ಮೈಸೂರು

ಗ್ರಾಮೀಣ ದಸರಾ ಹಬ್ಬದಂತೆ ಆಚರಿಸಿ

Published On :

ಕ.ಪ್ರ.ವಾರ್ತೆ ಹುಣಸೂರು ಸೆ. 20
ಹುಣಸೂರು ಪಟ್ಟಣದಲ್ಲಿ ಸೆ.30 ರಂದು ನಡೆಸಲು ಉದ್ದೇಶಿಸಿರುವ ಗ್ರಾಮೀಣ ದಸರಾ ಉತ್ಸವವನ್ನು ಮನೆ ಹಬ್ಬದಂತೆ ಆಚರಿಸಲು ಸಹಕಾರ ನೀಡುವಂತೆ ಗ್ರಾಮೀಣ ದಸರಾ ಸಮಿತಿಯ ಅಧ್ಯಕ್ಷ ಮಹದೇವ್ ಮನವಿ ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಚಾಮುಂಡಿ ದೇವಿಯ ಹೆಸರಿನಲ್ಲಿ ನಡೆಯುವ ಈ ಹಬ್ಬವನ್ನು ಈ ಬಾರಿ ಉತ್ತಮ ಮಳೆ, ಬೆಳೆಯಾಗಿರುವುದರಿಂದ ಹಾಗೂ ಎಲ್ಲ ಅಣೆಕಟ್ಟೆಗಳು ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಆಚರಿಸುವಂತೆ ಸೂಚಿಸಿದರು.
ಕೆಸರುಗದ್ದೆ ಓಟ ಸ್ಪರ್ಧೆ: ತಾಲೂಕಿನ ಹನಗೋಡು ಹೋಬಳಿಯ ತಟ್ಟೆಕೆರೆ ಗ್ರಾಪಂ ವ್ಯಾಪ್ತಿಯ ಹೊನ್ನೇನಹಳ್ಳಿ ಗ್ರಾಮದಲ್ಲಿ ಸೆ.25 ರಂದು ನಡೆಯಲಿದೆ. ಓಟದ ಸ್ಪರ್ಧೆಗಾಗಿ ಈಗಾಗಲೇ ಗದ್ದೆ ಗುರುತಿಸಲಾಗಿದ್ದು, ಓಟಕ್ಕೆ ಅನುಕೂಲವಾಗುವಂತೆ ಭೂಮಿ ಹದಗೊಳಿಸಲಾಗುತ್ತಿದೆ. ಆಸಕ್ತರು ಕೃಷಿ ಇಲಾಖೆ ನಿದೇರ್ಶಕರ ಬಳಿ ನೋಂದಾಯಿಸಿಕೊಳ್ಳುವಂತೆ ತಿಳಿಸಿದರು.
ಸೆ.27 ರಂದು ಪಟ್ಟಣದ ಪುರಸಭಾ ಮೈದಾನದಲ್ಲಿ ಪುರುಷ ಹಾಗೂ ಮಹಿಳಾ ಸ್ಪರ್ಧಿಗಳಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ. ಸ್ಪರ್ಧೆಗಳು ಬೆಳಗ್ಗೆ 10ಕ್ಕೆ ಪ್ರಾರಂಭವಾಗಲಿದ್ದು, ಪುರುಷರಿಗೆ ಗುಂಡು ಎತ್ತುವ ಸ್ಪರ್ಧೆ ಹಾಗೂ ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ ನಡೆಯಲಿದೆ. ಸೆ.28 ರಂದು ಪಟ್ಟಣದ ಪುರಸಭಾ ಮೈದಾನದಲ್ಲಿ ಬೆಳಗ್ಗೆ 10ಕ್ಕೆ ಕಂಸಾಳೆ, ಕೋಲಾಟ, ಡೊಳ್ಳುಕುಣಿತ, ಕೀಲುಕುದುರೆ, ವೀರಗಾಸೆ, ಗೀಗೀಪದ, ನಂದಿಕೋಲು, ತಮಟೆ ನಗಾರಿ, ವೀರಮಕ್ಕಳ ಕುಣಿತ, ಭಜನೆ ತಂಡ, ಸೋಬಾನೆ ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ ಎಂದರು.
ತಾಪಂ ಅಧ್ಯಕ್ಷೆ ದೇವಕಿ ತಿಮ್ಮನಾಯ್ಕ, ತಹಶೀಲ್ದಾರ್ ವೆಂಕಟಚಲ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರಾದ ಪಿ.ಆರ್. ರಾಚಪ್ಪ, ನಾರಾಯಣ ರೈ, ಜಯರಾಮ, ವಿ.ಎನ್. ದಾಸ್, ಶ್ರೀನಿವಾಸ್ ಇದ್ದರು.

