ಬದುಕಿನ ಪರಿವರ್ತನೆಗೆ ಜೀವನ ಚರಿತ್ರೆ ಸಹಕಾರಿ
ಕ.ಪ್ರ.ವಾರ್ತೆ , ಮೈಸೂರು , ಸೆ. 29
ಮಹನೀಯರ ಜೀವನ ಚರಿತ್ರೆಗಳು ಬದುಕಿನ ಪರಿವರ್ತನೆಗೆ ಸಹಕಾರಿ ಎಂದು ಹಿರಿಯ ಸಾಹಿತಿ ಪ್ರೊ. ದೇಜಗೌ ಹೇಳಿದರು.
ಕರ್ನಾಟಕ ವಿಚಾರ ವೇದಿಕೆಯು ಹಾರ್ಡ್ವಿಕ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ವೇದಿಕೆ ಉದ್ಘಾಟನೆ ಹಾಗೂ ಕೃತಿಗಳ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನ ಚರಿತ್ರೆ ರಚಿಸುವುದು ಕಥೆ ಕಾದಂಬರಿಯಂತೆ ಸುಲಭದ ಕೆಲಸವಲ್ಲ. ಅದೊಂದು ಸೃಜನಾತ್ಮಕ ಸಾಹಿತ್ಯ ಪ್ರಕಾರವಾಗಿದ್ದು ಅಪಾರ ಮೌಲ್ಯವನ್ನು ಹೊಂದಿದೆ.
ಆದರೆ ಸಾಹಿತ್ಯ ಅಕಾಡೆಮಿ ಇದನ್ನು ಸಾಹಿತ್ಯ ಪ್ರಕಾರವೆಂದು ಪರಿಗಣಿಸದಿರುವುದು ಸರಿಯಲ್ಲ. ಗಾಂಧೀಜಿ, ವಿವೇಕಾನಂದ, ಅಬ್ರಾಹ್ಮಂ ಲಿಂಕನ್ ಮುಂತಾದ ಮಹನೀಯರ ಜೀವನ ಚರಿತ್ರೆ ಓದಿದಾಗ ಬದುಕು ಪರಿವರ್ತನೆಯಾಗಲಿದೆ ಎಂದರು.
ಅನೇಕ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ಸೇವೆ ಸಲ್ಲಿಸಿದ್ದಾರೆ. ಅವರಲ್ಲಿ ಕೆಲವರು ಲೂಟಿ ಹೊಡೆದವರು ಇದ್ದಾರೆ. ಆದರೆ ಡಾ. ರಾಮಾನುಜಂ ಅವರು ಅಪರೂಪದ ಅಧಿಕಾರಿಯಾಗಿ ದೇಶ ಕಟ್ಟಿದವರು. ಪೊಲೀಸ್ ಇಲಾಖೆಯಲ್ಲಿ ಮಹಾನಿರ್ದೇಶಕರಾಗಿದ್ದು ಸಾರಸ್ವತ ಲೋಕಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರ ಕುರಿತು ಪ್ರಬಂಧ ಕೃತಿ ಹೊರತಂದಿರುವುದು ಶ್ಲಾಘನೀಯ ಎಂದರು.
ನಾಡಿನಲ್ಲಿ ವೇದಿಕೆಗಳಿಗೆ ಕೊರತೆಯಿಲ್ಲ. ಇಂತಹ ಸಂಘಟನೆಗಳು ಸಮಾಜ ಹಾಗೂ ದೇಶದ ಸೇವೆಗಾಗಿ ಅವಶ್ಯಕ. ಆದರೆ ಕೇವಲ ಸ್ಥಾನಕ್ಕಾಗಿ ಹಾಗೂ ಪ್ರಚಾರಕ್ಕಾಗಿ ಸೀಮಿತವಾಗಬಾರದು. ಸದಾ ಕ್ರಿಯಾಶೀಲವಾಗಿ ನಾಡು ನುಡಿಗೆ ಸೇವೆ ಸಲ್ಲಿಸುವಂತಾಗಲಿ ಎಂದು ಅವರು ಆಶಿಸಿದರು.
