ಮೈಸೂರು

ಎಲ್ಲೆಲ್ಲೂ ಭಕ್ತರಿಂದ ರಾಮ ನಾಮ ಜಪ

Published On :
ಕ.ಪ್ರ.ವಾರ್ತೆ ಮೈಸೂರು  ಏ. 8
ಶ್ರೀರಾಮನವಮಿ ಅಂಗವಾಗಿ ವಿವಿಧ ಸಂಘಸಂಸ್ಥೆಗಳು ಹಾಗೂ ದೇವಸ್ಥಾನಗಳಲ್ಲಿ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಹಾಗೂ ಕೋಸಂಬರಿಯನ್ನು ಮಂಗಳವಾರ ವಿತರಿಸಲಾಯಿತು.
ವಿವಿಧ ಆಟೋ ನಿಲ್ದಾಣಗಳಲ್ಲಿ ಶ್ರೀರಾಮನ ಭಾವಚಿತ್ರವನ್ನು ಪೂಜಿಸಿದರಲ್ಲದೆ, ಜನರಿಗೆ ಮಜ್ಜಿಗೆ ಮತ್ತು ಪಾನಕ ವಿತರಿಸಿದ್ದು ಕಂಡುಬಂತು. ಅಂತೆಯೇ ದೇವರಾಜ ಅರಸು ರಸ್ತೆ, ಕೆ.ಆರ್ ವೃತ್ತ, ಚಾಮರಾಜ ಜೋಡಿ ರಸ್ತೆ, ನಂಜುಮಳಿಗೆ, ಅಗ್ರಹಾರ ಮುಂತಾದೆಡೆ ವ್ಯಾಪಾರಸ್ಥರು ಹಾಗೂ ವಿವಿಧ ಸಂಘಟನೆಗಳು ಮಜ್ಜಿಗೆ ಪಾನಕ ವಿತರಿಸಿದರು. ಸುಡು ಬಿಸಿಲಿನಿಂದ ಬಳಲಿದ್ದ ಜನರು ಈ ತಂಪು ಪಾನಿಯ ಪಡೆದು ತಮ್ಮ ದಾಹ ಪರಿಹರಿಸಿಕೊಳ್ಳುವಲ್ಲಿ ಮುಂದಾಗಿದ್ದರು.
ಶ್ರೀರಾಮನವಮಿ ಹನುಮಾನ್ ಗಡಿ ಸೇವಾ ಸಮಿತಿ: ಅಗ್ರಹಾರದ ವಿ.ವಿ. ಮಾರುಕಟ್ಟೆ ಬಳಿ ರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ನವಮಿ ಆಚರಿಸಲಾಯಿತು. ವಿಜಯಮಂತ್ರ, ಜಪಾನುಷ್ಠಾನ, ರಾಮರಕ್ಷ ಸೂತ್ರವನ್ನು ಪಠಿಸಿ ಸಾರ್ವಜನಿಕರು ಭಕ್ತಿ ಮೆರೆದರು.
ಕೃಷ್ಣಮೂರ್ತಿಪುರಂನ ಈ ದೇವಸ್ಥಾನದಲ್ಲಿ ರಾಮನವಮಿ ಮಹೋತ್ಸವದ ಅಂಗವಾಗಿ ಶ್ರೀರಾಮಾಯಣ ಪಾರಾಯಣ, ನವಗ್ರಹಜಪ, ರುದ್ರಾಭಿಷೇಕ, ಶ್ರೀರಾಮಸಹಸ್ರ ನಾಮಾರ್ಚನೆ, ಶ್ರೀರಾಮ ತಾರಕ ಹೋಮ, ಶ್ರೀ ರಾಮಪಟ್ಟಾಭಿಷೇಕ, ದೇವರ ಉತ್ಸವ, ಉಯ್ಯಾಲೋತ್ಸವ, ಶಯನೋತ್ಸವ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು.