ಕಡವೆ ಕೊಂಬು ಸಾಗಿಸುತ್ತಿದ್ದವರ ಬಂಧನ
ಹುಣಸೂರು: ಕಡವೆ ಹಾಗೂ ಜಿಂಕೆ ಕೊಂಬುಗಳನ್ನು ಸಾಗಿಸುತ್ತಿದ್ದ ಐದು ಮಂದಿ ಆರೋಪಿಗಳನ್ನು ಮಾಲು ಸಮೇತ ಶುಕ್ರವಾರ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಕಾಳ ಬೋಚನಹಳ್ಳಿಯ ಸಿದ್ದಯ್ಯನಕೆರೆ ಬಳಿ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಹನಗೋಡಿನ ಸಮೀಪದ ನೇರಳಕುಪ್ಪೆ ಬಿ ಹಾಡಿಯ ಮಂಜು, ಶಿವಪ್ಪ, ನಾಗರಾಜ್, ಸಣ್ಣಪ್ಪ ಹಾಗೂ ವೀರಾಜಪೇಟೆ ತಾಲೂಕಿನ ಚೆನ್ನಂಗಿ ಹಾಡಿಯ ಸುಂದರ್ ಬಂಧಿತ ಆರೋಪಿಗಳು.
ಮತ್ತಿಗೋಡು ವಲಯದ ಕಚುವಿನಹಳ್ಳಿ ಶಾಖೆಯ ವನಪಾಲಕ ರಶೀದ್‌ರಿಗೆ ಬಂದ ಖಚಿತ ವರ್ತಮಾನದ ಮೇರೆಗೆ ಅರಣ್ಯ ಸಿಬ್ಬಂದಿಯೊಂದಿಗೆ ಕಾಯುತ್ತಿದ್ದ ವೇಳೆ ಶುಕ್ರವಾರ ಬೆಳಗಿನ ಜಾವ ಅರಣ್ಯದಂಚಿನ ಸಿದ್ದಯ್ಯನಕೆರೆ ಬಳಿ ಚೀಲವೊಂದರಲ್ಲಿ ನಾಲ್ಕು ಕಡವೆ, ನಾಲ್ಕು ಜಿಂಕೆ ಹಾಗೂ ಒಂದು ತಲೆ ಬುರುಡೆ, ಕೊಂಬು ಸಮೇತವಿರುವ ಒಟ್ಟು 9 ಕೊಂಬುಗಳನ್ನು ಹೊತ್ತು ತರಲಾಗುತ್ತಿತ್ತು. ಇದನ್ನು ಕಂಡ ಸಿಬ್ಬಂದಿ ಅವರನ್ನು ಸುತ್ತುವರಿದು ಆರೋಪಿಗಳನ್ನು ಮಾಲು ಸಮೇತ ಬಂಧಿಸಿ ವಿಚಾರಣೆ ನಡೆಸಿದಾಗ ತಾವು ಮಾರಾಟ ಮಾಡುತ್ತಿದ್ದುದನ್ನು ಆರೋಪಿಗಳು ಒಪ್ಪಿಕೊಂಡರು. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ನಾಗರಹೊಳೆ ಅರಣ್ಯ ನಿರ್ದೇಶಕ ಗೋಕುಲ್ ಪತ್ರಿಕೆಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.