ಶಾಂತಿ ಕಾಪಾಡುವಂತೆ ಸಚಿವರ ಮನವಿ
ಕ.ಪ್ರ.ವಾರ್ತೆ ನಂಜನಗೂಡು ಸೆ. 22
ಶಾಂತಿ ಕಾಪಾಡುವಂತೆ ನಂಜನಗೂಡು ಪಟ್ಟಣ ಜನತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಮನವಿ ಮಾಡಿದ್ದಾರೆ.
ಗಣಪತಿ ವಿಸರ್ಜನೆ ಮೆರವಣಿಗೆಗೆ ಒಂದು ಕೋಮಿನವರು ಅಡ್ಡಿ ಉಂಟುಮಾಡಿದರೆಂಬ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳಿಂದ ಪಟ್ಟಣದಲ್ಲಿ ಕಾಣಿಸಿಕೊಂಡಿರುವ ಬಿಗುವಿನ ವಾತಾವರಣದ ಹಿನ್ನೆಲೆಯಲ್ಲಿ ಭಾನುವಾರ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದರು.
ಶಾಂತಿ, ಸಹಬಾಳ್ವೆಗೆ ಹೆಸರಾದ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಇಂತಹ ಘಟನೆಯನ್ನು ನನ್ನ ಸುದೀರ್ಘ ರಾಜಕಾರಣದಲ್ಲಿ ಕಂಡಿಲ್ಲ. ಈಗ ನಡೆದಿದೆ. ಎರಡೂ ಕೋಮಿನವರು ಯಾವುದೇ ಅಹಿತಕರ ಬೆಳವಣಿಗೆ ಪುನರಾವರ್ತನೆ ಆಗದಂತೆ ಶಾಂತಿ ಕಾಪಾಡಿಕೊಂಡು ಹೋಗುವಂತೆ ಮನವಿ ಮಾಡಿದರು.
ಘಟನೆ ಕುರಿತಂತೆ ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡು ಹೆಚ್ಚಿನ ಅನಾಹುತವಾಗದಂತೆ ತಡೆದಿದ್ದಾರೆ. ಕೆಲವು ಕಿಡಿಗೇಡಿಗಳು ಇಂತಹ ಸಣ್ಣ ಘಟನೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ಅಮಾಯಕರನ್ನು ಪ್ರಚೋದಿಸಿ ಅಶಾಂತಿ ವಾತಾವರಣ ಉಂಟುಮಾಡುವ ಪ್ರಯತ್ನಕ್ಕೆ ಜನತೆ ಕಿವಿಗೊಡಬಾರದು. ಸೆ.25 ರಂದು ಪಟ್ಟಣದಲ್ಲಿ ನಡೆಯಲಿರುವ ಗ್ರಾಮೀಣ ದಸರಾ ಸಮಯದಲ್ಲಿ ಎಲ್ಲರೂ ಬೆರೆತು ಅದ್ಧೂರಿ ಆಚರಣೆಗೆ ಸಹಕರಿಸಬೇಕೆಂದು ಸಚಿವರು ಮನವಿಮಾಡಿದರು.
ಬಹು ದಿನಗಳಿಂದ ಕಗ್ಗಂಟಾಗಿಯೇ ಉಳಿದಿದ್ದ ಈದ್ಗಾ ಮೈದಾನ ರಸ್ತೆ ವಿವಾದವನ್ನು ಮೊನ್ನೆಯಷ್ಟೇ ಬಗೆಹರಿಸಲಾಗಿದೆ. ಕೈಗೊಂಡಿರುವ ತೀರ್ಮಾನದಲ್ಲಿ ಯಾರಿಗಾದರೂ ಆಸಮಾಧಾನವಿದ್ದಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳೋಣ. ಆದರೆ ಅಲ್ಲಿನ ವಿವಾದವನ್ನು ಗಣಪತಿ ವಿಸರ್ಜನೆ ಸಂಬಂಧ ಗಲಾಟೆಗೆ ತಳುಕು ಹಾಕುವುದು ಬೇಡ ಎಂದು ಸಚಿವರು ಉಭಯ ಕೋಮುಗಳ ಪ್ರಮುಖರಿಗೆ ಸಲಹೆ ನೀಡಿದರು.
ಮೈಸೂರು ಜಿಲ್ಲಾ ಎಸ್ಪಿ ಅಭಿನವ್ ಖರೆ, ಎಎಸ್ಪಿ ಆರ್.ಬಿ. ಮೋಹನ್ ರೆಡ್ದಿ, ತಹಸೀಲ್ದಾರ್ ಅರುಳ್ಕುಮಾರ್, ಸಿಪಿಐ ಜಿ.ಎಸ್. ರಘು, ಪಿಎಸ್ಐ ರವಿಶಂಕರ್ ಇದ್ದರು.
ಬಂದ್ ಭಾಗಶಃ ಯಶಸ್ವಿ: ನೀಲಕಂಠನಗರದ ಬಡಾವಣೆ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ವಿವಾದ ಉಂಟಾದ ಹಿನ್ನೆಲೆಯಲ್ಲಿ ಕೆಲವು ಹಿಂದೂಪರ ಸಂಘಟನೆಗಳು ಭಾನುವಾರ ಕರೆ ನೀಡಿದ್ದ ನಂಜನಗೂಡು ಬಂದ್ ಭಾಗಶಃ ಯಶಸ್ವಿಯಾಯಿತು. ಪಟ್ಟಣದ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟು ವ್ಯಾಪಾರ ವ್ಯವಹಾರ ಸ್ಥಗಿತಗೊಂಡಿತ್ತು. ಅಂಗಡಿ ಮುಂಗಟ್ಟು ಮಾಲೀಕರು ಸ್ವಯಂ ಪ್ರೇರಿತರಾಗಿ ಬಂದ್ ಬೆಂಬಲಿಸಿದರು. ಸಂಘಟಕರಿಂದ ಯಾವುದೇ ಒತ್ತಾಯ ಕಂಡುಬರಲಿಲ್ಲ. ಕೆಎಸ್ಅರ್ಟಿಸಿ ಬಸ್ಸು, ರೈಲು ಸಂಚಾರ ಎಂದಿನಂತೆ ಸಹಜವಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

