ಮೈಸೂರು

ಎನ್ಟಿಎಂಎಸ್ ಮುಚ್ಚುವುದು ಮಕ್ಕಳ ಹಕ್ಕುಗಳ ಉಲ್ಲಂಘನೆ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 22
ನಗರದ ನಾರಾಯಣಶಾಸ್ತ್ರಿ ರಸ್ತೆಯ ಎನ್ಟಿಎಂಎಸ್ ಶಾಲೆಯನ್ನು ಮುಚ್ಚುವುದು ಅಲ್ಲಿನ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಬಾಲನ್ಯಾಯ ಮಂಡಳಿ ಮಧ್ಯಂತರ ವರದಿಯಲ್ಲಿ ತಿಳಿಸಿದೆ.
ಶಿಕ್ಷಣ ಮಕ್ಕಳ ಹಕ್ಕು. ಅವರ ಹಕ್ಕು ಮತ್ತು  ಹಿತ ಕಾಪಾಡುವುದು 2000ನೇ ಇಸವಿಯ ಬಾಲನ್ಯಾಯ ಕಾಯ್ದೆಯ ಉದ್ದೇಶವಾಗಿದೆ. ಆದ್ದರಿಂದ ಎನ್ಟಿಎಂಎಸ್ ಶಾಲೆಯನ್ನು ಮುಚ್ಚುವ ನಿರ್ಧಾರವನ್ನು ಸರ್ಕಾರ ತಡೆ ಹಿಡಿಯಬೇಕು ಎಂದು ಮಂಡಳಿಯ ಸದಸ್ಯ ಪಿ.ಪಿ. ಬಾಬುರಾಜ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂರಕ್ಷಣಾಧಿಕಾರಿ ಆರ್. ಸೋಮಲತಾ ತಿಳಿಸಿದ್ದಾರೆ.
ಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಅತಂತ್ರ ಸ್ಥಿತಿಯಲ್ಲಿಟ್ಟು ಆತಂಕ ಹುಟ್ಟಿಸುವುದು ಅವರ ಮೇಲೆ ನಡೆಸುವ ಕ್ರೌರ್ಯವಾಗುತ್ತದೆ. ಇದೇ ಶಾಲೆಯಲ್ಲಿ ಮುಂದುವರಿಸಬೇಕೆಂದು ಅಲ್ಲಿನ ಮಕ್ಕಳು ಬಯಸಿರುವ ಹಿನ್ನೆಲೆಯಲ್ಲಿ ಶಾಲೆಯನ್ನು ಬಲಪಡಿಸುವಲ್ಲಿ ಸರ್ಕಾರ ಮತ್ತು ಸಮಾಜ ಹಾಗೂ ಸಂಘಸಂಸ್ಥೆಗಳು ಜವಾಬ್ದಾರಿ ವಹಿಸಿಬೇಕು. ಇಂತಹ ಹೆಜ್ಜೆ ಇಡಲು ಸಂಬಂಧಿಸಿದ ಇಲಾಖೆಗೆ ಸೂಚನೆ ನೀಡಬೇಕು ಎಂದಿದ್ದಾರೆ.
132 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯನ್ನು ಉಳಿಸಿ ಹೊಸ ಪೀಳಿಗೆಗೆ ಪ್ರೋತ್ಸಾಹ ನೀಡಬೇಕು. ಈ ಶಾಲೆಯಿಂದ ಅದಾಜು 300 ಮೀಟರ್ ದೂರದಲ್ಲಿರುವ ದೇವರಾಜ ಸರ್ಕಾರಿ ಶಾಲೆಯಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವುದರಿಂದ ಅಲ್ಲಿಗೆ ವರ್ಗಾಯಿಸುವುದು ಅಥವಾ ವಿಲೀನಗೊಳಿಸುವುದು ಮಕ್ಕಳ ಮೇಲಿನ ಕ್ರೌರ್ಯವಾಗಿ ಪರಿಣಮಿಸಲಿದೆ. ಈ ಕ್ರಮಕ್ಕೆ ತಡೆ ಹಿಡಿಯುವುದು ಉತ್ತಮ ಕಾರ್ಯ ಎಂದು ತಿಳಿಸಿದ್ದಾರೆ.
ಶಾಲೆಯ ಪ್ರಗತಿಗಾಗಿ ಶಿಕ್ಷಕರನ್ನು ನೇಮಿಸಬೇಕು. ಸ್ಥಳೀಯ ಆಡಳಿತ ಜಿಲ್ಲಾ ಪಂಚಾಯತ್ ಮಂಡಿಸಿದ ನಿರ್ಣಯಕ್ಕೆ ಸರ್ಕಾರ ಮಾನ್ಯತೆ ನೀಡಬೇಕು. ಇಂತಹ ನಿರ್ಣಯ ಕಡೆಗಣಿಸಿ ರಾಮಕೃಷ್ಣ ಮಠಕ್ಕೆ ಶಾಲೆ ಜಾಗವನ್ನು ಹಸ್ತಾಂತರಿಸುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಎಸ್ಎಫ್ಐ ಆಗ್ರಹ: ವಿವೇಕಾನಂದ ಸ್ಫೂರ್ತಿ ಕೇಂದ್ರ ತೆರೆಯಲು ಎನ್ಟಿಎಂಎಸ್ ಶಾಲೆಯ ಜಾಗ ಹಸ್ತಾಂತರಿಸುವ ಸರ್ಕಾರದ ನಿರ್ಧಾರ ಕೈಬಿಡಬೇಕು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ಆಗ್ರಹಿಸಿದೆ.
ಅನೇಕ ಸಂಘಟನೆಗಳು ಹೋರಾಟ ಮಾಡುತ್ತಾ ಬಂದಿದ್ದರೂ, ಶಾಲೆ ಮುಚ್ಚದಂತೆ ಜಿಲ್ಲಾ ಪಂಚಾಯತ್ ನಿರ್ಣಯ ಕೈಗೊಂಡಿದ್ದರೂ, ಈ ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕಾಂಗ್ರೆಸ್ ಸರ್ಕಾರ ಮಹತ್ವ ನೀಡದೆ ಜಾಣ ಕಿವುಡರಂತೆ ವರ್ತಿಸುತ್ತಿದೆ ಎಂದು ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಹೇಶ್ಕುಮಾರ್ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.