ಮೈಸೂರು ಜಿಪಂ ಕೈ ವಶ
ಮೈಸೂರು: ಮೈಸೂರು ಜಿಪಂನ ಎರಡನೆ ಅವಧಿಯ ಉಳಿಕೆ 9 ತಿಂಗಳಿಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ನ ಕೂರ್ಗಳ್ಳಿ ಎಂ.ಮಹದೇವು ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಎಸ್.ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ತಲಾ 23 ಮತ ಪಡೆದು ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ತವರಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದಿಂದ ದೂರ ಇರಿಸಬೇಕು ಎಂಬ ಜೆಡಿಎಸ್ ಮತ್ತು ಬಿಜೆಪಿ ತಂತ್ರಗಾರಿಕೆ ವಿಫಲವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ತಲಾ ಒಬ್ಬ ಸದಸ್ಯರ ಗೈರು, ಬಿಜೆಪಿಯ ಇಬ್ಬರು ಸದಸ್ಯರು ಮತ್ತು ಪಕ್ಷೇತರ ಸದಸ್ಯರೊಬ್ಬರ ಬೆಂಬಲದಿಂದ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯಕ್ಕೂ, ಉಪಾಧ್ಯಕ್ಷ ಸ್ಥಾನವು ಬಿಸಿಎ ಮಹಿಳೆಗೆ ಮೀಸಲಾಗಿತ್ತು. 46 ಸದಸ್ಯ ಬಲದ ಜಿಪಂನಲ್ಲಿ ಕಾಂಗ್ರೆಸ್ 21, ಜೆಡಿಎಸ್ 16, ಬಿಜೆಪಿ 8 ಮತ್ತು ಒಬ್ಬ ಪಕ್ಷೇತರ ಸದಸ್ಯ ಇದ್ದಾರೆ. ಆಯ್ಕೆ ಪ್ರಕ್ರಿಯೆ ವೇಳೆ ಕಾಂಗ್ರೆಸ್ನ ಶಕುಂತಲಾ ವೆಂಕಟಯ್ಯ ಮತ್ತು ಜೆಡಿಎಸ್ನ ಸಿ.ಟಿ. ರಾಜಣ್ಣ ಗೈರು ಹಾಜರಾಗಿದ್ದರು. ಇತ್ತ ಬಿಜೆಪಿಯ ಕೆಂಪಣ್ಣ, ಮಂಜುಳಾ ಪುಟ್ಟಸ್ವಾಮಿ ಮತ್ತು ಪಕ್ಷೇತರ ಸದಸ್ಯ ಎಲ್. ಮಾದಪ್ಪ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಬೆಂಬಲ 21ಕ್ಕೆ ಕುಸಿದು, ಕಾಂಗ್ರೆಸ್ ಬೆಂಬಲ 23ಕ್ಕೆ ಏರಿಕೆಯಾಯಿತು.ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ನ ಹೆಬ್ಬಾಳು ಕ್ಷೇತ್ರದ ನಳಿನಾಕ್ಷಿ ವೆಂಕಟೇಶ್ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಮೆಲ್ಲಹಳ್ಳಿ (ಬೀರಿಹುಂಡಿ) ಕ್ಷೇತ್ರದ ಗೀತಾ ಬಸವಣ್ಣ ನಾಮಪತ್ರ ಸಲ್ಲಿಸಿದ್ದರು. ಇವರಿಬ್ಬರೂ ತಲಾ 21 ಮತ ಪಡೆದರು.
ಬಾಗಿಲು ಹಾಕಲು ಒತ್ತಾಯ: ಜಿಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಬುಧವಾರ ಮಧ್ಯಾಹ್ನ 3ಕ್ಕೆ ಆರಂಭವಾಗುತ್ತಲೆ ಕಾಂಗ್ರೆಸ್ ಸದಸ್ಯರು ಆಯ್ಕೆ ಪ್ರಕ್ರಿಯೆ ನಡೆದ ಸಭಾಂಗಣದ ಬಾಗಿಲು ಹಾಕಬೇಕು. ಸದಸ್ಯರು ಸಭೆಗೆ ಹಾಜರಾಗಲು ಇದ್ದ ಕಾಲಾವಕಾಶ ಮುಗಿದಿದೆ. ಆದ್ದರಿಂದ ಬಾಗಿಲು ಹಾಕಬೇಕು ಎಂದು ಪಟ್ಟು ಹಿಡಿದರು. ಇದನ್ನು ವಿರೋಧಿಸಿದ ಜೆಡಿಎಸ್ನ ಸಿ.ಜೆ. ದ್ವಾರಕೀಶ್ ಬಾಗಿಲ ಬಳಿ ಪೊಲೀಸರಿದ್ದಾರೆ. ಆದ್ದರಿಂದ ಬಾಗಿಲು ಹಾಕುವ ಅಗತ್ಯವಿಲ್ಲ ಎಂದರು. ಬಳಿಕ ಚುನಾವಣಾಧಿಕಾರಿ ಹಾಗೂ ಪ್ರಾದೇಶಿಕ ಆಯುಕ್ತೆ ಎಂ.ವಿ. ಜಯಂತಿ ಅವರು ಮೊದಲು ಹಾಜರಾತಿ ಪಡೆಯುವುದಾಗಿ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

