ಮೈಸೂರು

ನಂಜನಗೂಡು ಗ್ರಾಮೆಕ್ಸ್ ಪೇಪರ್ ಕಾರ್ಖಾನೆಯಲ್ಲಿ ಬಾಯ್ಲರ್ ಟ್ಯೂಬ್ ಸಿಡಿದು ಕಾರ್ಮಿಕರಿಬ್ಬರ ಸಾವು

Published On :
ನಂಜನಗೂಡು: ಕಾರ್ಖಾನೆಯಲ್ಲಿ ಬಾಯ್ಲರ್ ಟ್ಯೂಬ್ ಸಿಡಿದು ಕರ್ತವ್ಯ ನಿರತರಾಗಿದ್ದ ಕಾರ್ಮಿಕರಿಬ್ಬರು ಮೃತಪಟ್ಟಿದ್ದು, ಮತೋರ್ವ ಕಾರ್ಮಿಕ ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ತಾಂಡವಪುರ ಕೈಗಾರಿಕಾ ಪ್ರದೇಶದಲ್ಲಿರುವ ಗ್ರಾಮೆಕ್ಸ್ ಪೇಪರ್ ಕಾರ್ಖಾನೆಯಲ್ಲಿ ಜರುಗಿದೆ.  ದಾವಣಗೆರೆ ನಿವಾಸಿ ಚಂದ್ರಶೇಖರ್ (45), ಮೈಸೂರು ತಾಲೂಕಿನ ಏಚಗಳ್ಳಿಯ ರವಿ (25) ಮೃತಪಟ್ಟ ದುರ್ದೈವಿಗಳಾಗಿದ್ದು, ಪಾಂಡವಪುರದ ಶಿವಕುಮಾರ್‌ಗೆ ಎಡಗೈಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿಫ್ಟ್ ಇನ್‌ಚಾರ್ಜ್ ಆಗಿ ಕಾರ್ಯನಿರ್ವಹಿಸುತ್ತಿರುವ ಚಂದ್ರಶೇಖರ್, ಮೊದಲನೇ ದರ್ಜೆ ಬಾಯ್ಲರ್ ಆಪರೇಟರ್ ರವಿ ಮತ್ತು 2ನೇ ದರ್ಜೆ ಆಪರೇಟರ್ ಶಿವಕುಮಾರ್ ಎಂದಿನಂತೆ ರಾತ್ರಿ ಪಾಳಿಗೆ ಬಂದು ಕಾರ್ಯನಿರ್ವಹಿಸುತ್ತಿದ್ದಾಗ ಮುಂಜಾನೆ 5.30ರ ಸಮಯದಲ್ಲಿ ಬಾಯ್ಲರ್ ಟ್ಯೂಬ್‌ನಲ್ಲಿ ಕೆಟ್ಟ ವಾಸನೆ ಬಂದು ಅದು ಸಿಡಿದ ಹಿನ್ನೆಲೆಯಲ್ಲಿ ಚಂದ್ರಶೇಖರ್, ರವಿ ಇಬ್ಬರೂ ದೇಹದ ಭಾಗಗಳು ಸುಟ್ಟು ಒದ್ದಾಡುತ್ತಿದ್ದಾಗ ಕಾರ್ಖಾನೆಯವರು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ನಂತರ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರು ಕಾರ್ಮಿಕರು ಮೃತಪಟ್ಟರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ದುರಂತದಲ್ಲಿ ಪವಾಡ ರೀತಿಯಲ್ಲಿ ಶಿವಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದು, ಎಡಗೈಗೆ ಗಾಯವಾಗಿದೆ. ಸ್ಥಳಕ್ಕೆ ಆಗಮಿಸಿದ ಗ್ರಾಮಾಂತರ ಸಬ್‌ಇನ್‌ಸ್ಪೆಕ್ಟರ್ ನಟರಾಜು ಭೇಟಿ ನೀಡಿ, ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಘಟನೆಯಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿವೆ. 
ಆಡಳಿತ ಮಂಡಳಿಯ ಬೇಜವಾಬ್ದಾರಿ: ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು ಗ್ರಾಮೆಕ್ಸ್ ಕಾರ್ಖಾನೆಯಲ್ಲಿ ಮಂಗಳವಾರ ಬಾಯ್ಲರ್ ಟ್ಯೂಬ್‌ನಲ್ಲಿ ಸಿಡಿದ ದುರಂತದಲ್ಲಿ ಮೃತಪಟ್ಟ ಇಬ್ಬರು ಕಾರ್ಮಿಕರಿಗೆ ಸಂತಾಪ ಸೂಚಿಸಿ, ಕಾರ್ಮಿಕರ ಸಾವಿಗೆ ಆಡಳಿತ ಮಂಡಳಿ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿದ್ದರು. ಅಲ್ಲದೇ, ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.