸಿ ಕರೆಯುತ್ತಿವೆ. ಪ್ರತಿಯೊಂದು ಗೊನೆಯಲ್ಲೂ 7 ಚಿಪ್ಪುಗಳಿದ್ದು, ಒಂದು ಡಜನ್ ಹಣ್ಣು 100- 120 ಗೆ ಮಾರಾಟವಾಗುತ್ತಿವೆ. ಅವರಿಗೆ 6-7 ಲಕ್ಷ ಆದಾಯ ಬರಲಿದ್ದು, 1.50 ಲಕ್ಷ ವೆಚ್ಚವಾಗಿದೆ.
ಆಫ್ರಿಕನ್ ದೇಶದ ಒಂದು ಹಣ್ಣನ್ನು ಹೊರತುಪಡಿಸಿದರೆ ಇಡೀ ವಿಶ್ವದಲ್ಲಿಯೇ ಅತ್ಯಂತ ರುಚಿ ಹಾಗೂ ಸ್ವಾದಿಷ್ಟವಾದುದು ನಂಜನಗೂಡು ರಸಬಾಳೆ. ಹೀಗೆ ವಿಶ್ವದಲ್ಲಿಯೇ 2ನೇ ಸ್ಥಾನದಲ್ಲಿರುವ ಈ ತಳಿಯನ್ನು ಉಳಿಸಿ, ಬೆಳೆಸಿದರೆ ರೈತರೂ ಬದುಕಿಕೊಳ್ಳುತ್ತಾರೆ. ದೇಶಕ್ಕೂ ಸಾಕಷ್ಟು ವಿದೇಶಿ ವಿನಿಮಯ ಬರುತ್ತದೆ ಎನ್ನುತ್ತಾರೆ ಬೋರೇಗೌಡ.
ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

