ಹಿಂದುಳಿದವರಿಗೆ ವಿದ್ಯೆಯೇ ಅಸ್ತ್ರ
ಕ.ಪ್ರ.ವಾರ್ತೆ , ಮೈಸೂರು , ಸೆ. 29
ಯಾವುದೇ ಹಿಂದುಳಿದ ಸಮುದಾಯದ ಪ್ರಗತಿಗೆ ವಿದ್ಯೆಯೇ ಅಸ್ತ್ರ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಎಂ.ಕೆ. ಸೋಮಶೇಖರ್ ಹೇಳಿದರು.
ಮೈಸೂರು ಜಿಲ್ಲಾ ಉಪ್ಪಾರ ನೌಕರರ ಹಾಗೂ ವೃತ್ತಿಪರರ ಸಂಘವು ಜಗನ್ಮೋಹನ ಅರಮನೆಯಲ್ಲಿ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ವಿತರಣೆ, ಭಗೀರಥ ಭಾವಚಿತ್ರ ಅನಾವರಣ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನಕ್ಕಿಂತ ಮಿಗಿಲಾದುದು ಮತ್ತೊಂದಿಲ್ಲ. ಈ ಸಂಬಂಧ ಮುಂದುವರಿದ ಸಮಾಜಗಳು ನಾಗಲೋಟದಲ್ಲಿ ಸಾಗುತ್ತಿದ್ದು, ಅವುಗಳ ಸ್ಪರ್ಧೆ ಎದುರಿಸಲು ಹಿಂದುಳಿದ ವರ್ಗಗಳಿಗೆ ಶಿಕ್ಷಣ ಅನಿವಾರ್ಯ. ಸಮಾಜದ ಬದಲಾವಣೆಗೆ ಹಾಗೂ ಬದುಕಿನ ಪ್ರಗತಿಗೆ ವಿದ್ಯೆಯಿಂದ ಮಾತ್ರ ಸಾಧ್ಯ ಎಂದರು.
ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮಾಜದವರು ಉನ್ನತ ಶಿಕ್ಷಣ ಪಡೆಯುತ್ತಿರುವ ಸಂಖ್ಯೆ ತುಂಬಾ ಕಡಿಮೆ. ಈ ಹಿನ್ನೆಲೆಯಲ್ಲಿ ತಂದೆ, ತಾಯಿಗಳು ತಮ್ಮ ಮಕ್ಕಳಿಗೆ ಕನಿಷ್ಠ ಪದವಿಯನ್ನು ಕೊಡಿಸುವ ಕೆಲಸ ಮಾಡಬೇಕು. ಇದರ ಜತೆಗೆ ಕಂಪ್ಯೂಟರ್, ಐಟಿಐ ಹಾಗೂ ಡಿಪ್ಲೊಮಾ ತರಬೇತಿ ಕೊಡಿಸಿದಾಗ ಉದ್ಯೋಗ ಹೊಂದಲು ಸಹಾಯಕವಾಗಲಿದೆ ಎಂದು ತಿಳಿಸಿದರು.
ರಾಜಕೀಯ ಮೀಸಲಾತಿ: ಅಂದು ಸಿದ್ದರಾಮಯ್ಯ ಅವರು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಿಂದುಳಿದವರಿಗೆ ರಾಜಕೀಯ ಮೀಸಲಾತಿ ಕಲ್ಪಿಸಿದ ಕಾರಣ ಇಂದು ಸಣ್ಣ ಸಮಾಜದರು ಜನಪ್ರತಿನಿಧಿಯಾಗಲು ಅವಕಾಶ ದೊರಕಿದೆ. ಮೀಸಲಾತಿ ಅಸ್ತ್ರದಿಂದ ರಾಜಕೀಯ ಸ್ಥಾನಮಾನ ಪಡೆಯಲು ಸಾಧ್ಯ. ಸರ್ವರಿಗೂ ಸಂಪನ್ಮೂಲ ಸಮಾನ ಹಂಚಿಕೆಯಾಗಬೇಕಾದರೆ ಸಂಘಟಿತ ಹೋರಾಟ ಅವಶ್ಯಕ ಎಂದರು.
ಉಪ್ಪಾರ ಜನಾಂಗದ ಸ್ಥಿತಿಗತಿ ಎಂಬ ವಿಷಯ ಕುರಿತು ಪ್ರತಿಕೋದ್ಯಮಿ ರಾಜಶೇಖರ ಕೋಟಿ ಉಪನ್ಯಾಸ ನೀಡಿದರು. ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಅವರು ಭಗೀರಥ ಭಾವಚಿತ್ರ ಅನಾವರಣಗೊಳಿಸಿದರು. ಅಯ್ಯನ ಸರಗೂರು ಮಠದ ಚನ್ನಿಸ್ವಾಮೀಜಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ನಿವೃತ್ತ ನೌಕರರಾದ ನಾರಯಣಶೆಟ್ಟಿ, ಟಿ.ಎಂ. ನಾಗಶೆಟ್ಟಿ, ಎಲ್. ಮಲ್ಲಶೆಟ್ಟಿ ಹಾಗೂ ಹನುಮಂತಪ್ಪ ಅವರನ್ನು ಸನ್ಮಾನಿಸಲಾಯಿತು. ಅಲ್ಲದೆ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿರುವ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.
ಸಂಘದ ಕಾರ್ಯಾಧ್ಯಕ್ಷ ವಿಷಕಂಠಯ್ಯ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ಚಾಮರಾಜನಗರ ಜಿಪಂ ಮಾಜಿ ಸದ್ಯಸ್ಯ ಸಿದ್ದರಾಜು, ಶಿವಕುಮಾರ್, ವೈ.ಜೆ. ಯೋಗೇಶ್, ನಗರ ಪಾಲಿಕೆ ಮಾಜಿ ಮೇಯರಗಳಾದ ಅನಂತು, ನಾರಾಯಣ, ಮಾಜಿ ಸದಸ್ಯರಾದ ಎಂ. ಶಿವಣ್ಣ, ಆಶಾ ಲಕ್ಷ್ಮೀನಾರಾಯಣ ಇದ್ದರು. ಶಿವಕುಮಾರ್ ಸ್ವಾಗತಿಸಿದರು, ಗೋವಿಂದರಾಜು ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