ಡಾ. ಸಿಪಿಕೆ ಅವರ ಗಂಗಾವತಿಯ ಉತ್ತುಂಗದಲ್ಲಿ, ಡಾ. ಶ್ರೀನಿವಾಸ ಸಿದ್ದಲಿಂಗಪುರ ಅವರ ಡಾ. ಪಿ.ಎಸ್. ರಾಮಾನುಜಂ ಜೀವನ ಮತ್ತು ಸಾಹಿತ್ಯ ಹಾಗೂ ಬೆಸೂರು ಮೋಹನ್ ಪಾಳೇಗಾರ್ ಅವರ ಸ್ತನೀಯ ಪ್ರಭೇದಗಳು ಎಂಬ ಮೂರು ಕೃತಿಗಳನ್ನು ಡಾ. ಮಳಲಿ ವಸಂತಕುಮಾರ್ ಲೋಕಾರ್ಪಣೆಗೊಳಿಸಿದರು.
ಕವಿಗಳಾದ ಡಾ. ಸಿಪಿಕೆ, ಡಾ. ಪಿ.ಎಸ್. ರಾಮಾನುಜಂ, ಡಾ. ಶ್ರೀನಿವಾಸ ಸಿದ್ದಲಿಂಗಪುರ ಹಾಗೂ ಬೆಸೂರು ಮೋಹನ್ ಪಾಳೇಗಾರ್ ಅವರನ್ನು ಸನ್ಮಾನಿಸಲಾಯಿತು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ನೀಲಗಿರಿ ತಳವಾರ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಕೃತಿ ಪೋಷಕ ಕೆ. ರಘುರಾಂ, ವಿದ್ವಾಂಸ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಸಾಹಿತಿ ಪ್ರೊ. ಮಲೆಯೂರು ಗುರುಸ್ವಾಮಿ, ಸಿಎಸ್‌ಐಕೆಎಸ್‌ಡಿ ಉಪಾಧ್ಯಕ್ಷ ರೆವರೆಂಡ್ ಕೆ.ಪಿ. ದೇವಕುಮಾರ್, ಹಾರ್ಡ್ವಿಕ್ ಪದವಿಪೂರ್ವ ಕಾಲೇಜಿನ ಸಂಚಾಲಕ ಫ್ರಾಂಕ್ಲಿನ್ ಕ್ರಿಸ್ಟೋಫರ್ ಮುಖ್ಯ ಅತಿಥಿಗಳಾಗಿದ್ದರು.
ಕಾಲೇಜಿನ ಪ್ರಾಂಶುಪಾಲ ಹಾಗೂ ವೇದಿಕೆ ಅಧ್ಯಕ್ಷ ಹಿರಿಮರಳಿ ಧರ್ಮರಾಜು ಸ್ವಾಗತಿಸಿದರು. ಲೇಖಕಿ ಡಾ. ಅನುಸೂಯ ಕೆಂಪನಹಳ್ಳಿ ನಿರೂಪಿಸಿದರು. ಬೆಸೂರು ಮೋಹನ್ ಪಾಳೇಗಾರ್ ವಂದಿಸಿದರು.
ಕನ್ನಡದಲ್ಲಿ ಇತ್ತೀಚೆಗೆ ಸಾಕಷ್ಟು ಸಾಹಿತ್ಯ ಕೃತಿಗಳು ಹೊರಬರುತ್ತಿರುವುದು ಸಂತಸದ ಸಂಗತಿ. ಆದರೆ ಅವುಗಳಲ್ಲಿ ಸತ್ವಶಾಲಿ ಸಾಹಿತ್ಯ ಹಾಗೂ ಮುಖವಾಡದ ಸಾಹಿತ್ಯ ಎಂಬ ಎರಡು ವಿಧಗಳಿವೆ. ಅವರಲ್ಲಿ ನಕಲಿ ಸಾಹಿತಿಗಳು ಇದ್ದಾರೆ. ವಿದ್ವತ್ ಇಲ್ಲದವರೆಲ್ಲ ಕವಿಯೆಂದು ಸ್ವಯಂ ಘೋಷಿಸಿಕೊಳ್ಳುತ್ತಿರುವುದು ದುರಂತದ ಸಂಗತಿ.
ಡಾ. ಮಳಲಿ ವಸಂತಕುಮಾರ್, ವಿದ್ವಾಂಸ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

