ಮೈಸೂರು

ಒಕ್ಕಲಿಗ ಸಮಾಜಕ್ಕೆ ನಾಯಕತ್ವ ಕೊರತೆ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 29
ರಾಜ್ಯದಲ್ಲಿಯೇ ಅತಿ ಎರಡನೇ ಸಮಾಜವಾದ ಒಕ್ಕಲಿಗ ಸಮಾಜಕ್ಕೆ ನಾಯಕತ್ವ ಕೊರತೆ ಕಾಡುತ್ತಿದೆ. ಈ ಸಮಾಜದಿಂದ ಬೆಳೆದವರು ಚದುರಿರುವುದರಿಂದ ಈ ಕೊರತೆ ಎದುರಾಗಿದೆ ಎಂದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅಭಿಪ್ರಾಯಪಟ್ಟರು.
ಭಾನುವಾರ ನಗರದ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಸ್ವಾಭಿಮಾನಿ ಒಕ್ಕಲಿಗರ ಹಿತರಕ್ಷಣಾ ಪಡೆ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ನಮ್ಮ ಸಮಾಜ ಸಂಕಷ್ಟಕ್ಕೆ ಸಿಲುಕಿದೆ. ರಾಜಕೀಯ ವ್ಯವಸ್ಥೆಯಲ್ಲಿ ನಮ್ಮನ್ನು ಕಡೆಗಣಿಸಲಾಗುತ್ತಿದೆ. ಈಗ ಅಸ್ತಿತ್ವಕ್ಕೆ ಬಂದಿರುವ ರಕ್ಷಣಾ ಪಡೆಯ ಮೇಲೆ ಸಮಾಜದ ಹಿತ ಕಾಪಾಡುವ ಬಹುದೊಡ್ಡ ಜವಾಬ್ದಾರಿ ಇದೆ ಎಂದರು.
ಒಕ್ಕಲುತನ ಮಾಡಿಕೊಂಡು ಬಂದಿರುವ ನಮ್ಮ ಸಮಾಜದಿಂದ ನಾವು ಅನೇಕ ಉಪಯೋಗಗಳನ್ನು ಪಡೆದಿದ್ದೇವೆ. ಓದುವಾಗ ಉಚಿತವಾಗಿ ವಿದ್ಯಾರ್ಥಿನಿಲಯ ಸ್ಥಾಪಿಸಿಕೊಟ್ಟಿದ್ದು ನಮ್ಮ ಸಮಾಜ ಎಂದು ತಿಳಿಸಿದರು.
ಸ್ವಾಭಿಮಾನಿ ಒಕ್ಕಲಿಗರ ಹಿತರಕ್ಷಣಾ ಪಡೆ ಲಾಂಛನ ಬಿಡುಗಡೆ ಮಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಮಾತನಾಡಿ, ಒಕ್ಕಲುತನ ಮಾಡಿಕೊಂಡು ಬಂದಿರುವ ಒಕ್ಕಲಿಗ ಸಮಾಜದಲ್ಲಿ ಹಲವು ನಾಯಕರು ಜನ್ಮ ತಳೆದಿದ್ದಾರೆ. ಬೆಂಗಳೂರು ನಿರ್ಮಾತೃ ಕೆಂಪೇಗೌಡ, ರಾಷ್ಟ್ರಕವಿ ಕುವೆಂಪು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಇನ್ನು ಮುಂತಾದವರು. ಇವರೆಲ್ಲ ಹೇಳಿಕೊಟ್ಟಿದ್ದು ಪ್ರೀತಿಸುವುದು ಹಾಗೂ ಸಮಾಜವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದನ್ನು ಎಂದರು.
ಸ್ವಾಭಿಮಾನಕ್ಕೆ ಧಕ್ಕೆ ಬೇಡ: ಇಂತಹ ಸಮಾಜದಲ್ಲಿ ಹುಟ್ಟಿದ ನಾವು ಸ್ವಾಭಿಮಾನಿಗಳಾಗಿರಬೇಕು. ನಾವು ಯಾರ ಸ್ವಾಭಿಮಾನಕ್ಕೂ ಧಕ್ಕೆ ತರಬಾರದು. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರಬಾರದು. ಒಕ್ಕಲಿಗರು ಯಾರನ್ನು ದ್ವೇಷಿಸಲಿಲ್ಲ. ಆದರೆ, ನಮ್ಮನ್ನು ದ್ವೇಷಿಸುವ ಬೆಳವಣಿಗೆ ಇತ್ತೀಚೆಗೆ ನಡೆಯುತ್ತಿದೆ. ರಾಜಕೀಯ ದ್ವೇಷದಿಂದ ಮೈಸೂರಿನಿಂದ ಕೆಟ್ಟ ಧ್ವನಿ ಆಗಾಗ ಕೇಳುತ್ತದೆ. ಆ ಟೀಕೆ ಟಿಪ್ಪಣಿ ನಿಲ್ಲಿಸಬೇಕು. ಮುಂದುವರಿಸಿದರೆ ಕಳೆದ ಸರ್ಕಾರದ ಮುಖ್ಯಮಂತ್ರಿಗಳಿಗಾದ ಗತಿಯೇ ಆಗುತ್ತದೆ ಎಂದು ಎಚ್ಚರಿಸಿದರು.
ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಸಾ.ರಾ. ಮಹೇಶ್, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ, ರಕ್ಷಣಾ ಪಡೆಯ ಗೌರವಾಧ್ಯಕ್ಷ ಪ್ರೊ.ಕೆ.ಆರ್. ರಂಗಯ್ಯ, ಅಧ್ಯಕ್ಷ ಸಿ. ಕೃಷ್ಣಪ್ಪ, ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಕೆ. ಮಹದೇವ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.