ಶ್ರೀರಾಮ ದೇವಸ್ಥಾನ: ಅರಮನೆ ಉತ್ತರ ಕೋಟೆ ಬಾಗಿಲಿನಲ್ಲಿರುವ ಈ ಪುರಾತನ ಆಲಯದಲ್ಲಿ ಶ್ರೀರಾಮ ನವಮಿ ಮಹೋತ್ಸವದ ಪ್ರಯುಕ್ತ ನವಗ್ರಹ ಪೂಜೆ, ಜಪ ಹಾಗೂ ಸುಂದರಕಾಂಡ ಪಾರಾಯಣ, ಅಭಿಷೇಕ ಮತ್ತು ಅರ್ಚನೆ ನೆರವೇರಿತು. ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಗಾನವಿಶಾರದಾ ಬಿಡಾರಂ ಕೃಷ್ಣಪ್ಪನವರ ಮಂದಿರವೆಂದು ಹೆಸರಾಗಿರುವ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಶ್ರೀರಾಂಪೇಟೆಯ ವಿನೋಬಾ ರಸ್ತೆಯ ಶ್ರೀ ರಾಮಾಭ್ಯುದಯ ಸಭಾದಲ್ಲಿ ಶ್ರೀರಾಮೋತ್ಸವದ ಅಂಗವಾಗಿ ಆಯೋಜಿಸಿರುವ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ವಿಜಯಲಕ್ಷ್ಮೀ ಸುಬ್ರಹಣ್ಯ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಅಂಬಾಭವಾನಿ ದೇವಸ್ಥಾನ: ನರಸಿಂಹರಾಜ ಮೊಹಲ್ಲಾದ ಅಂಬಾಭವಾನಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀರಾಮ ನವಮಿ ವಿಶೇಷ ಪೂಜೆ ನಡೆಯಿತು. ವೀರಾಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ, ಹೂವಿನ ಅಲಂಕಾರ ನಡೆಯಿತು. ರಾಮತಾರಕ ಹೋಮ ಹಾಗೂ ರಾಮ ಭಜನೆ ನಡೆಯಿತು.
ಸುಬ್ಬರಾಯನಕೆರೆಯ ರಾಘವೇಂದ್ರ ಸ್ವಾಮಿಗಳವರ ಬೃಂದಾವನ ಸನ್ನಿಧಾನ, ದೇವರಾಜ ಮೊಹಲ್ಲಾದ ಆರ್ಯಸಮಾಜ, ವಿದ್ಯಾರಣ್ಯಪುರಂನ ರಾಮಲಿಂಗೇಶ್ವರ ದೇವಸ್ಥಾನ, ಅಗ್ರಹಾರದ ಪಾತಾಳ ಆಂಜನೇಯಸ್ವಾಮಿ ದೇವಸ್ಥಾನ, ಬೋಗಾದಿಯ ಎರಡನೇ ಹಂತದಲ್ಲಿರುವ ಶ್ರೀ ಯಾಜ್ಞವಲ್ಕ್ಯ ಶುಕ್ಲ ಯಜುರ್ವೇದ ಮಹಾಸಭಾ, ಹೂಟಗಳ್ಳಿಯ ಗಾಯತ್ರಿ ವಿಪ್ರ ಸಂಘ, ಜೆ.ಪಿ. ನಗರದ, ಕೃಷ್ಣಮೂರ್ತಿಪುರಂ, ಚಾಮುಂಡಿಪುರಂ, ಅಶೋಕಪುರಂ, ಒಂಟಿಕೊಪ್ಪಲ್, ಕನ್ನೇಗೌಡನ ಕೊಪ್ಪಲು, ಪಡುವಾರಹಳ್ಳಿ, ಕುಂಬಾರ ಕೊಪ್ಪಲು ಮುಂತಾದೆಡೆ ಇರುವ ಶ್ರೀರಾಮ ಮಂದಿರಗಳಲ್ಲಿ ರಾಮನಾಮ ಜಪಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.